ಚಿತ್ರದುರ್ಗ ಜು. 25
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನೀಟ್ (ಓಇಇಖಿ-Uಉ) ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಹಾಗೂ ವಿದ್ಯಾರ್ಥಿಗಳ ಸತತ ಪ್ರತಿಭಟನೆಗೆ ಮಣಿದಿರುವ ಕೇಂದ್ರ ಸರ್ಕಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಇದನ್ನು ಕಾಂಗ್ರೆಸ್ ಓಬಿಸಿ ಜಿಲ್ಲಾಧ್ಯಕ್ಷ ಎನ್.ಡಿ. ಕುಮಾರ್ ಸ್ವಾಗತಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶದ ಅತ್ಯುನ್ನತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ (ಓಇಇಖಿ) ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅದರಲ್ಲಿ ನಡೆದಿರುವ ವ್ಯವಸ್ಥಿತ ಭ್ರಷ್ಟಾಚಾರ ಕೇವಲ ಒಂದು ಪರೀಕ್ಷೆಯ ಹಗರಣವಲ್ಲ. ಇದು ಈ ದೇಶದ ಲಕ್ಷಾಂತರ ಬಡ, ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿ ಗಳ ಕಣ್ಣೀರು ಮತ್ತು ಅವರ ಭವಿಷ್ಯದ ಕೊಲೆಯಾಗಿದೆ. ವ್ಯವಸ್ಥೆಯ ತಳಮಟ್ಟದ ಭ್ರಷ್ಟಾಚಾರಕ್ಕೆ ಇಡೀ ದೇಶದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯೇ ಬಲಿಯಾಗುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಗಲಿರುಳು ಕಷ್ಟಪಟ್ಟು, ಹೆತ್ತವರ ರಕ್ತವನ್ನು ಬೆವರಾಗಿಸಿ, ಲಕ್ಷಾಂತರ ರೂಪಾಯಿ ಸಾಲ ಮಾಡಿ ಕೋಚಿಂಗ್ ಪಡೆದು ಪರೀಕ್ಷೆ ಬರೆದ ಪ್ರಾಮಾಣಿಕ ವಿದ್ಯಾರ್ಥಿಗಳು ಇಂದು ಬೀದಿಗೆ ಬಿದ್ದಿದ್ದಾರೆ. ಹಣವಿದ್ದವರಿಗೆ ಮಾತ್ರ ಸೀಟು, ಪ್ರತಿಭೆಯಿದ್ದವರಿಗೆ ಶೂನ್ಯ ಎನ್ನುವ ಸದ್ಯದ ಪರಿಸ್ಥಿತಿ ದೇಶದ ಶಿಕ್ಷಣ ವ್ಯವಸ್ಥೆಗೆ ಅಂಟಿದ ಶಾಪ. ಪರೀಕ್ಷೆ ಬರೆಯುವ ಯುವಶಕ್ತಿಯ ಮನಸ್ಸಿನಲ್ಲಿ ಸದ್ಯದ ವ್ಯವಸ್ಥೆಯ ಮೇಲಿದ್ದ ನಂಬಿಕೆಯೇ ಸತ್ತುಹೋಗಿದೆ. ಈ ವಿದ್ಯಾರ್ಥಿಗಳ ಆಕ್ರೋಶ ಮತ್ತು ಕಣ್ಣೀರು ದೇಶವನ್ನು ಸುಟ್ಟುಹಾಕುವ ಮುನ್ನ ಆಡಳಿತಗಾರರು ಎಚ್ಚೆತ್ತುಕೊಳ್ಳಬೇಕು. ದೇಶದಲ್ಲಿಂದು ಶಿಕ್ಷಣ ಮತ್ತು ಉದ್ಯೋಗಗಳು ವ್ಯಾಪಾರೀಕರಣದ ಸಿಲುಕಿವೆ. ಕಪಿಮುಷ್ಟಿಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಮಾರಾಟ ಮಾಡುವ ಜಾಲಗಳು ದೇಶದ ಭವಿಷ್ಯವನ್ನು ಹರಾಜಿಗಿಟ್ಟಿವೆ. ಉನ್ನತ ಮಟ್ಟದ ತನಿಖಾ ಸಂಸ್ಥೆಗಳು ಕೇವಲ ಕಣ್ಣೂರೆಸುವ ತಂತ್ರ ಮಾಡುತ್ತಿವೆಯೇ ವಿನಃ ಸೂತ್ರಧಾರಿಗಳನ್ನು ಜೈಲಿಗಟ್ಟುತ್ತಿಲ್ಲ. ಇದು ಪ್ರಜಾಪ್ರಭುತ್ವದ ಅತಿ ದೊಡ್ಡ ದುರಂತ.
ಅರ್ಹತೆ ಇಲ್ಲದವರು ವೈದ್ಯರಾದರೆ ಈ ದೇಶದ ಜನರ ಆರೋಗ್ಯ ಪರಿಸ್ಥಿತಿ ಏನಾಗಬಹುದು ಎಂದು ಊಹಿಸಿದರೆ ಮೈ ನಡುಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾ ನಾವು ಕೇವಲ ಮೇಲ್ನೋಟದ ತನಿಖೆಯನ್ನು ಒಪ್ಪುವುದಿಲ್ಲ. ನೀಟ್ ಪರೀಕ್ಷೆಯ ಸಂಪೂರ್ಣ ಆಡಳಿತ ಮಂಡಳಿಯನ್ನು ಕಿತ್ತೊಗೆಯಬೇಕು. ಪರೀಕ್ಷಾ ಭಾಗಿಯಾದವರ ವಂಚನೆಯಲ್ಲಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ದೇಶದ್ರೋಹದ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು.
ಇದು ಲಕ್ಷಾಂತರ ವಿದ್ಯಾರ್ಥಿಗಳ ಹಕ್ಕಿನ ಹೋರಾಟ. ಇದನ್ನು ದಮನ ಮಾಡಲು ಹೊರಟರೆ ದೇಶಾದ್ಯಂತ ವಿದ್ಯಾರ್ಥಿ ಯುವಶಕ್ತಿ ದೆಹಲಿಯ ಕೆಂಪುಕೋಟೆಯವರೆಗೆ ಕ್ರಾಂತಿಯ ಕಿಡಿಯನ್ನು ಹಬ್ಬಿಸಲಿದೆ ಎಂದರು ಯಾವುದೇ ವಿದ್ಯಾರ್ಥಿ ಧೃತಿಗೆಡಬಾರದು. ಆತ್ಮಹತ್ಯೆಯಂತಹ ಕಠಿಣ ನಿರ್ಧಾರಗಳಿಗೆ ಕೈಹಾಕಬಾರದು. ನಿಮ್ಮ ಪ್ರತಿಭೆಯನ್ನು ಕದ್ದ ಚೋರರ ವಿರುದ್ಧ ನಾವು ಹೋರಾಡಬೇಕಿದೆಯೇ ಹೊರತು ಜೀವ ಕಳೆದುಕೊಳ್ಳುವುದಲ್ಲ. ಈ ಅನ್ಯಾಯದ ವಿರುದ್ಧ ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕಾಗಿದೆ. ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಕಿವಿಮಾತು ಹೇಳಿ ನೀಟ್ ಹಗರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಬೇಕು, ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ನಿರಪೇಕ್ಷ ತನಿಖೆಯಾಗಬೇಕು. ತಪ್ಪಿತಸ್ಥ ಶಿಕ್ಷಣ ಮಾಫಿಯಾಗಳಿಗೆ ಗಲ್ಲು ಶಿಕ್ಷೆಯಂತಹ ಕಠಿಣ ಕಾನೂನು ಜಾರಿಗೆ ಬರಬೇಕು. ನೊಂದ ಎಲ್ಲಾ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ತಕ್ಷಣವೇ ಪರ್ಯಾಯ ನ್ಯಾಯ ಒದಗಿಸಬೇಕು.
“ದೇಶದ ಯುವಕರ ಭವಿಷ್ಯದ ಜೊತೆ ಆಟವಾಡುವ ಯಾವುದೇ ಶಕ್ತಿಗಳಿದ್ದರೂ, ಅವರ ವಿರುದ್ಧ ನಿರಂತರ ಹೋರಾಟದ ಕ್ರಾಂತಿಕಾರಿ ಕಹಳೆಯನ್ನು ಮೊಳಗಿಸುತ್ತೇನೆ. ಯುವಶಕ್ತಿಯ ಹೋರಾಟಕ್ಕೆ ನನ್ನ ಪೂರ್ಣ ಬೆಂಬಲವಿದೆ” ಎಂದು ಕಾಂಗ್ರೆಸ್ ಓಬಿಸಿ ಜಿಲ್ಲಾಧ್ಯಕ್ಷ ಎನ್.ಡಿ. ಕುಮಾರ್ ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j