ಏಷ್ಯನ್ ಗೇಮ್ಸ್ 2026ರ ಮಹಿಳಾ ಕ್ರಿಕೆಟ್ನ 4ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ ವಿರುದ್ಧ ಭಾರತ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಕೇವಲ 5 ಓವರ್ಗಳಲ್ಲೇ ಪಂದ್ಯವನ್ನು ಮುಕ್ತಾಯಗೊಳಿಸಿದ ಟೀಮ್ ಇಂಡಿಯಾ, ಅಬ್ಬರದ ಗೆಲುವಿನೊಂದಿಗೆ ಸೆಮಿಫೈನಲ್ಗೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದೆ.
ಜಪಾನ್ ಬ್ಯಾಟಿಂಗ್ ವೈಫಲ್ಯ: ಜಪಾನ್ನ ಕರೋಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಜಪಾನ್, ಪವರ್ಪ್ಲೇನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 24 ರನ್ ಕಲೆಹಾಕಿ ಭರವಸೆ ಮೂಡಿಸಿತ್ತು. ಆದರೆ ಹರುನಾ ಇವಾಸಕಿ (10 ರನ್) ಔಟಾದ ಬಳಿಕ ಆಟದ ಗತಿಯೇ ಬದಲಾಯಿತು. ಆರಂಭಿಕ ಆಟಗಾರ್ತಿ ಅಯಕಾ ಕ್ಯಾಟೊ-ಸ್ಟಾಫರ್ಡ್ 25 ರನ್ ಗಳಿಸಿದ್ದು ಬಿಟ್ಟರೆ, ಉಳಿದ್ಯಾವ ಬ್ಯಾಟರ್ಗಳು ಎರಡಂಕಿ ದಾಟಲಿಲ್ಲ. ಭಾರತದ ಕರಾರುವಕ್ಕಾದ ಬೌಲಿಂಗ್ ದಾಳಿಗೆ ನಲುಗಿದ ಜಪಾನ್ 19.5 ಓವರ್ಗಳಲ್ಲಿ ಕೇವಲ 57 ರನ್ಗಳಿಗೆ ಆಲೌಟ್ ಆಯಿತು.
ಭಾರತದ ಪರ ಸ್ಪಿನ್ ಮೋಡಿ ಮಾಡಿದ ಶ್ರೀಚರಣಿ 4 ವಿಕೆಟ್ ಕಿತ್ತು ಮಿಂಚಿದರೆ, ಶಫಾಲಿ ವರ್ಮಾ 2, ದೀಪ್ತಿ ಶರ್ಮಾ ಮತ್ತು ಶ್ರೇಯಾಂಕಾ ಪಾಟೀಲ್ ತಲಾ 1 ವಿಕೆಟ್ ಪಡೆದರು. ಜೊತೆಗೆ, ಭಾರತೀಯ ಆಟಗಾರ್ತಿಯರ ಚುರುಕಿನ ಫೀಲ್ಡಿಂಗ್ನಿಂದಾಗಿ ಎರಡು ರನ್-ಔಟ್ಗಳು ಮೂಡಿಬಂದವು.
ಶಫಾಲಿ ವರ್ಮಾ ಅಬ್ಬರ: 58 ರನ್ಗಳ ಸುಲಭ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ತಂಡದ ಮೊತ್ತ 17 ರನ್ ಆಗುವಷ್ಟರಲ್ಲಿ ಜಿ. ಕಮಲಿನಿ (0) ಹಾಗೂ ಭಾರತಿ ಫುಲ್ಮಾಲಿ (6 ರನ್) ಪೆವಿಲಿಯನ್ ಸೇರಿದರು. ಆದರೆ ಸ್ಫೋಟಕ ಫಾರ್ಮ್ ಮುಂದುವರಿಸಿದ ಶಫಾಲಿ ವರ್ಮಾ ಕೇವಲ 15 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 40 ರನ್ ಸಿಡಿಸಿದರು. ಇವರಿಗೆ ಅತ್ಯುತ್ತಮ ಸಾಥ್ ನೀಡಿದ ವಿಕೆಟ್ ಕೀಪರ್ ರಿಚಾ ಘೋಷ್ 12 ರನ್ ಕಲೆಹಾಕಿದರು. ಪರಿಣಾಮ, ಭಾರತ ಕೇವಲ 5 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 58 ರನ್ ಗಳಿಸುವ ಮೂಲಕ ಗುರಿ ತಲುಪಿತು.
ಈ ಬೃಹತ್ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿರುವ ಟೀಮ್ ಇಂಡಿಯಾ, ಸೆಪ್ಟೆಂಬರ್ 20ರಂದು ನಡೆಯಲಿರುವ ಸೆಮೀಸ್ ಕಾದಾಟದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದ್ದು, ಪದಕ ಖಚಿತಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j