ಭೀಮಸಮುದ್ರ ಸೆ. 22:
ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203
ಭೀಮಸಮುದ್ರ ಗ್ರಾಮದ ಶ್ರೀ ಭೀಮೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಸಲಹಾ ಸಮಿತಿ ಸದಸ್ಯ ಬಿ.ಕೆ. ಕಲ್ಲಪ್ಪ ಶಿಕ್ಷಕರು ಮಾತನಾಡಿ, “ಮಣ್ಣು ಬಿಟ್ಟು ಮಡಿಕೆ ಇಲ್ಲ, ತನ್ನನ್ನು ಬಿಟ್ಟು ದೇವರಿಲ್ಲ” ಎಂಬ ಮಾತಿನ ಮೂಲಕ ಗುರುಗಳ ಜೀವನ ಮತ್ತು ಸಂದೇಶವನ್ನು ಸ್ಮರಿಸಿದರು.
ಭೀಮಸಮುದ್ರ ಗ್ರಾಮದಲ್ಲಿ ತರಳಬಾಳು ಹುಣ್ಣಿಮೆ ಸಂದರ್ಭದಲ್ಲಿ ಜಗದ್ಗುರುಗಳು ಒಂಬತ್ತು ದಿನಗಳ ಕಾಲ ವಾಸ್ತವ್ಯ ಮಾಡಿದ್ದರು. ಮಣ್ಣಿನಿಂದ ಮಡಿಕೆಯನ್ನು ತಯಾರಿಸುವಂತೆ, ಗಣಪತಿಯ ಮೂರ್ತಿಯನ್ನು ರೂಪಿಸಿ ದೇವರೆಂದು ಪೂಜಿಸುವಂತೆ, ಮಾನವನೂ ತನ್ನ ಸತ್ಕಾರ್ಯ ಹಾಗೂ ಸೇವೆಯ ಮೂಲಕ ದೇವತ್ವವನ್ನು ಪಡೆಯಬಹುದು ಎಂಬುದಕ್ಕೆ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಜೀವನವೇ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.
ಕೇವಲ 15ನೇ ವಯಸ್ಸಿನಲ್ಲಿಯೇ ಪಟ್ಟಾಧಿಕಾರ ಸ್ವೀಕರಿಸಿದ ಜಗದ್ಗುರುಗಳು ಸಿರಿಗೆರೆಯ ಮಠವನ್ನು ವಿಶ್ವವಿಖ್ಯಾತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಹಿಂದೆ ದುಗ್ಗಾನಿ ಮಠ ಎಂದು ಕರೆಯಲ್ಪಡುತ್ತಿದ್ದ ಮಠವನ್ನು ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಳ ಮೂಲಕ ಅಭಿವೃದ್ಧಿಪಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
1956ರಲ್ಲಿ ತಾವು 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಮಠದಲ್ಲಿ ಜಾತೀಯತೆಯ ಭೇದಭಾವವನ್ನು ಮರೆತು ಎಲ್ಲ ಜನಾಂಗದವರಿಗೂ ಶಿಕ್ಷಣ ಹಾಗೂ ವಸತಿ ನಿಲಯದ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಕಲ್ಲಪ್ಪ ಶಿಕ್ಷಕರು ನೆನಪಿಸಿಕೊಂಡರು. ಮಠದಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಇಂಜಿನಿಯರ್‌ಗಳು, ಶಿಕ್ಷಕರು, ಸೈನಿಕರು ಹಾಗೂ ರಾಜಕಾರಣಿಗಳಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಜಗದ್ಗುರುಗಳ ಸರ್ವಧರ್ಮ ಸಮನ್ವಯದ ಮನೋಭಾವವನ್ನು ವಿವರಿಸಿದ ಅವರು, ದಾಗಿನಕಟ್ಟೆ ಗ್ರಾಮದ ಮುಸ್ಲಿಂ ಸಮುದಾಯದ ಯುವಕನೊಬ್ಬ ಮನೆ ನಿರ್ಮಾಣ ಮಾಡುತ್ತಿದ್ದ ಸಂದರ್ಭದಲ್ಲಿ ತನ್ನ ಮನೆಗೆ ಗುರುಗಳು ಬಂದು ಪೂಜೆ ನೆರವೇರಿಸಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದನ್ನು ಸ್ಮರಿಸಿದರು. ಅವರ ಆಹ್ವಾನವನ್ನು ಸ್ವೀಕರಿಸಿದ ಜಗದ್ಗುರುಗಳು ಮನೆಗೆ ತೆರಳಿ ಮೂರು ದಿನಗಳ ಕಾಲ ವಾಸ್ತವ್ಯ ಮಾಡಿ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದ್ದರು. ಇಂತಹ ಅನೇಕ ಮಾನವೀಯ ಹಾಗೂ ಸೌಹಾರ್ದತೆಯ ಘಟನೆಗಳು ಜಗದ್ಗುರುಗಳ ಜೀವನದಲ್ಲಿ ಕಂಡುಬರುತ್ತವೆ ಎಂದು ಹೇಳಿದರು.
ಇಂತಹ ಮಹಾನ್ ಗುರುಗಳ ಸ್ಮರಣಾರ್ಥ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ. ಪುಟ್ಟಪ್ಪ ವಹಿಸಿದ್ದರು. ಉಪಾಧ್ಯಕ್ಷ ಎ.ಎಂ. ಧನ್ಯಕುಮಾರ್, ಸಲಹಾ ಸಮಿತಿ ಸದಸ್ಯರಾದ ಮಹೇಶ್, ವಿನಯ್ ಕುಮಾರ್, ಮುಖ್ಯ ಶಿಕ್ಷಕಿ ಸುಮಾ, ಶಿಕ್ಷಕಿಯರಾದ ಕೋಮಲದೇವಿ, ಮಮತಾ, ಪ್ರದೀಪ್ ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗುರುಗಳ ಭಾವಚಿತ್ರವನ್ನು ಗ್ರಾಮದ ಶಿಕ್ಷಕ ಮರಳು ಸಿದ್ದಪ್ಪ ಅವರು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಮರಳು ಸಿದ್ದಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j