ಚಿತ್ರದುರ್ಗ: ಬರಗಾಲದಿಂದ ತತ್ತರಿಸಿರುವ ರೈತರು ಕುಡಿಯುವ ನೀರು, ಕೆರೆ ಒತ್ತುವರಿ ತೆರವು ಹಾಗೂ ರಾಗಿ ಖರೀದಿಯ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಹೊಸದುರ್ಗ ತಾಲ್ಲೂಕಿನ ಮಾವಿನಕಟ್ಟೆ ಗೇಟ್ ಬಳಿ ಸೋಮವಾರ ಬೃಹತ್ ರಸ್ತೆ ತಡೆ (ರಸ್ತಾ ರೋಖೋ) ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ರೈತರು ತಮ್ಮ ಜಾನುವಾರುಗಳು ಮತ್ತು ಎತ್ತಿನ ಗಾಡಿಗಳೊಂದಿಗೆ ಆಗಮಿಸಿ, ರಸ್ತೆಯಲ್ಲೇ ಶಾಮಿಯಾನ ಹಾಕಿ, ಅಡುಗೆ ತಯಾರಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಗಸ್ಟ್ 14 ಮತ್ತು ಸೆಪ್ಟೆಂಬರ್ 28 ರಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಅಕ್ಟೋಬರ್ 4 ರೊಳಗೆ ಸಮಸ್ಯೆ ಬಗೆಹರಿಸದಿದ್ದರೆ ರಸ್ತೆ ತಡೆ ನಡೆಸುವುದಾಗಿ ಎಚ್ಚರಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಹೋರಾಟ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು:
- ಕೆರೆಗಳ ಒತ್ತುವರಿ ತೆರವು: ಹಿಂದಿನ ಶಾಸಕರ ಅವಧಿಯಲ್ಲಿ ತುಂಬಿನಕೆರೆ ಸೇರಿದಂತೆ ಸುತ್ತಮುತ್ತಲಿನ ಕೆರೆಗಳನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ. ತಕ್ಷಣವೇ ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಮಾವಿನಕಟ್ಟೆ ಮತ್ತು ಜೋಡಿತುಂಬಿನ ಕೆರೆಗಳ ಒತ್ತುವರಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಬೇಕು.
- ಭದ್ರಾ ಮೇಲ್ದಂಡೆ ನೀರಿನ ಸಮರ್ಪಕ ಹಂಚಿಕೆ: ಭದ್ರಾ ಮೇಲ್ದಂಡೆ ನೀರು ಹಂಚಿಕೆಯಲ್ಲಿ ಎಡದಂಡೆ ಮತ್ತು ಬಲದಂಡೆ ಭಾಗಗಳ ನಡುವೆ ತಾರತಮ್ಯ ಮಾಡಲಾಗುತ್ತಿದೆ. ಈ ಮಲತಾಯಿ ಧೋರಣೆ ಕೈಬಿಟ್ಟು ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಿ, ಹನಿ ನೀರಾವರಿ ಮೂಲಕ ರೈತರ ಜಮೀನುಗಳಿಗೆ ನೀರು ಒದಗಿಸಬೇಕು.
- ರಾಗಿ ಖರೀದಿಯ ಬಾಕಿ ಹಣ ಬಿಡುಗಡೆ: ಸರ್ಕಾರ ರಾಗಿ ಖರೀದಿಸಿ ಐದಾರು ತಿಂಗಳು ಕಳೆದರೂ, ಕೆಲ ರೈತರ ಮೂರು ವರ್ಷದ ಹಿಂದಿನ ಬಾಕಿಯೂ ಸೇರಿ ಈವರೆಗೆ ಹಣ ಪಾವತಿಯಾಗಿಲ್ಲ. ಸ್ಥಳೀಯ ಶಾಸಕರೇ ಆಹಾರ ನಿಗಮದ ಅಧ್ಯಕ್ಷರಾಗಿದ್ದರೂ ರೈತರಿಗೆ ಹಣ ತಲುಪಿಸುವಲ್ಲಿ ವಿಫಲರಾಗಿದ್ದಾರೆ. ರೈತರು ಮಕ್ಕಳ ಶಾಲಾ ಶುಲ್ಕ ಕಟ್ಟಲೂ ಪರದಾಡುತ್ತಿದ್ದು, ತಕ್ಷಣವೇ ಬಡ್ಡಿ ಸಮೇತ ಹಣ ಜಮೆ ಮಾಡಬೇಕು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಹಾಗೂ ತಾಲೂಕು ಅಧ್ಯಕ್ಷ ಮಾಯಪ್ಪ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ತಹಶೀಲ್ದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಖುದ್ದಾಗಿ ಆಗಮಿಸಿ ಬೇಡಿಕೆಗಳ ಈಡೇರಿಕೆಗೆ ಖಚಿತ ಭರವಸೆ ನೀಡುವವರೆಗೂ ಚಳವಳಿಯನ್ನು ಹಿಂಪಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಹೆಬ್ಬಳ್ಳಿ ಮಲ್ಲಿಕಾರ್ಜುನ, ಬಿಸನಹಳ್ಳಿ ಮಲ್ಲಿಕಾರ್ಜುನ, ಕೆಂಚದ್ಯಾಮಪ್ಪ, ಪಣಿ ರಂಗನಾಥ್, ಪ್ರಕಾಶ್, ಸ್ವಾಮಿ, ಕಸ್ತೂರಮ್ಮ, ನೇತ್ರಮ್ಮ, ಪ್ರದೀಪ್, ಮಂಜುನಾಥ್, ತಾಯಮ್ಮ, ಶರಣಪ್ಪ, ರಮೇಶ್, ರಾಜಾಹುಲಿ ಸೇರಿದಂತೆ ಅಪಾರ ಸಂಖ್ಯೆಯ ಗ್ರಾಮಸ್ಥರು ಪಾಲ್ಗೊಂಡಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
🟠 Instagram
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು