ಚಿತ್ರದುರ್ಗ, ಜು 23
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ವಿದ್ಯಾರ್ಥಿಗಳು ಪದವಿಯ ಜೊತೆಗೆ ಸಂವಹನ ಕೌಶಲ್ಯ, ನಾಯಕತ್ವ ಗುಣಗಳು ಮತ್ತು ಉದ್ಯೋಗಕ್ಕೆ ಅಗತ್ಯವಾದ ಸಾಮಥ್ರ್ಯಗಳನ್ನು ಬೆಳೆಸಿಕೊಳ್ಳುವಂತೆ ಯುವ ಜನತೆಗೆ ಚಿತ್ರದುರ್ಗ ರೋಟರಿ ಟ್ರಸ್ಟ್ನ ಕಾರ್ಯದರ್ಶಿ ರೊ. ಪಿಡಿಜಿ ಮಧುಪ್ರಸಾದ್. ಕೆ ಕರೆ ನೀಡಿದರು.
ಚಿತ್ರದುರ್ಗ ರೋಟರಿ ಟ್ರಸ್ಟ್ ಹಾಗೂ ಯುವಜಯ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿ ಸೇವಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪದವಿ ವಿದ್ಯಾರ್ಥಿಗಳ ಭವಿಷ್ಯದ ವೃತ್ತಿ ಜೀವನಕ್ಕೆ ಮಾರ್ಗದರ್ಶನ ನೀಡುವ ಉದ್ದೇಶದಿಂದ “ಕೆರಿಯರ್ ಕನೆಕ್ಟ್” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆವರು, ರೋಟರಿ ಟ್ರಸ್ಟ್ ಶಿಕ್ಷಣ ಹಾಗೂ ಯುವಜನರ ಸಬಲೀಕರಣಕ್ಕಾಗಿ ನಿರಂತರವಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಿದರು.
ಯುವಜಯ ಫೌಂಡೇಶನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ನಾಗನೂರು ಮಾತನಾಡಿ, ಇಂದಿನ ಉದ್ಯೋಗ ಕ್ಷೇತ್ರದ ಅಗತ್ಯತೆಗಳು, ಹೊಸ ಅವಕಾಶಗಳು ಹಾಗೂ ಕೌಶಲ್ಯಾಧಾರಿತ ಶಿಕ್ಷಣದ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮಥ್ರ್ಯಕ್ಕೆ ಅನುಗುಣವಾಗಿ ವೃತ್ತಿ ಆಯ್ಕೆ ಮಾಡಿಕೊಂಡು ನಿರಂತರ ಕಲಿಕೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ರೋಟರಿ ಕ್ಲಬ್ ಆಫ್ ಚಿತ್ರದುರ್ಗದ ಅಧ್ಯಕ್ಷ ರೊ. ಯೋಗೀಶ್ ಸಹ್ಯಾದ್ರಿ, ಅಧ್ಯಕ್ಷೀಯ ನುಡಿಗಳಲ್ಲಿ ಇಂತಹ ಕಾರ್ಯಕ್ರಮಗಳು ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳ ನಡುವಿನ ಮಾಹಿತಿ ಅಂತರವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತವೆ. ಶಿಕ್ಷಣದೊಂದಿಗೆ ವ್ಯಕ್ತಿತ್ವ ವಿಕಸನ, ಇಂಗ್ಲಿಷ್ ಸಂವಹನ ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಂಡರೆ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಉತ್ತಮ ಸಾಧನೆ ಮಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವಜಯ ಫೌಂಡೇಶನ್ ತರಬೇತಿದಾರರಾದ ಕಾರ್ತಿಕ ಮಾತನಾಡಿ, ಈ ಕಾರ್ಯಕ್ರಮದಲ್ಲಿ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾ ಅವಕಾಶಗಳು, ಕೌಶಲ್ಯಾಭಿವೃದ್ಧಿ, ವ್ಯಕ್ತಿತ್ವ ವಿಕಸನ ಹಾಗೂ ವೃತ್ತಿ ಯೋಜನೆ ಕುರಿತು 03 ತಿಂಗಳ ಕಾಲ ಮಾರ್ಗ ದರ್ಶನ ಪಡೆಯಲಿದ್ದಾರೆ. ಯುವಜನರಿಗೆ ಸರಿಯಾದ ಸಮಯದಲ್ಲಿ ಸೂಕ್ತ ದಿಕ್ಕು ತೋರಿಸುವ ಇಂತಹ ಕಾರ್ಯ ಕ್ರಮಗಳು ಅವರ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರೊ. ಮೈಲೇಶ್ ಕುಮಾರ್. ಎ, ರೊ. ವಿಶ್ವನಾಥ್. ಜಿ.ಎ, ರೊ. ಮಾಧುರಿ ಮಧುಪ್ರಸಾದ್, ರೊ. ಮೂರ್ತಿ. ಎಂ.ವಿ, ಹಾಗೂ ಪದವಿ ವಿದ್ಯಾರ್ಥಿಗಳು ಭಾಗವಹಿಸಿ, ತಜ್ಞರೊಂದಿಗೆ ಸಂವಾದ ನಡೆಸಿ ತಮ್ಮ ವೃತ್ತಿ ಭವಿಷ್ಯಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದರು. ಚಿತ್ರದುರ್ಗ ರೋಟರಿ ಟ್ರಸ್ಟ್ ಮತ್ತು ಯುವಜಯ ಫೌಂಡೇಶನ್ ವತಿಯಿಂದ ಇಂತಹ ಯುವ ಸಬಲೀಕರಣ ಕಾರ್ಯಕ್ರಮಗಳ ಹೊಸ ಬ್ಯಾಚ್ಗಳನ್ನು ಮುಂದಿನ ದಿನಗಳಲ್ಲಿಯೂ ಆಯೋಜಿಸಲಾಗುವುದು ಎಂದು ಸಂಘಟಕರು ತಿಳಿಸಿದರು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j