ಬಹುಭಾಷಾ ತಾರೆ, ಬಾಲಿವುಡ್‌ನ ‘ಲಗಾನ್’ ಹಾಗೂ ‘ಘಜಿನಿ’ ಮುಂತಾದ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿನ ತಮ್ಮ ಸ್ಮರಣೀಯ ಪಾತ್ರಗಳಿಗಾಗಿ ಜನಪ್ರಿಯರಾಗಿದ್ದ ಹಿರಿಯ ನಟ ಪ್ರದೀಪ್ ರಾವತ್ ಅವರು ತಮ್ಮ 74ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ವರದಿಗಳ ಪ್ರಕಾರ, ಅವರು ಕಳೆದ ಕೆಲವು ಸಮಯದಿಂದ ಕ್ಯಾನ್ಸರ್ ಮಹಾಮಾರಿಯ ವಿರುದ್ಧ ಹೋರಾಡುತ್ತಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರ ವಿಕ್ರಮಾದಿತ್ಯ ಅವರನ್ನು ಅಗಲಿದ್ದಾರೆ. ಪ್ರದೀಪ್ ಅವರ ಜೊತೆ ‘ಲಗಾನ್’ ಚಿತ್ರದಲ್ಲಿ ಬಣ್ಣ ಹಚ್ಚಿದ್ದ ಸಹ-ನಟ ಯಶ್‌ಪಾಲ್ ಶರ್ಮಾ ಅವರು ಈ ದುಃಖದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ದೃಢಪಡಿಸಿದ್ದಾರೆ. “ಲಗಾನ್‌ನ ನಮ್ಮ ಘಜಿನಿ ದೇವ್ ಪ್ರದೀಪ್ ರಾವತ್ ಅವರಿಗೆ ಶ್ರದ್ಧಾಂಜಲಿ” ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ.
ಮೂರು ದಶಕಗಳ ಅದ್ಭುತ ಸಿನಿಮಾ ಪಯಣ ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಬಹುಭಾಷಾ ಚಿತ್ರರಂಗದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರದೀಪ್ ರಾವತ್ ಅವರು ಸೇವೆ ಸಲ್ಲಿಸಿದ್ದರು. 1985ರಲ್ಲಿ ತೆರೆಕಂಡ ಹಿಂದಿಯ ‘ಮೇರಿ ಜಂಗ್’ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುವ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದರು. ಬಿ.ಆರ್. ಚೋಪ್ರಾ ಅವರ ಜನಪ್ರಿಯ ‘ಮಹಾಭಾರತ’ ಧಾರಾವಾಹಿಯಲ್ಲಿ ಅಶ್ವತ್ಥಾಮನ ಪಾತ್ರವು ಅವರಿಗೆ ಮನೆಮಾತಾಗುವಂತಹ ಖ್ಯಾತಿ ತಂದುಕೊಟ್ಟಿತ್ತು.
1986ರ ‘ಸಮುಂದರ್’ ಚಿತ್ರ ಹಾಗೂ 1990ರಲ್ಲಿ ಅಮಿತಾಭ್ ಬಚ್ಚನ್ ಅವರೊಟ್ಟಿಗೆ ‘ಅಗ್ನಿಪಥ್’ ಸಿನಿಮಾದಲ್ಲಿ ಅವರ ನಟನೆ ಗಮನ ಸೆಳೆದಿತ್ತು. ಅಮೀರ್ ಖಾನ್ ಅಭಿನಯದ ‘ಸರ್ಫರೋಶ್’ (1999) ಮತ್ತು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ‘ಲಗಾನ್’ (2001) ಚಿತ್ರದ ದೇವ್ ಸಿಂಗ್ ಸೋಧಿ ಪಾತ್ರ ಅವರಿಗೆ ಬಾಲಿವುಡ್‌ನಲ್ಲಿ ಶಾಶ್ವತ ಸ್ಥಾನ ಕಲ್ಪಿಸಿತು.
ಕನ್ನಡ ಚಿತ್ರರಂಗದೊಂದಿಗೂ ಅವಿನಾಭಾವ ನಂಟು ಕನ್ನಡ ಚಿತ್ರರಂಗದ ಖ್ಯಾತ ನಟರೊಂದಿಗೂ ಪ್ರದೀಪ್ ರಾವತ್ ತೆರೆಹಂಚಿಕೊಂಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಗಜ’ ಮತ್ತು ‘ಅಭಯ್’, ರಿಯಲ್ ಸ್ಟಾರ್ ಉಪೇಂದ್ರ ಅವರ ‘ಪರೋಡಿ’, ಕಿಚ್ಚ ಸುದೀಪ್ ಅವರ ‘ಬಚ್ಚನ್’ ಚಿತ್ರಗಳಲ್ಲಿ ಅವರ ವಿಲನ್ ಪಾತ್ರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದವು. ಅಲ್ಲದೆ, ಮಾಲಾಶ್ರೀ ಅವರ ‘ಎಲೆಕ್ಷನ್’, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ‘ಶಿವಲಿಂಗ’ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ‘ಲಕ್ಷ್ಮಣ’ ಚಿತ್ರಗಳಲ್ಲೂ ಅವರು ಅಭಿನಯಿಸಿದ್ದರು.
ಇದಲ್ಲದೆ, ತೆಲುಗು ಮತ್ತು ತಮಿಳಿನ ‘ಸ್ಟಾಲಿನ್’, ‘ವೀರಂ’, ‘1: ನೇನೊಕ್ಕಡಿನ್’, ‘ಸರ್ರೈನೋಡು’, ‘ನೇನೆ ರಾಜು ನೇನೆ ಮಂತ್ರಿ’ ಮುಂತಾದ ಹತ್ತು ಹಲವು ಯಶಸ್ವಿ ಪ್ರಾಜೆಕ್ಟ್‌ಗಳಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಸಿನಿಮಾಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು.