ಚಿತ್ರದುರ್ಗ| ಗಣೇಶೋತ್ಸವದ ಅಂಗವಾಗಿ ರಕ್ತದಾನ ಶಿಬಿರ: ‘ರಕ್ತದಾನದಿಂದ ಮತ್ತೊಬ್ಬರಿಗೆ ಜೀವದಾನ’ – ಕವಿತಾ ರೆಡ್ಡಿ.

ಚಿತ್ರದುರ್ಗ:

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ರಕ್ತದಾನ ಮಾಡುವ ಮೂಲಕ ಮತ್ತೊಂದು ಅಮೂಲ್ಯ ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ. ಆರೋಗ್ಯವಂತರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಾಗಜ್ ಫೌಂಡೇಶನ್ ಸಂಸ್ಥಾಪಕಿ ಕವಿತಾ ರೆಡ್ಡಿ ಹೇಳಿದರು.

ನಗರದ ಐಯುಡಿಪಿ ಲೇಔಟ್‌ನ ಆದಿಜಾಂಬವ ಬಡಾವಣೆಯಲ್ಲಿ ಮೋದಕಪ್ರಿಯ ಗೆಳೆಯರ ಬಳಗದ ನಾಲ್ಕನೇ ವರ್ಷದ ಗಣೇಶ ಪ್ರತಿಷ್ಠಾಪನೆ ಅಂಗವಾಗಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಕ್ತದಾನ ಮಾಡುವುದರಿಂದ ಆರೋಗ್ಯವಂತ ವ್ಯಕ್ತಿ ನಿಶ್ಯಕ್ತನಾಗುತ್ತಾನೆ ಎಂಬ ತಪ್ಪು ಕಲ್ಪನೆ ಯಾರಲ್ಲಿಯೂ ಇರಬಾರದು. ಸೂಕ್ತ ಆರೋಗ್ಯ ಹೊಂದಿರುವವರು ರಕ್ತದಾನ ಮಾಡುವುದರಿಂದ ಅಗತ್ಯವಿರುವವರಿಗೆ ಸಮಯಕ್ಕೆ ಸರಿಯಾಗಿ ರಕ್ತ ದೊರೆಯುವಂತಾಗುತ್ತದೆ. ರಕ್ತದಾನದಿಂದ ಹೊಸ ರಕ್ತಕಣಗಳ ಉತ್ಪತ್ತಿಗೆ ಸಹಕಾರಿಯಾಗುವುದರ ಜೊತೆಗೆ, ಸಾವು–ಬದುಕಿನ ನಡುವೆ ಹೋರಾಡುತ್ತಿರುವ ರೋಗಿಗಳ ಜೀವ ಉಳಿಸಲು ನೆರವಾಗುತ್ತದೆ ಎಂದು ತಿಳಿಸಿದರು.

ಅಪಘಾತಗಳು, ಹೆರಿಗೆ ಸಂದರ್ಭಗಳು, ಶಸ್ತ್ರಚಿಕಿತ್ಸೆಗಳು ಹಾಗೂ ವಿವಿಧ ತುರ್ತು ವೈದ್ಯಕೀಯ ಪರಿಸ್ಥಿತಿಗಳಲ್ಲಿ ರಕ್ತದ ಅವಶ್ಯಕತೆ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಯಾವುದೇ ಜೀವಕ್ಕೆ ತೊಂದರೆಯಾಗದಂತೆ ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಯುವಜನರು ದುಶ್ಚಟಗಳಿಂದ ದೂರವಿದ್ದು, ತಮ್ಮ ಶಕ್ತಿ ಮತ್ತು ಸಮಯವನ್ನು ಸಮಾಜಮುಖಿ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು. ಗಣೇಶ ಹಬ್ಬವೆಂದರೆ ಕೇವಲ ಸಂಭ್ರಮ, ಕುಣಿದು ಕುಪ್ಪಳಿಸುವುದಕ್ಕೆ ಸೀಮಿತವಾಗಬಾರದು. ಸಮಾಜಕ್ಕೆ ಉಪಯೋಗವಾಗುವ ರಕ್ತದಾನ, ಸ್ವಚ್ಛತೆ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಪರೋಪಕಾರಿ ಕಾರ್ಯಗಳಲ್ಲಿ ಯುವಕರು ತೊಡಗಿಸಿಕೊಂಡಾಗ ಹಬ್ಬಕ್ಕೆ ಮತ್ತಷ್ಟು ಅರ್ಥ ಬರುತ್ತದೆ ಎಂದು ಕವಿತಾ ರೆಡ್ಡಿ ಹೇಳಿದರು.

ಯುವ ಮುಖಂಡ ರವಿ ಚಿನ್ನು ಮಾತನಾಡಿ, ಮೋದಕಪ್ರಿಯ ಗೆಳೆಯರ ಬಳಗದವರು ಗಣೇಶ ಪ್ರತಿಷ್ಠಾಪನೆಯ ಆರಂಭಿಕ ವರ್ಷದಿಂದಲೇ ರಕ್ತದಾನ ಶಿಬಿರದಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾನವೀಯತೆ ಮೆರೆದಿರುವುದು ಸಂತೋಷದ ಸಂಗತಿ ಎಂದರು. ರಕ್ತಕ್ಕೆ ಪರ್ಯಾಯವಿಲ್ಲ. ಅಪಘಾತ, ಹೆರಿಗೆ ಹಾಗೂ ಆಪರೇಷನ್‌ ಸೇರಿದಂತೆ ಹಲವು ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಎದುರಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯಕ್ಕೆ ಅನುಗುಣವಾಗಿ ಸ್ವಯಂಪ್ರೇರಿತವಾಗಿ ರಕ್ತದಾನಕ್ಕೆ ಮುಂದಾಗಬೇಕು. “ರಕ್ತದಾನ ಶ್ರೇಷ್ಠದಾನ” ಎಂಬುದನ್ನು ಯಾರೂ ಮರೆಯಬಾರದು ಎಂದು ಹೇಳಿದರು.

ಗಣೇಶೋತ್ಸವವನ್ನು ಸಾಮಾಜಿಕ ಕಳಕಳಿಯೊಂದಿಗೆ ಆಚರಿಸುವ ಮೂಲಕ ಯುವಜನರಿಗೆ ಉತ್ತಮ ಸಂದೇಶ ನೀಡುತ್ತಿರುವ ಮೋದಕಪ್ರಿಯ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಮೋದಕಪ್ರಿಯ ಗೆಳೆಯರ ಬಳಗದ ಅಭಿಷೇಕ್, ವರ್ಧನ್, ಸಲೀಂ, ವರುಣ್, ಸಚಿನ್, ದೈವಿಕ, ದ್ರುವಕುಮಾರ್ ಸೇರಿದಂತೆ ಬಳಗದ ಸದಸ್ಯರು ಹಾಗೂ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *