ಟಿ. ನರಸೀಪುರ: ಸರ್ಕಾರಿ ಯೋಜನೆಗಳ ಸದ್ಬಳಕೆ ಕುರಿತು ಜಾಗೃತಿ ಕಾರ್ಯಕ್ರಮ; ಅಣಬೆ ಬೇಸಾಯ, ಜೇನು ಸಾಕಾಣಿಕೆಗೆ ಉತ್ತೇಜನ.

ಟಿ. ನರಸೀಪುರ, ಆಗಸ್ಟ್ 19, 2026:

ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP), ಮೈಸೂರು ಹಾಗೂ ತುಂಬಲ ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಟಿ. ನರಸೀಪುರ ತಾಲೂಕಿನ ಮುತ್ತತ್ತಿ ಗ್ರಾಮದಲ್ಲಿ “ಸರ್ಕಾರಿ ಯೋಜನೆಗಳ ಸದ್ಬಳಕೆ ಕಾರ್ಯಕ್ರಮ”ವನ್ನು ಆಯೋಜಿಸಲಾಯಿತು.

ಗ್ರಾಮೀಣ ಜನರಿಗೆ ವಿವಿಧ ಸರ್ಕಾರಿ ಇಲಾಖೆಗಳ ಯೋಜನೆಗಳು, ಸೌಲಭ್ಯಗಳು ಹಾಗೂ ಸೇವೆಗಳ ಕುರಿತು ನೇರ ಮಾಹಿತಿ ನೀಡುವುದು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸಂಬಂಧಿಸಿದ ಅಧಿಕಾರಿಗಳ ಸ್ಪಂದನೆ ದೊರಕುವಂತೆ ಮಾಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.

ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳಲ್ಲಿ RLHP ಮೈಸೂರು ಸಂಸ್ಥೆಯ ಸಂಯೋಜಕ ಶಶಿಕುಮಾರ್ ಅವರು, ಸಂಸ್ಥೆಯು ಕಳೆದ 42 ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರು, ಮಕ್ಕಳು ಹಾಗೂ ಗ್ರಾಮೀಣ ಸಮುದಾಯದ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು. ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಮುಂದೆ ನೇರವಾಗಿ ಮಂಡಿಸಿ, ಮನವಿ ಸಲ್ಲಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಹೇಳಿದರು.

ಸಹಾಯಕ ತೋಟಗಾರಿಕಾ ಅಧಿಕಾರಿ ಪುಟ್ಟಸ್ವಾಮಿ ಮಾತನಾಡಿ, ತೋಟಗಾರಿಕಾ ಇಲಾಖೆಯಿಂದ ಗ್ರಾಮೀಣ ಜನರಿಗೆ ಹಲವು ಯೋಜನೆಗಳು ಮತ್ತು ಸೌಲಭ್ಯಗಳು ಲಭ್ಯವಿದ್ದು, ವಿಶೇಷವಾಗಿ ಅಣಬೆ ಬೇಸಾಯ ಹಾಗೂ ಜೇನು ಸಾಕಾಣಿಕೆ ಯೋಜನೆಗಳ ಪ್ರಯೋಜನ ಪಡೆಯುವಂತೆ ಕರೆ ನೀಡಿದರು. ಆಸಕ್ತರಿಗೆ ಇಲಾಖೆಯಿಂದ ಅಗತ್ಯ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಯ ಎಸ್‌ಡಿಎ ದ್ರಾಕ್ಷಾಯಿಣಿ ಅವರು ಪಂಚಾಯಿತಿಯಿಂದ ದೊರೆಯುವ ವಿವಿಧ ಸೇವೆಗಳು ಮತ್ತು ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಯುವಜನರ ಸಂಘಟನೆಗಳನ್ನು ರಚಿಸುವ ಕುರಿತು ಇಲಾಖೆಯಿಂದ ಸೂಚನೆ ಬಂದಿದ್ದು, ಯುವಕರು ಸಂಘಟಿತರಾಗಿ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮಸ್ಥರು ತಮ್ಮ ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿ, ಹಸಿ ಕಸ ಸಂಗ್ರಹಣೆಗೆ ವಾಹನದ ಕೊರತೆ, ಆದಾಯ ಮತ್ತು ಜಾತಿ ಪ್ರಮಾಣಪತ್ರ ಪಡೆಯುವಲ್ಲಿನ ತೊಂದರೆ, ಚರಂಡಿ ಸ್ವಚ್ಛತೆ ಹಾಗೂ ಅಂಚೆ ಕಚೇರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಎಲ್ಲಮ್ಮ, ಕೃಷಿ ಇಲಾಖೆಯ ಶಿವಣ್ಣ, ಆರೋಗ್ಯ ಇಲಾಖೆಯ ಯೋಗೀಶ್, ಡಿಜಿಟಲ್ ಸಹಾಯ ಕೇಂದ್ರದ ದಿವ್ಯ, ಮುಖ್ಯ ಶಿಕ್ಷಕ ಮಹೇಶ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೂಲಕ ಗ್ರಾಮಸ್ಥರಿಗೆ ವಿವಿಧ ಸರ್ಕಾರಿ ಯೋಜನೆಗಳು ಮತ್ತು ಇಲಾಖಾ ಸೌಲಭ್ಯಗಳ ಕುರಿತು ನೇರ ಮಾಹಿತಿ ದೊರೆಯುವುದರ ಜೊತೆಗೆ, ತಮ್ಮ ಸ್ಥಳೀಯ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಮುಂದೆ ಮಂಡಿಸಲು ಸೂಕ್ತ ವೇದಿಕೆ ಕಲ್ಪಿಸಲಾಯಿತು. ಗ್ರಾಮೀಣ ಜನರು ಲಭ್ಯವಿರುವ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ಪಡೆದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂಬ ಸಂದೇಶವೂ ಕಾರ್ಯಕ್ರಮದ ಮೂಲಕ ನೀಡಲಾಯಿತು.

Leave a Reply

Your email address will not be published. Required fields are marked *