ಚಿತ್ರದುರ್ಗ ಸೆ. 05
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ವಿಧಾನ ಪರಿಷತ್ ಎಂಬುದು ಬುದ್ಧಿವಂತರ ಕ್ಷೇತ್ರವಾಗಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಸಮಸ್ಯೆಗಳ ಬಗ್ಗೆ ಕುಲಂಕಷವಾಗಿ ಚರ್ಚಿಸುವ ಪವಿತ್ರ ವೇದಿಕೆಯಾಗಿದೆ. ಈ ಕ್ಷೇತ್ರದಲ್ಲಿ ಈ ಹಿಂದೆ 10 ಬಾರಿ ನಡೆದ ಚುನಾವಣೆಗಳಲ್ಲಿ 8 ಬಾರಿ ಬಿಜೆಪಿ ಹಾಗೂ 2 ಬಾರಿ ಜೆಡಿಎಸ್ ಗೆದ್ದು ಎನ್‍ಡಿಎ ಮೈತ್ರಿಕೂಟದ ಪರವಾಗಿ ಜನಾದೇಶ ಬಂದಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೇಶವ ಪ್ರಸಾದ್ ತಿಳಿಸಿದರು.
ಚಿತ್ರದುರ್ಗ ನಗರದ ಐಶ್ವರ್ಯ ಫೋರ್ಟ್‍ನಲ್ಲಿ ಆಯೋಜಿಸಲಾಗಿದ್ದ, ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆಯ ಉದ್ಘಾಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ 30 ರಿಂದ 50 ಸಾವಿರದಷ್ಟಿದ್ದ ಮತದಾರರ ಸಂಖ್ಯೆ, ಈಗ 1,76,000 ದಾಟಿದ್ದು 2 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. 5 ಜಿಲ್ಲೆಗಳು, 33 ತಾಲೂಕುಗಳು ಹಾಗೂ 600 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿರುವುದರಿಂದ ಇದು ಕೇವಲ ಅಭ್ಯರ್ಥಿಯ ಚುನಾವಣೆಯಾಗಿರದೆ, ಪಕ್ಷದ ಕಾರ್ಯಕರ್ತರ ಚುನಾವಣೆಯಾಗಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಜನಪರ ಯೋಜನೆಗಳು, ಸಾಧನೆಗಳು ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ವೈಫಲ್ಯಗಳನ್ನು ಪದವೀಧರರು, ಶಿಕ್ಷಕರು, ವೈದ್ಯರು, ಎಂಜಿನಿಯರ್‍ಗಳು, ವಕೀಲರು ಸೇರಿದಂತೆ ಪ್ರಬುದ್ಧ ಮತದಾರರ ಮುಂದಿಟ್ಟು ಎನ್‍ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರನ್ನು ಭಾರಿ ಬಹುಮತದಿಂದ ಗೆಲ್ಲಿಸುವಂತೆ ಪಕ್ಷದ ಕಾರ್ಯಕರ್ತರು ಮುಖಂಡರಲ್ಲಿ ಮನವಿ ಮಾಡಿದರು.
ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೆಪಿಎಸ್‍ಸಿ ನೇಮಕಾತಿಯಲ್ಲಿ ಅಕ್ರಮ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ ಹಾಗೂ ಕಿಟ್ ಹಗರಣಗಳು ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿವೆ. ಕೆಪಿಎಸ್‍ಸಿಯಲ್ಲಿ ಒಂದೊಂದು ಹುದ್ದೆಗೆ 80 ಲಕ್ಷ ರೂಪಾಯಿವರೆಗೆ ಲಂಚ ಪಡೆಯಲಾಗುತ್ತಿದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಡಳಿತ ಶೈಲಿಯನ್ನು ಟೀಕಿಸಿದ ನಾಯಕರು, ಸರ್ಕಾರದ ಮೇಲೆ ಮುಖ್ಯಮಂತ್ರಿಗಳ ನಿಯಂತ್ರಣ ತಪ್ಪಿದೆ ಸಚಿವರ ನಡುವಿನ ಭಿನ್ನಾಭಿಪ್ರಾಯ, ಸಂಪುಟ ವಿಸ್ತರಣೆಯ ವಿಳಂಬ ಹಾಗೂ ಸಚಿವ ನಾಗೇಂದ್ರ ಅವರ ರಾಜೀನಾಮೆ ಪ್ರಕರಣಗಳು ಸರ್ಕಾರದ ದುರಾಡಳಿತವನ್ನು ಬಿಂಬಿಸುತ್ತವೆ. ರಾಜ್ಯ ಸರ್ಕಾರ ಕೇವಲ ರಿಯಲ್ ಎಸ್ಟೇಟ್ ದೃಷ್ಟಿಕೋನದಲ್ಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನ ಕೆರೆ ಹಾಗೂ ಪಾರ್ಕ್‍ಗಳನ್ನು ಆಹುತಿ ತೆಗೆದುಕೊಳ್ಳುತ್ತಿದೆ. ಕರ್ನಾಟಕದಲ್ಲಿ ಬೆಂಗಳೂರನ್ನು ಹೊರತುಪಡಿಸಿ ಪರ್ಯಾಯ ನಗರಗಳನ್ನು ಬೆಳೆಸುತ್ತಿಲ್ಲ. ಚಿತ್ರದುರ್ಗ ಅಥವಾ ದಾವಣಗೆರೆ ಯಂತಹ ಮಧ್ಯ ಕರ್ನಾಟಕದ ಭಾಗಗಳನ್ನು ಅಭಿವೃದ್ಧಿಪಡಿಸುವ ಬದಲು ಕೇವಲ ಕನಕಪುರ ಭಾಗಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ದೂರಿದ ಅವರು. ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಎಸ್.ಡಿ.ಆರ್.ಎಫ್ ನಿಧಿಯಿಂದ ತಕ್ಷಣವೇ ಪರಿಹಾರ ಹಣ ಬಿಡುಗಡೆ ಮಾಡದೆ, ಕೇವಲ ಕೇಂದ್ರದ ಕಡೆ ಬೆರಳು ತೋರಿಸುತ್ತಿದೆ. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಪ್ರಕೃತಿ ವಿಕೋಪ ಬಂದಾಗ ತಕ್ಷಣವೇ ಸ್ಪಂದಿಸಿ ನೆರವು ನೀಡಿದ್ದನ್ನು ಉದಾಹರಣೆ ನೀಡಿದರು.
ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಆಗ್ನೇಯ ಪದವೀಧರ ಕ್ಷೇತ್ರದ ಮುಂಬರುವ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯ ಗೆಲುವನ್ನು ಗೊಳಿಸಲು ಒಗ್ಗಟ್ಟಿನಿಂದ ಶ್ರಮಿಸ ಬೇಕಿದೆ. ವಿಶಾಲ ಕ್ಷೇತ್ರ ಮತ್ತು ಸವಾಲುಗಳು: ಆಗ್ನೇಯ ಪದವೀಧರ ಕ್ಷೇತ್ರವು ಸುಮಾರು 36 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದ್ದು, ರಾಜ್ಯದ ಕಾಲು ಭಾಗದಷ್ಟು ವಿಸ್ತಾರವಾಗಿದೆ. ಅಭ್ಯರ್ಥಿಯು ವೈಯಕ್ತಿಕವಾಗಿ ಪ್ರತಿಯೊಬ್ಬ ಮತದಾರರನ್ನು ತಲುಪುವುದು ಸವಾಲಿನ ಕೆಲಸವಾಗಿದೆ. ಶಿಕ್ಷಕರ ಕ್ಷೇತ್ರಕ್ಕೆ ಹೋಲಿಸಿದರೆ ಪದವೀಧರ ಕ್ಷೇತ್ರದಲ್ಲಿ ಮತದಾರರನ್ನು ತಲುಪುವುದು ಭಿನ್ನವಾಗಿದೆ. ಕ್ಷೇತ್ರದಲ್ಲಿ ಕಾಲು ಭಾಗ ಶಿಕ್ಷಕರಿದ್ದರೆ, ಮುಕ್ಕಾಲು ಭಾಗ ಪದವೀಧರರಿದ್ದಾರೆ. ಪ್ರತಿಯೊಂದು ಹಳ್ಳಿಯಲ್ಲೂ ಇರುವ ಪದವೀಧರರು, ಖಾಸಗಿ ಸಂಸ್ಥೆಗಳ ನೌಕರರು ಹಾಗೂ ರೈತರು/ಕೂಲಿಕಾರರಾಗಿರುವ ಪದವೀಧರರನ್ನು ಹುಡುಕಿ ಮತದಾರರ ಪಟ್ಟಿಯಂತೆ ವೈಯಕ್ತಿಕವಾಗಿ ಭೇಟಿ ಮಾಡಬೇಕಾಗಿದೆ ಎಂದರು.
ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು, ಪದವೀಧರರಿಗೆ ನೀಡಿದ್ದ ಭರವಸೆಗಳ ಈಡೇರಿಕೆಯಲ್ಲಿನ ವಿಫಲತೆ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವ, ದೇಶದ ಆರ್ಥಿಕ ಬೆಳವಣಿಗೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಸಾಧಿಸಿರುವ ಹೆಮ್ಮೆಯ ವಿಷಯಗಳನ್ನು ಮತದಾರರಿಗೆ ತಲುಪಿಸಬೇಕು.ಈ ಬಾರಿ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ, ಮೊದಲನೇ ಸುತ್ತಿನ ಎಣಿಕೆಯಲ್ಲೇ ಅತ್ಯಂತ ಹೆಚ್ಚಿನ ಅಂತರದಿಂದ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಮತದಾರರಲ್ಲಿ ಮೊದಲ ಪ್ರಾಶಸ್ತ್ಯದ (1) ಮತವನ್ನು ಮಾತ್ರ ಪಡೆಯಲು ಶ್ರಮಿಸಬೇಕು. ಚುನಾವಣೆಗೆ ಇನ್ನು ಕೇವಲ ಒಂದು ತಿಂಗಳ ಸಮಯ ಮಾತ್ರ ಬಾಕಿ ಇದ್ದು, ಪ್ರತಿಯೊಬ್ಬ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿದಿನ ಕ್ಷೇತ್ರ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ನಿರಂತರ ಪ್ರಯತ್ನದ ಮೂಲಕ ಬಿಜೆಪಿ ಅಭ್ಯರ್ಥಿಯ ಜಯಕ್ಕೆ ಶ್ರಮಿಸಬೇಕು ಎಂದು ತಿಪ್ಪಾರೆಡ್ಡಿ ಕರೆ ನೀಡಿದರು.
ಅಗ್ನೇಯ ಪದವೀಧರ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಕೆ.ಎಂ ಸುರೇಶ್ ಮಾತನಾಡಿ, ಸುಮಾರು 12 ವರ್ಷಗಳ ನಂತರ ಅಖಂಡ ಚಿತ್ರದುರ್ಗ ಜಿಲ್ಲೆಗೆ ಭಾರತೀಯ ಜನತಾ ಪಕ್ಷವು ಒಂದು ದೊಡ್ಡ ಅವಕಾಶವನ್ನು ಮಾಡಿಕೊಟ್ಟಿದೆ. ತಾವು ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ. 2000ರ ಇಸವಿಯಲ್ಲಿ ಯುವ ಮೋರ್ಚಾದ ಅಧ್ಯಕ್ಷರಾಗಿ ಪಕ್ಷದ ಕೆಲಸ ಪ್ರಾರಂಭಿಸಿದ್ದು, ಕಳೆದ 25-26 ವರ್ಷಗಳಿಂದ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷವು ಅವಕಾಶ ನೀಡಿದ್ದು, ಇದು ಪ್ರತಿಯೊಬ್ಬ ಕಾರ್ಯಕರ್ತನಿಗೂ ಸಿಕ್ಕ ಅವಕಾಶವಾಗಿದೆ. ಮುಂದಿನ ದಿನಗಳಲ್ಲಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಪಕ್ಷದ ಇತರ ಕಾರ್ಯಕರ್ತರಿಗೂ ವಿವಿಧ ಚುನಾವಣೆಗಳಲ್ಲಿ ಅವಕಾಶ ಸಿಗುವಂತೆ ಕೆಲಸ ಮಾಡಲಾಗುವುದು. ವಿಜಯ ಸಾಧಿಸುವ ಮೂಲಕ ಪಕ್ಷದ ವರಿಷ್ಠರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲಾಗುವುದು ಹಾಗೂ ಜನಪ್ರತಿನಿಧಿಗಳೊಂದಿಗೂಡಿ ಚಿತ್ರದುರ್ಗದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುವುದಾಗಿ ತಿಳಿಸಿ ಅಖಂಡ ಚಿತ್ರದುರ್ಗ ಜಿಲ್ಲೆಗೆ ಲಭಿಸಿರುವ ಈ ಅವಕಾಶವನ್ನು ವಿಧಾನ ಪರಿಷತ್ ಶಾಸಕರಾಗಿ ಪರಿವರ್ತಿಸುವ ಮೂಲಕ ವರಿಷ್ಠರ ನಂಬಿಕೆಯನ್ನು ಕಾಪಾಡಿಕೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ ನವೀನ್, ಡಿ.ಎಸ್.ಅರುಣ್, ಮಾಜಿ ಸದಸ್ಯ ಡಾ,ಶಿವಯೋಗಿ ಸ್ವಾಮಿ, ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ಕೆ.ಟಿ ಕುಮಾರಸ್ವಾಮಿ, ಮಾಜಿ ಅಧ್ಯಕ್ಷರಾದ ಟಿ.ಜಿ ನರೇಂದ್ರ, ಜಿ.ಎಂ.ಸುರೇಶ್, ಜಿಲ್ಲಾ ಉಪಾಧ್ಯಕ್ಷರಾದ ಶೈಲಜ ರೆಡ್ಡಿ, ಮುಖಂಡರಾದ ಕಲ್ಲೇಶ, ಗ್ರಾಮಾಂತರ ಮೋರ್ಚಾದ ಮಾಜಿ ಅಧ್ಯಕ್ಷರಾದ ಕಲ್ಲೇಶಯ್ಯ, ವೆಂಕಟೇಶ್ ಯಾದವ್, ಮೋಹನ್ ಕುಮಾರ್ ಭಾಗವಹಿಸಿದ್ದರು ಅಧ್ಯಕ್ಷತೆಯನ್ನು ಗ್ರಾಮಾಂತರ ಮೋರ್ಚಾದ ಅಧ್ಯಕ್ಷರಾದ ನಾಗರಾಜ್ ವಹಿಸಿದ್ದರು.