ಭೀಮಸಮುದ್ರ ಗಣಿಗಾರಿಕೆ ಸಮಸ್ಯೆ: ಅದಿರು ಸಾಗಣೆಗೆ ಪ್ರತ್ಯೇಕ ಬೈಪಾಸ್ ರಸ್ತೆ ನಿರ್ಮಿಸಿ; ಎಸ್.ಆರ್. ಹಿರೇಮಠ

ಚಿತ್ರದುರ್ಗ: ಗಣಿಗಾರಿಕೆ ಪ್ರದೇಶಗಳಿಂದ ಅದಿರು ಸಾಗಿಸುವ ಲಾರಿಗಳ ಸಂಚಾರದಿಂದ ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಅದಿರು ಸಾಗಣೆಗೆ ಪ್ರತ್ಯೇಕ ಬೈಪಾಸ್ ರಸ್ತೆ ನಿರ್ಮಿಸುವ ಜವಾಬ್ದಾರಿಯನ್ನು ಗಣಿಗಾರಿಕೆ ಕಂಪನಿಗಳೇ ವಹಿಸಿಕೊಳ್ಳಬೇಕು ಎಂದು ಸಾಮಾಜಿಕ ಪರಿವರ್ತನೆಯ ಹೋರಾಟ ಸಮಿತಿ ಮುಖ್ಯಸ್ಥ ಎಸ್.ಆರ್. ಹಿರೇಮಠ ಒತ್ತಾಯಿಸಿದರು.

ಭೀಮಸಮುದ್ರದ ಗಣಿಗಾರಿಕೆ ಪ್ರದೇಶದ ಬಳಿ ಕಳೆದ 16 ದಿನಗಳಿಂದ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಹೋರಾಟಗಾರರು ಹಾಗೂ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.ಗಣಿಗಾರಿಕೆ ಚಟುವಟಿಕೆಗಳಿಗಿಂತ ಜನರು, ಮಕ್ಕಳು ಮತ್ತು ಜಾನುವಾರುಗಳ ಆರೋಗ್ಯ ಹಾಗೂ ಸುರಕ್ಷತೆ ಮುಖ್ಯ. ಗ್ರಾಮೀಣ ಪ್ರದೇಶಗಳಲ್ಲಿ ಅದಿರು ಸಾಗಿಸುವ ಭಾರೀ ವಾಹನಗಳ ಸಂಚಾರದಿಂದ ಧೂಳು, ಅಪಘಾತ ಮತ್ತು ಇತರ ಸಮಸ್ಯೆಗಳು ಉಂಟಾಗುತ್ತಿದ್ದರೆ, ಅವುಗಳನ್ನು ನಿಯಂತ್ರಿಸುವುದು ಆಡಳಿತದ ಜವಾಬ್ದಾರಿ ಎಂದು ಅವರು ಹೇಳಿದರು.ಅದಿರು ಸಾಗಣೆಗೆ ಅಗತ್ಯವಿರುವ ಬೈಪಾಸ್ ರಸ್ತೆಯ ನಿರ್ಮಾಣಕ್ಕೆ ಸರ್ಕಾರದ ಹಣ ಬಳಸಬಾರದು. ಗಣಿಗಾರಿಕೆಯಿಂದ ಲಾಭ ಪಡೆಯುವ ಕಂಪನಿಗಳೇ ರಸ್ತೆ ನಿರ್ಮಾಣದ ವೆಚ್ಚವನ್ನು ಭರಿಸಬೇಕು ಎಂದು ಹಿರೇಮಠ ಹೇಳಿದರು.

ಜನರ ಬೇಡಿಕೆ ಈಡೇರಿಸುವವರೆಗೆ ಹೋರಾಟ ಮುಂದುವರಿಯಬೇಕು ಎಂದು ಅವರು ಕರೆ ನೀಡಿದರು.ಗ್ರಾಮಾಂತರ ಪ್ರದೇಶಗಳಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಉಲ್ಲಂಘನೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಗಣಿಗಾರಿಕೆ ಮಾಲೀಕರು, ಲಾರಿ ಮಾಲೀಕರು ಹಾಗೂ ರೈತರು ಒಂದೇ ವೇದಿಕೆಯಲ್ಲಿ ಕುಳಿತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಲಾರಿಗಳ ಸಂಚಾರದಿಂದ ಉಂಟಾಗುತ್ತಿರುವ ಧೂಳು ಮತ್ತು ಅಪಘಾತದ ಅಪಾಯ ಜನಜೀವನದ ಮೇಲೆ ಪರಿಣಾಮ ಬೀರುತ್ತಿದ್ದು, ಇದರ ಪರಿಣಾಮ ಮುಂದಿನ ಪೀಳಿಗೆಯ ಮೇಲೂ ಬೀರುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.

ಧರಣಿ ನಿರತರನ್ನು ಜಿಲ್ಲಾಧಿಕಾರಿಗಳು ಭೇಟಿ ಮಾಡಿ ಅವರ ಅಹವಾಲು ಆಲಿಸಬೇಕಿತ್ತು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ತಾವು ಪತ್ರ ಬರೆಯುವುದಾಗಿ ತಿಳಿಸಿದ ಹಿರೇಮಠ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಲಾರಿ ಮಾಲೀಕರ ಬೆಂಬಲ

ಚಿತ್ರದುರ್ಗದ ಲಾರಿ ಮಾಲೀಕರ ಸಂಘದ ಮುಖಂಡ ಅಬೀಬ್ ಮಾತನಾಡಿ, ಗ್ರಾಮಸ್ಥರ ಹೋರಾಟಕ್ಕೆ ಲಾರಿ ಮಾಲೀಕರ ಸಹಮತವಿದೆ. ಆದರೆ ಪ್ರತಿಭಟನೆಯಿಂದ ಲಾರಿ ಮಾಲೀಕರ ಜೀವನೋಪಾಯಕ್ಕೂ ತೊಂದರೆಯಾಗುತ್ತಿದ್ದು, ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ರಸ್ತೆ ನಿರ್ಮಾಣ ಹಾಗೂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಲಾರಿ ಮಾಲೀಕರು ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.

ರಾಜ್ಯವ್ಯಾಪಿ ಹೋರಾಟದ ಎಚ್ಚರಿಕೆ

ಗಣಿಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ ಅಧ್ಯಕ್ಷೆ ಡಿ. ನಾಗಲಕ್ಷ್ಮಿ ಮಾತನಾಡಿ, ಗಣಿಗಾರಿಕೆ ಪ್ರದೇಶದ ರಸ್ತೆಯಲ್ಲಿ ಸಂಚಾರದಿಂದ ಅನೇಕರು ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ತಕ್ಷಣ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.ಜನರ ಸಮಸ್ಯೆಗಳನ್ನು ಅಧಿಕಾರಿಗಳು ನಿರ್ಲಕ್ಷಿಸಿದರೆ ಮುಂದಿನ ಹಂತದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸಲು ಸಿದ್ಧರಾಗಿರುವುದಾಗಿ ಅವರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗೀತಾ, ಯತೀಶ್, ಭೀಮಸಮುದ್ರದ ರೈತ ಸಂಘದ ಅಧ್ಯಕ್ಷ ಶಂಕರಮೂರ್ತಿ, ಡಿ.ಎಂ. ಪ್ರಸನ್ನಕುಮಾರ್, ಶೈಲೇಂದ್ರ, ನಲಿಕಟ್ಟೆಪಾಳ್ಯ, ಭೀಮಸಮುದ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು, ಗ್ರಾಮಸ್ಥರು ಮತ್ತು ಹೋರಾಟಗಾರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *