ಚಿತ್ರದುರ್ಗ| ನಶೆ ಮುಕ್ತ ಭಾರತ ಅಭಿಯಾನ: ವಾಸವಿ ವಿದ್ಯಾಸಂಸ್ಥೆಯಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ.

ಚಿತ್ರದುರ್ಗ: ನಶೆ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ಚಿತ್ರದುರ್ಗದ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ನಶೆ ಮುಕ್ತ ಭಾರತ ಅಭಿಯಾನದ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ (ಆಡಳಿತ) ಶ್ರೀಯುತ ಮಂಜುನಾಥ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಶೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿಕೊಂಡು, ಮಾದಕ ವಸ್ತುಗಳಿಂದ ದೂರವಿದ್ದು ಆರೋಗ್ಯಕರ ಮತ್ತು ಜವಾಬ್ದಾರಿಯುತ ಜೀವನ ನಡೆಸುವ ಸಂಕಲ್ಪ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದಸ್ವಾಮಿ, ಕನ್ನಡ ವಿಷಯ ಪರಿವೀಕ್ಷಕರಾದ ರಂಗಾನಾಯ್ಕ್, ಸಂಸ್ಥೆಯ ಅಧ್ಯಕ್ಷರಾದ ಎಸ್.ಎ. ಸತ್ಯನಾರಾಯಣಶೆಟ್ಟಿ, ಕಾರ್ಯದರ್ಶಿ ಎಲ್.ಎನ್. ಅಜಯ್ ಕುಮಾರ್, ನಿರ್ದೇಶಕರಾದ ಶ್ರೀಮತಿ ಸುಮಾ ಅನಂತ್, ಮುಖ್ಯಶಿಕ್ಷಕರಾದ ಎಸ್.ಎನ್. ದ್ವಾರಕಾನಾಥ್ ಸೇರಿದಂತೆ ವಾಸವಿ ಯುವಜನ ಸಂಘದ ಪದಾಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನಶೆಯ ದುಷ್ಪರಿಣಾಮಗಳಿಂದ ಯುವಜನರನ್ನು ರಕ್ಷಿಸುವುದು ಹಾಗೂ ಸಮಾಜದಲ್ಲಿ ನಶೆ ಮುಕ್ತ ವಾತಾವರಣ ನಿರ್ಮಿಸುವಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು.

ವಿದ್ಯಾರ್ಥಿಗಳು ನಶೆ ಸೇವನೆಗೆ ಒಳಗಾಗದಂತೆ ಜಾಗೃತಿ ಮೂಡಿಸುವುದು, ತಮ್ಮ ಸ್ನೇಹಿತರು ಹಾಗೂ ಸುತ್ತಮುತ್ತಲಿನವರಲ್ಲಿಯೂ ನಶೆ ವಿರೋಧಿ ಅರಿವು ಮೂಡಿಸುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಕುರಿತು ಪ್ರತಿಜ್ಞೆ ಸ್ವೀಕರಿಸಿದರು. ಕಾರ್ಯಕ್ರಮವು ಯುವಜನರಲ್ಲಿ ಸಾಮಾಜಿಕ ಹೊಣೆಗಾರಿಕೆ ಹಾಗೂ ನಶೆ ವಿರೋಧಿ ಮನೋಭಾವ ಬೆಳೆಸುವಲ್ಲಿ ಮಹತ್ವದ ಹೆಜ್ಜೆಯಾಯಿತು.

Leave a Reply

Your email address will not be published. Required fields are marked *