ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ: ಐಮಂಗಲದ ಶ್ರೀ ಮಹಾಶಿವಶರಣ ಹರಳಯ್ಯ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವ ಹರಳಯ್ಯ ಸ್ವಾಮೀಜಿಯವರ ಪೂರ್ವಾಶ್ರಮದ ತಂದೆ ಕೆ. ಲಕ್ಕಪ್ಪ (77) ಅವರು ಸೋಮವಾರ ನಸುಕಿನ ಜಾವ ವಯೋಸಹಜ ಕಾರಣದಿಂದ ಚಿತ್ರದುರ್ಗ ನಗರದ ಕವಾಡಿಗರ ಹಟ್ಟಿಯ ಸ್ವಗೃಹದಲ್ಲಿ ಲಿಂಗೈಕ್ಯರಾಗಿದ್ದಾರೆ.
ಲಿಂಗೈಕ್ಯ ಕೆ. ಲಕ್ಕಪ್ಪ ಅವರ ಅಂತಿಮ ದರ್ಶನ ಪಡೆದ ವಿವಿಧ ಗುರುಪೀಠಗಳ ಶ್ರೀಗಳು ಹಾಗೂ ಗಣ್ಯರು ಪುಷ್ಪನಮನ ಸಲ್ಲಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಜಗದ್ಗುರು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭಗೀರಥ ಗುರುಪೀಠದ ಜಗದ್ಗುರು ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಮಡಿವಾಳ ಗುರುಪೀಠದ ಜಗದ್ಗುರು ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಹೆಳವ ಗುರುಪೀಠದ ಶ್ರೀ ಬಸವ ಬೃಂಗೇಶ್ವರ ಸ್ವಾಮೀಜಿ, ಮರುಳ ಶಂಕರ ಗುರುಪೀಠದ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ, ಕೊರಟಗೆರೆಯ ಮಹಾಲಿಂಗ ಸ್ವಾಮೀಜಿ ಹಾಗೂ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಅಪಾರ ಬಂಧುಬಳಗ ಅಗಲಿದ ಲಕ್ಕಪ್ಪ: ಲಿಂಗೈಕ್ಯ ಕೆ. ಲಕ್ಕಪ್ಪ ಅವರು ಧರ್ಮಪತ್ನಿ ಕೆಂಚಮ್ಮ, ಪುತ್ರರಾದ ತಿಪ್ಪೇಸ್ವಾಮಿ, ಬಸವ ಹರಳಯ್ಯ ಸ್ವಾಮೀಜಿ, ಮಲ್ಲಿಕಾರ್ಜುನ, ಪ್ರಕಾಶ್, ಪುತ್ರಿಯರಾದ ದೇವಿರಮ್ಮ, ಸುವರ್ಣ, ದ್ರಾಕ್ಷಾಯಿಣಿ, ಮಂಗಳಗೌರಿ ಹಾಗೂ ಅನ್ನಪೂರ್ಣ, 16 ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.