ಚಿತ್ರದುರ್ಗ ಅ. 19
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವು ದಲಿತರು, ರೈತರು, ಮಹಿಳೆಯರು ಹಾಗೂ ಯುವಕರ ವಿರೋಧಿ ಯಾಗಿ ಆಡಳಿತ ನಡೆಸುತ್ತಿದೆ ಕಳೆದ ಮೂರು ದಿನಗಳಿಂದ ಶಾಸನಸಭೆಯ ಒಳಗೂ ಮತ್ತು ಹೊರಗೂ ಹೋರಾಟ ನಡೆಯುತ್ತಿದೆ ಎಂದು ವಿಭಾಗ ಸಹ ಪ್ರಚಾರಿ ಮೇಘರಾಜ್ ತಿಳಿಸಿದರು.
ಭಾರತೀಯ ಜನತಾ ಪಾರ್ಟಿಯವತಿಯಿಂದ ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅನುದಾನ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ, ಪ್ರಸ್ತುತ ರಾಜ್ಯದಲ್ಲಿ ಅಧಿಕಾರ ದಲ್ಲಿರುವ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಾಗೂ ಸಂಪುಟ ಪುನರ್ ರಚನೆಯ ವೈಫಲ್ಯವನ್ನು ಖಂಡಿಸಿ ಚಳ್ಳಕೆರೆ ಮಂಡಲದ ಅಡಿಯಲ್ಲಿ ನಡೆದ ಮೂರನೇ ದಿನದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, . ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಡಲಾಗಿದ್ದ ಶೇಕಡಾ 18 ಹಾಗೂ 24ರಷ್ಟು ನಿಧಿಯ ಪೈಕಿ, ಸುಮಾರು 35,000 ಕೋಟಿಗೂ ಹೆಚ್ಚಿನ ಹಣವನ್ನು ಅವರ ಅಭ್ಯುದಯಕ್ಕೆ ಬಳಸದೆ, ನೌಕರರ ಸಂಬಳ ಸೇರಿದಂತೆ ಇತರ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ರೂಪಾಯಿಗಳ ಬೃಹತ್ ಅಕ್ರಮ ನಡೆದಿದೆ. ದೆಹಲಿ ಹೈಕಮಾಂಡ್‍ಗೆ ಹಾಗೂ ತೆಲಂಗಾಣ, ಆಂಧ್ರಪ್ರದೇಶದ ಚುನಾವಣೆಗಳಿಗೆ ಕರ್ನಾಟಕವನ್ನು “ಎಟಿಎಂ ಮಿಷನ್” ನಂತೆ ಬಳಸಿಕೊಳ್ಳಲಾಗುತ್ತಿದೆ. ನಿಗಮದ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಹಾಗೂ ರಾಜ್ಯದ ಪರಿಶಿಷ್ಟ ಪಂಗಡದ ಸಮುದಾಯದ ಕ್ಷಮೆಯಾಚಿಸಬೇಕು ಕಾಂಗ್ರೆಸ್ ಸರ್ಕಾರದ ದುರಾಡಳಿತ, ಲೂಟಿ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಸಚಿವ ನಾಗೇಂದ್ರ ಅವರ ರಾಜೀನಾಮೆ ಬರುವವರೆಗೂ ಮತ್ತು ಸರ್ಕಾರ ತಕ್ಕ ಉತ್ತರ ನೀಡುವವರೆಗೂ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಹೋರಾಟವನ್ನು ಮುಂದುವರಿಸಲಿದೆ ಎಂದು ನಾಯಕರು ಎಚ್ಚರಿಸಿದರು.
ರಾಜ್ಯದಲ್ಲಿ ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭೀಕರ ಬರದ ಪರಿಸ್ಥಿತಿ ಇದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ಹಿತವನ್ನು ಬಲಿಕೊಟ್ಟು, ತಮಿಳುನಾಡಿಗೆ ರಾತ್ರೋ ರಾತ್ರಿ ನೀರು ಹರಿಸಿರುವುದು ರೈತ ವಿರೋಧಿ ಧೋರಣೆಯಾಗಿದೆ. ಚಿತ್ರದುರ್ಗವನ್ನು ಬರಪೀಡಿತ ಜಿಲ್ಲೆ ಎಂದು ತಕ್ಷಣ ಘೋಷಿಸಬೇಕು.ಗುಟ್ಕಾ ನಿಷೇಧದ ನೆಪದಲ್ಲಿ ಅಡಿಕೆ ಬೆಳೆಗಾರರನ್ನು ಹಾಗೂ ಕಂಪನಿಗಳನ್ನು ಬೆದರಿಸಿ ಹಣ ಲೂಟಿ ಮಾಡಲು ಸರ್ಕಾರ ಸಂಚು ರೂಪಿಸಿದೆ ಮಹಿಳೆಯರಿಗೆ ತಿಂಗಳಿಗೆ 2,000 ನೀಡುವ ಗೃಹಲಕ್ಷ್ಮಿ ಯೋಜನೆಯಡಿ ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಸುಮಾರು 5,000 ಕೋಟಿ ರೂಪಾಯಿ ಹಣವನ್ನು ಫಲಾನುಭವಿಗಳಿಗೆ ನೀಡದೆ ವಂಚಿಸಲಾಗಿದೆ. ಕೆಪಿಎಸ್‍ಸಿ ಪರೀಕ್ಷೆ ಹಾಗೂ ನೇಮಕಾತಿಗಳಲ್ಲಿ ಭ್ರಷ್ಟಾಚಾರ ನಡೆದಿದ್ದು, ಯುವಕರ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.
ಮಾಜಿ ಶಾಸಕ ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳು ಹಾಗೂ ಚುನಾವಣೆಗಳಿಗೆ ಹಣ ಖರ್ಚು ಮಾಡುತ್ತಿದೆಯೇ ಹೊರತು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತಿಲ್ಲ ರಾಜ್ಯದಲ್ಲಿ ಹಿರಿಯ ನಾಗರಿಕರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಿದ್ದರೂ, ಅವರ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನು ಕೈಗೊಂಡಿಲ್ಲ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಕಿಡಿಕಾರಿದ ಅವರು. ಮುಂದುವರಿದು, ಈ ಹಿಂದಿನ ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗಕ್ಕೆ ಮೀಸಲಾತಿ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಿ ಅನುಕೂಲ ಮಾಡಿಕೊಟ್ಟಿತ್ತು. ಆದರೆ ಹಾಲಿ ಆಡಳಿತಾರೂಢ ಸರ್ಕಾರವು ಬವರತ್ತ ಗಮನ ಹರಿಸುತ್ತಿಲ್ಲ. ಜನಸಾಮಾನ್ಯರ ಹಾಗೂ ಎಸ್‍ಸಿ/ಎಸ್‍ಟಿ ಸಮುದಾಯದವರ ಕುಂದುಕೊರತೆಗಳನ್ನು ಆಲಿಸಲು ಜನಪ್ರತಿನಿಧಿಗಳು ಮುಂದಾ ಗುತ್ತಿಲ್ಲ ಎಂದು ದೂರಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ತೀವ್ರ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣವೇ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‍ನಲ್ಲಿ ಹಣ ಮೀಸಲಿಟ್ಟು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಸರ್ಕಾರ ಮಾಡಬೇಕು ಚಿತ್ರದುರ್ಗ ಜಿಲ್ಲೆಯಲ್ಲಿ ಕನಿಷ್ಠ ಕುಡಿಯುವ ನೀರಿಗೂ ಅಭಾವ ಎದುರಾಗಿದ್ದು, ಮಳೆಯಿಲ್ಲದೆ ಜನರು ಸಂಕಷ್ಟದಲ್ಲಿದ್ದಾರೆ. ಹೀಗಿದ್ದರೂ ಜಿಲ್ಲೆಯ ಸಚಿವರು ಹಾಗೂ ಶಾಸಕರು ಬರಗಾಲ ಘೋಷಣೆ ಮಾಡುವ ಕುರಿತು ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತಿಲ್ಲ. ಬಜೆಟ್‍ನಲ್ಲಿ ಸೂಕ್ತ ಅನುದಾನ ಮೀಸಲಿಟ್ಟು ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಿದರೆ ಮಾತ್ರ ಅಂತರ್ಜಲ ಮಟ್ಟ ಹೆಚ್ಚಿ, ರೈತರಿಗೆ ಹಾಗೂ ಜಾನುವಾರುಗಳಿಗೆ ಅನುಕೂಲವಾಗಲಿದೆ. ಇದನ್ನು ಬಿಟ್ಟು ಬರಿ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಅಥವಾ ಅನುದಾನದ ಕಡೆ ಬೆರಳು ತೋರಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ. ಬರಪೀಡಿತ ಚಿತ್ರದುರ್ಗ ಜಿಲ್ಲೆಯ ರೈತರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಬರಗಾಲ ಘೋಷಣೆ ಮಾಡಬೇಕು ಮತ್ತು ಬಾಕಿ ಇರುವ ಜಿಲ್ಲೆಯ ಅಭಿವೃದ್ಧಿ ಕಾಮಗಾರಿ ಗಳನ್ನು ತಕ್ಷಣವೇ ಪೂರ್ಣಗೊಳಿಸಬೇಕು, ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಸೂಕ್ತ ಪಾಠ ಕಲಿಸಲಿದ್ದಾರೆ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.
ಚಳ್ಳಕೆರೆ ಮಂಡಲ ಅಧ್ಯಕ್ಷ ಸುರೇಶ್ ಮಾತನಾಡಿ, ಎಸ್‍ಸಿ/ಎಸ್‍ಟಿ ಸಮುದಾಯದ ಅಭಿವೃದ್ಧಿಗೆ, ಮನೆ, ಕೊಳವೆ ಬಾವಿ, ರಸ್ತೆ ಹಾಗೂ ಶಿಕ್ಷಣಕ್ಕೆ ಬಳಕೆಯಾಗ ಬೇಕಿದ್ದ ಎಸ್‍ಸಿಪಿ/ಟಿಎಸ್‍ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಹಾಗೂ ಸಚಿವರು ತಮ್ಮ ಪಕ್ಷದ ಚುನಾ ವಣಾ ವೆಚ್ಚಕ್ಕೆ ದುರ್ಬಳಕೆ ಮಾಡಿಕೊಂಡಿದ್ದಾರೆ ಅರ್ಹ ಬಡವರಿಗೆ ತಲುಪಬೇಕಾದ ಸೌಲಭ್ಯಗಳನ್ನು ನೀಡದೆ, ಶ್ರೀಮಂತರಿಗೂ ಗ್ಯಾರಂಟಿ ಹಂಚಿ ಬೊಕ್ಕಸಕ್ಕೆ ಹೊರೆ ಮಾಡಲಾಗಿದೆ ಎಂದು ಆರೋಪಿಸಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸಬೇಕು, ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಬಿ. ನಾಗೇಂದ್ರ ಅವರ ರಾಜೀನಾಮೆ ಯನ್ನು ಪಡೆದು ಸಂಪುಟದಿಂದ ಹೊರಗಿಡ ಬೇಕು ಹಾಗೂ ಬಡವರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಮುಂಬರುವ ಎಲ್ಲಾ ಸ್ಥಳೀಯ ಹಾಗೂ ರಾಜ್ಯ ಮಟ್ಟದ ಚುನಾವಣೆಗಳಲ್ಲಿ ಜನರೇ ಈ ಭ್ರಷ್ಟ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಮಾರ್ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್, ಮೋಹನ್ ಕುಮಾರ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಮದಾಸ್, ಚಳ್ಳಕೆರೆ ಮಂಡಲದ ಪ್ರಧಾನ ಕಾರ್ಯದರ್ಶಿ ಓಬಳೇಶ್, ಸುರೇಶ್, ಮುಖಂಡರಾದ ಲಿಂಗರಾಜು, ಬಂಡೆ ರಂಗಪ್ಪ, ಶಶೀಧರ್ ರೆಡ್ಡಿ, ಪರಶುರಾಮ್, ಮಂಡಿಸಿನಪ್ಪ, ಜಗದಂಭ, ಲಕ್ಷ್ಮೀ, ಶಾಂತಮ್ಮ, ದೇವರಹಳ್ಳಿ ಶೋಭರಾಜ್ ದೋರೆ ನಾಗರಾಜ್, ಶ್ರೀನಿವಾಸ್, ರಂಗಸ್ವಾಮಿ ಹಾಗೂ ಚಿತ್ರದುರ್ಗ ಮತ್ತು ಚಳ್ಳಕೆರೆಯ ಪ್ರಮುಖ ಮುಖಂಡರ ಉಪಸ್ಥಿತರಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j