ತೊಗರಿ ಬೆಳೆ ಪ್ರಾತ್ಯಕ್ಷಿಕೆ ಹಾಗೂ ಕ್ಷೇತ್ರೋತ್ಸವ: ರೈತರಿಗೆ ಕೃಷಿ ಇಲಾಖೆ ಮಾಹಿತಿ.

ಚಿತ್ರದುರ್ಗ, ಸೆಪ್ಟೆಂಬರ್ 5:

ವರದಿ ಮತ್ತು ಪೋಟೋ ಕೃಪೆ, ಸುರೇಶ್ ಪಟಾಣ್

ದ್ವಿದಳ ಧಾನ್ಯವಾಗಿರುವ ತೊಗರಿ ಬೆಳೆಯನ್ನು ರೈತರು ಬೆಳೆಯುವುದರಿಂದ ಉತ್ತಮ ಆದಾಯ ಪಡೆಯುವುದರ ಜೊತೆಗೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಹುದು. ಕಡಿಮೆ ಮಳೆಯಲ್ಲಿಯೂ ತೊಗರಿಯಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ ಎಂದು ಚಿತ್ರದುರ್ಗ ತಾಲ್ಲೂಕಿನ ಕೃಷಿ ಅಧಿಕಾರಿ ಆಶಾರಾಣಿ ಅವರು ರೈತರಿಗೆ ತಿಳಿಸಿದರು.

ಚಿತ್ರದುರ್ಗ ತಾಲ್ಲೂಕಿನ ಸಾಸಲಹಟ್ಟಿ, ಗೋನೂರು ಹಾಗೂ ಪಾಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಸಲಹಟ್ಟಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ತೊಗರಿ ಬೆಳೆ ಪ್ರಾತ್ಯಕ್ಷಿಕೆ, ತರಬೇತಿ ಹಾಗೂ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಗತಿಪರ ರೈತ ಸಾಸಲಹಟ್ಟಿ ಗ್ರಾಮದ ಪಿ. ವೀರೇಂದ್ರ ಕುಮಾರ್ ಅವರ ತೊಗರಿ ಹೊಲದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ರೈತರಿಗೆ ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ ಆಶಾರಾಣಿ ಅವರು, ಚಿತ್ರದುರ್ಗ ತಾಲ್ಲೂಕಿನಲ್ಲಿ ಮೆಕ್ಕೆಜೋಳ ಬೆಳೆಗೆ ಬೆಳೆ ವಿಮೆ ಮಾಡಿಸಿರುವ ರೈತರಿಗೆ ವಿಮಾ ಪರಿಹಾರ ದೊರೆಯುವ ಕುರಿತು ಮಾಹಿತಿ ನೀಡಿದರು. ರೈತರು ಕೇಳಿದ ವಿವಿಧ ಪ್ರಶ್ನೆಗಳು ಹಾಗೂ ಸಂದೇಹಗಳಿಗೆ ಉತ್ತರಿಸಿದರು.ಅಲ್ಲದೆ, ಕೃಷಿಹೊಂಡ, ಗುಣಮಟ್ಟದ ಬೀಜ, ಗೊಬ್ಬರ, ಕೃಷಿ ಪರಿಕರಗಳು, ಪೈಪುಗಳು ಸೇರಿದಂತೆ ವಿವಿಧ ಕೃಷಿ ಸಾಮಗ್ರಿಗಳನ್ನು ಸಬ್ಸಿಡಿ ದರದಲ್ಲಿ ಪಡೆಯುವ ಅವಕಾಶಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳಾದ ಮಹಾಂತೇಶ್ ಹಾಗೂ ಮಲಿಯಪ್ಪ ಅವರು ಇಲಾಖೆಯಿಂದ ರೈತರಿಗೆ ದೊರೆಯುವ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ಮತ್ತಷ್ಟು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ರೈತರಾದ ಬೋರಯ್ಯ, ಸೂರಪಾಪಯ್ಯ, ಜಿಲ್ಲಾ ಕೃಷಿ ಇಲಾಖೆಯ ಆತ್ಮ ಯೋಜನೆಯ ತಿಪ್ಪೇಸ್ವಾಮಿ, ಪಿ. ವೀರೇಂದ್ರ ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪಾಲೇನಹಳ್ಳಿ ತಿಪ್ಪೇಸ್ವಾಮಿ, ಈಶ್ವರಪ್ಪ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಹೆಚ್ಚಿನ ಮಾಹಿತಿಗಾಗಿ: ಪಿ. ವೀರೇಂದ್ರ ಕುಮಾರ್

ಮೊ: 9845396588

Leave a Reply

Your email address will not be published. Required fields are marked *