ಚಿತ್ರದುರ್ಗ ಜು. 28
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಉತ್ತಮ ಮಳೆ, ಬೆಳೆ ಮತ್ತು ಜನ-ಜಾನುವಾರುಗಳ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ ಜನತೆ ‘ಹೋಳಿಗೆಮ್ಮ’ ಹಬ್ಬವನ್ನು ಆಚರಿಸಿ, ಊರಮ್ಮಳನ್ನು ತೃಪ್ತಿಪಡಿಸಿದ್ದಾರೆ.

ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಮೊದಲನೇ ತಿರುವಿನಲ್ಲಿನ ಅಂಜನೇಯ ದೇವಾಲಯದ ಬಳಿ ಪ್ರತಿ ವರ್ಷದಂತೆ ಈ ಸಾರಿಯೂ ಸಹಾ ಹೋಳಿಗೆಮ್ಮನನ್ನು ಆಚರಣೆ ಮಾಡಲಾಯಿತು ಇದು ವಿಶಿಷ್ಟವಾದ ಆಚರಣೆ. ಸಂಪ್ರದಾಯ. ಈ ಹಬ್ಬದ ಆಚರಣೆಯಿಂದಾಗಿಯೇ ತಾಲೂಕಿನಲ್ಲಿ ಯಾವುದೇ ಭೀಕರ ರೋಗ-ರುಜಿನಗಳು, ಪ್ರಕೃತಿ ವಿಕೋಪಗಳು ನಡೆಯುತ್ತಿಲ್ಲ. ಆ ಕಾರಣ ನಾವೆಲ್ಲರೂ ಜಾತ್ಯತೀತರಾಗಿ ಈ ಹಬ್ಬವನ್ನು ಆಚರಿಸುತ್ತೇವೆ ಎನ್ನುತ್ತಾರೆ ಇಲ್ಲಿಯ ಹೆಂಗಳೆಯರು.
ಗೃಹಿಣಿಯರು ಶ್ರದ್ಧೆ, ಭಕ್ತಿ ಮತ್ತು ಮಡಿವಂತಿಕೆಯಿಂದ ಹೂರಣ ಮಾಡಿ, ಹೋಳಿಗೆ ಬೇಯಿಸಿ, ನಾನಾ ರೀತಿ ಅಡುಗೆಗಳನ್ನು ಸಿದ್ಧಪಡಿಸುತ್ತಾರೆ. ಆ ನಂತರ ಮಡಿಕೆಯಲ್ಲಿ ಅವುಗಳೆಲ್ಲವನ್ನೂ ಬೇವಿನ ಎಲೆಯ ಜೊತೆಯಲ್ಲಿ ಇರಿಸಿ, ಪೂಜೆ ಮಾಡುತ್ತಾರೆ. ನಗರದ ಹೊಳಲ್ಕೆರೆ ರಸ್ತೆಯ ಮೊದಲನೇ ತಿರುವಿನಲ್ಲಿನ ಅಂಜನೇಯ ದೇವಾಲಯದ ಬಳಿ ನಿರ್ಮಾಣ ಮಾಡಿದ ಅಮ್ಮನ ಪ್ರತಿಮೆ ಮುಂದೆ ಮಡಿಕೆಯನ್ನು ಇರಿಸಿ, ದೇವಿಗೆ ನಮಸ್ಕಾರ ಮಾಡಿ, ಪ್ರಾರ್ಥನೆ ಸಲ್ಲಿಸಿ, ನೈವೇದ್ಯ ಮಾಡುವುದು ವಾಡಿಕೆ.ಈ ಆಚರಣೆಯ ಹಿನ್ನೆಲೆ-ಇತಿಹಾಸ ಇಲ್ಲಿನ ಜನರಿಗೆ ತಿಳಿದಿಲ್ಲ. ಆದರೂ ಈ ಹಬ್ಬದ ಆಚರಣೆ ತಪ್ಪಿಲ್ಲ, ಯಾರೂ ಕೈ ಬಿಟ್ಟಿಲ್ಲ. ಪ್ರತೀ ವರ್ಷ ತಪ್ಪದೇ ನಿಗದಿತ ದಿನದಂದು, ನಕ್ಷತ್ರ-ತಿಥಿ ಆಧರಿಸಿ ಆಚರಣೆ ಆಗುತ್ತಿದೆ. ಜು 28ರ ಇಂದು ಮಂಗಳವಾರ ಹೋಳಿಗೆಯಮ್ಮ ಹಬ್ಬವನ್ನು ಅದ್ಧೂರಿಯಾಗಿ ಮನೆ ಮನೆಯಲ್ಲೂ ಆಚರಣೆ ಮಾಡಿದ್ದಾರೆ.
ಈ ಆಚರಣೆಯನ್ನು ನಮ್ಮ ತಾತ ನಂತರ ನಮ್ಮ ತಂದೆಯವರು ಆಚರಿಸಿಕೊಂಡು ಬಂದಿದ್ದರು ಈಗ ನಾವುಗಳು ಅದನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ, ಇಂದು ಅಮ್ಮನವರನ್ನು ಹೊಳಲ್ಕೆರೆಯ ಮಾರಮ್ಮನ ಗುಡಿಯಿಂದ ತಂದು ನಂತರ ಸುತ್ತಾ-ಮುತ್ತಲಿನ ಜನತೆ ಶ್ರದ್ಧೆ, ಭಕ್ತಿ ಮತ್ತು ಮಡಿವಂತಿಕೆಯಿಂದ ಹೂರಣ ಮಾಡಿ, ಹೋಳಿಗೆ ಬೇಯಿಸಿ, ಇದರೊಂದಿಗೆ ಬಾಳೆ ಹಣ್ಣು, ಹೂ, ಉದಿನ ಕಡ್ಡಿಯನ್ನು ಅಡಿಕೆ ಎಲೆ ಅಥವಾ ಮುತ್ತಗದ ಎಲೆಯಲ್ಲಿ ತಂದು ತಾಯಿಯ ಮುಂದೆ ಇರಿಸಿ ಪೂಜೆಯನ್ನು ನೇರವೇರಿಸಿ ಸಂಜೆ ನಮ್ಮ ಗಡಿಯನ್ನು ದಾಟಿಸಿ ಸಂತೇಪೇಟೆ ವೃತ್ತದಲ್ಲಿ ಇರಿಸಲಾಗುವುದು. ಇಲ್ಲಿಗೆ ಬರುವ ಗೃಹಿಣಿಯರು ನಮ್ಮ ಮನೆಯನ್ನು ಕಾಪಾಡು, ನಮ್ಮಲ್ಲಿ ಯಾರಿಗೂ ಸಹಾ ಯಾವುದೇ ರೀತಿಯ ರೋಗ ರುಜನ ಕಾಡದಂತೆ ರಕ್ಷಿಸು ಎಂದು ಅಮ್ಮನವರಲ್ಲಿ ಪ್ರಾರ್ಥಿಸುತ್ತಾರೆ ಎಂದು ಬಡಾವಣೆಯ ಹಿರಿಯರಾದ ಬಸವರಾಜಪ್ಪ ತಿಳಿಸಿದ್ದಾರೆ.