ಭೀಮಸಮುದ್ರ:
ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203
ನೆಲ, ಜಲ ಹಾಗೂ ರೈತರ ಹಕ್ಕುಗಳಿಗಾಗಿ ನನ್ನ ಜೀವ ಇರುವವರೆಗೂ ಹೋರಾಟ ನಡೆಸಲು ಸದಾ ಸಿದ್ಧನಿದ್ದೇನೆ ಎಂದು ಹಿರಿಯ ಹೋರಾಟಗಾರ ಎಸ್.ಆರ್. ಹಿರೇಮಠ ಹೇಳಿದರು.
ಭೀಮಸಮುದ್ರ ಗ್ರಾಮದಲ್ಲಿ ನಡೆಯುತ್ತಿರುವ ಭೀಮಸಮುದ್ರ ರೈತ ಸಂಘದ ಅನಿರ್ದಿಷ್ಟಾವಧಿ ಮುಷ್ಕರ 60ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನನಗೆ ಈಗ 80 ವರ್ಷ ವಯಸ್ಸಾಗಿದೆ. ಆದರೂ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಪ್ರೀತಿಯಿಂದ ಆಹ್ವಾನಿಸಿದಾಗ ಅವರ ಸಮಸ್ಯೆಗಳನ್ನು ಆಲಿಸಲು ಅವರ ಬಳಿಗೆ ತೆರಳುತ್ತೇನೆ. ಜೀವನದಲ್ಲಿ ಹಣಕ್ಕಿಂತ ಹೃದಯವಂತಿಕೆಯ ಶ್ರೀಮಂತಿಕೆ ಮುಖ್ಯ. ನಾವು ಹಣ ಸಂಪಾದಿಸುವುದಕ್ಕಿಂತ, ನಾವು ಹೋದ ನಂತರವೂ ನಮ್ಮ ಹೆಸರನ್ನು ಜನರು ನೆನಪಿಸಿಕೊಳ್ಳುವಂತಹ ಕೆಲಸ ಮಾಡಬೇಕು,” ಎಂದು ಹೇಳಿದರು.
ರೈತ ಸಂಘಟನೆಗಳ ಹೋರಾಟದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ಎರಡು ದಿನಗಳ ಶಿಬಿರವನ್ನು ಆಯೋಜಿಸಲಾಗುವುದು. ರೈತರು ಹಾಗೂ ಹೋರಾಟಗಾರರು ಇದೇ ರೀತಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.

ಗಣಿಗಾರಿಕೆಯಿಂದ ಪರಿಸರಕ್ಕೆ ಅಪಾಯ: ರವಿಕೃಷ್ಣಾ ರೆಡ್ಡಿ
ಕೆಆರ್‌ಎಸ್ ಪಕ್ಷದ ರಾಜ್ಯ ಅಧ್ಯಕ್ಷ ಹಾಗೂ ಸಂಸ್ಥಾಪಕ ರವಿಕೃಷ್ಣಾ ರೆಡ್ಡಿ ಮಾತನಾಡಿ, ಗಣಿಗಾರಿಕೆಯಿಂದ ಭೀಮಸಮುದ್ರ ಭಾಗದ ಜನರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
“ಮೂಗು ಮುಚ್ಚಿಕೊಂಡರೆ ಬಾಯಿ ತೆರೆಯುವ ಪರಿಸ್ಥಿತಿ ಈ ಗ್ರಾಮದಲ್ಲಿ ನಿರ್ಮಾಣವಾಗಿದೆ. ಹಿಂದಿನ ಕಾಲದಲ್ಲಿ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಕಲ್ಲು ಸೇರಿದಂತೆ ವಿವಿಧ ರೀತಿಯ ಗಣಿಗಾರಿಕೆ ನಡೆಯುತ್ತಿತ್ತು. ಆದರೆ ಇಂದು ಅದು ಕೆಲವರ ಶ್ರೀಮಂತಿಕೆಯ ವ್ಯಾಪಾರವಾಗಿ ಮಾರ್ಪಟ್ಟಿದೆ,” ಎಂದು ಅವರು ಹೇಳಿದರು.
ನಮ್ಮ ಹಿರಿಯರು ಸಂವಿಧಾನವನ್ನು ರಚಿಸಿ ದೇಶದ ಜನರನ್ನು ರಕ್ಷಿಸುವ ವ್ಯವಸ್ಥೆಯನ್ನು ನಿರ್ಮಿಸಿದ್ದಾರೆ. ಆದರೆ ಇಂದಿನ ಅಕ್ರಮ ಹಾಗೂ ಅವೈಜ್ಞಾನಿಕ ಗಣಿಗಾರಿಕೆ ಸಂವಿಧಾನದ ಆಶಯಗಳನ್ನೇ ಬುಡಮೇಲು ಮಾಡುವ ರೀತಿಯಲ್ಲಿ ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗಣಿಗಾರಿಕೆಯಿಂದ ಸುಮಾರು 16 ಕಿಲೋಮೀಟರ್ ವ್ಯಾಪ್ತಿಯಲ್ಲಿ ಧೂಳು ಆವರಿಸುತ್ತಿದ್ದು, ಮರಗಳ ಎಲೆಗಳ ಮೇಲೆ ಧೂಳು ಕುಳಿತುಕೊಳ್ಳುತ್ತಿದೆ. ಇದರಿಂದ ಪ್ರಾಣಿ, ಪಕ್ಷಿಗಳ ಬದುಕಿನ ಮೇಲೂ ಪರಿಣಾಮ ಬೀರುತ್ತಿದೆ. ಜೇನುನೊಣಗಳ ಪರಾಗಸ್ಪರ್ಶಕ್ಕೆ ತೊಂದರೆಯಾಗಿ ಕೃಷಿಯ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಅವರು ಹೇಳಿದರು.
“ಲಕ್ಷಾಂತರ ಕೋಟಿ ರೂಪಾಯಿ ಆದಾಯ ತರುವ ಗಣಿಗಾರಿಕೆ ಕೆಲವೇ ನೂರಾರು ಅಥವಾ ಸಾವಿರಾರು ಜನರ ಶ್ರೀಮಂತಿಕೆಗೆ ಕಾರಣವಾಗುತ್ತಿದೆ. ಆದರೆ ಇದರಿಂದ ಸಾಮಾನ್ಯ ಜನರ ಸಾಮಾಜಿಕ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರೈತರು ನಡೆಸುತ್ತಿರುವ ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ,” ಎಂದು ರವಿಶಂಕರ್ ರೆಡ್ಡಿ ತಿಳಿಸಿದರು.

ಗಣಿಗಾರಿಕೆಯ ಸಂಪತ್ತಿನ ಲಾಭ ರೈತ-ಕಾರ್ಮಿಕರಿಗೆ ಸಿಗಬೇಕು: ಸೋಮಶೇಖರ್
AIUTUC ಮುಖಂಡ ಸೋಮಶೇಖರ್ ಮಾತನಾಡಿ, ಅಕ್ರಮ ಗಣಿಗಾರಿಕೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಹೋರಾಟದಲ್ಲಿ ಎಸ್.ಆರ್. ಹಿರೇಮಠ ಅವರು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಗಣಿಗಾರಿಕೆ ಕೇವಲ ಲಾಭ ಗಳಿಸುವ ಉದ್ದೇಶಕ್ಕೆ ಸೀಮಿತವಾಗಬಾರದು. ದೇಶದ ಸಂಪತ್ತು ಸೃಷ್ಟಿಸುವಲ್ಲಿ ರೈತರು ಮತ್ತು ಕಾರ್ಮಿಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಆದರೆ ಈ ಸಂಪತ್ತಿನ ಬಹುಪಾಲು ದೊಡ್ಡ ಕಂಪನಿಗಳ ಪಾಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಸಾರ್ವಜನಿಕರ ಅಭಿವೃದ್ಧಿಗಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸುವ ಬದಲು, ಕಟ್ಟಡ ನಿರ್ಮಾಣ ಹಾಗೂ ಇತರ ಕಾಮಗಾರಿಗಳ ಮೂಲಕ ಕಮಿಷನ್ ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ಗಣಿಬಾಧಿತ ಪ್ರದೇಶಗಳ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಮನಸ್ಥಿತಿ ರಾಜಕಾರಣಿಗಳಲ್ಲಿ ಕಾಣುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ನೆಲ, ಜಲ, ಸಂಪನ್ಮೂಲ ರಕ್ಷಣೆಗೆ ರೈತರ ಹೋರಾಟ: ಮಾಧವ ರೆಡ್ಡಿ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಮಾಧವ ರೆಡ್ಡಿ ಮಾತನಾಡಿ, ರೈತರ ಹೋರಾಟ ದೇಶದಲ್ಲಿ ಎಲ್ಲಿಯೂ ಸೋತಿಲ್ಲ. ರೈತರು ತಮ್ಮ ನೆಲ, ಜಲ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದರು.
ಭೀಮಸಮುದ್ರ ಭಾಗದ ರೈತರು ಅಡಿಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ತಮ್ಮ ಆರೋಗ್ಯ ಹಾಗೂ ಪರಿಸರದ ರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಕೃಷಿಯನ್ನೇ ನಾಶಪಡಿಸುವ ಯಾವುದೇ ಚಟುವಟಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಸ್ಥಳೀಯ ಶಾಸಕರು ಹಾಗೂ ಉಸ್ತುವಾರಿ ಸಚಿವರು ಈ ವೇದಿಕೆಗೆ ಆಗಮಿಸಿ ರೈತರ ಪ್ರಶ್ನೆಗಳಿಗೆ ಉತ್ತರಿಸದಿರುವುದು ವಿಷಾದಕರ ಸಂಗತಿ. ಹೋರಾಟಗಾರರಿಗೆ ಯಾರಾದರೂ ಬೆದರಿಕೆ ಹಾಕಿದರೂ ಹೆದರಬೇಡಿ, ನಿಮ್ಮ ಬೆಂಬಲಕ್ಕೆ ನಾವು ಇದ್ದೇವೆ ಎಂದು ಅವರು ರೈತರಿಗೆ ಧೈರ್ಯ ತುಂಬಿದರು.
ಹಲವು ಮುಖಂಡರು, ರೈತರು ಭಾಗಿ
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಆರ್‌ಎಸ್ ಪಕ್ಷದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ, ಜಾಗನೂರು ರೈತ ಹೋರಾಟದ ಮುಖಂಡರು, ವಕೀಲರಾದ ಅವಿನಾಶ್, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೂತಯ್ಯ, ಕೆ.ಎಂ. ಶಿವಕುಮಾರ್, ಜನಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷರು, ಸುಜಾತ, ಜಿಲ್ಲಾ ಸಂಚಾಲಕಿ AIMSS, ಶಂಕರಮೂರ್ತಿ, ರೈತ ಸಂಘದ ಭೀಮಸಮುದ್ರ ಅಧ್ಯಕ್ಷರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗಣಿಬಾಧಿತ ಪರಿಸರ ಮತ್ತು ಜನಬದುಕಿನ ಹೋರಾಟ ಸಮಿತಿಯ ರಾಜ್ಯ ಸಂಚಾಲಕಿ ಡಿ. ನಾಗಲಕ್ಷ್ಮಿ ಸೇರಿದಂತೆ ನಲ್ಲಿಕಟ್ಟೆ, ಭೀಮಸಮುದ್ರ ಪಾಳ್ಯ, ಕಡ್ಲೆಗುದ್ದು, ಬೊಮ್ಮೇನಹಳ್ಳಿ, ಬೆಟ್ಟದ ನಾಗೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಹೋರಾಟದ ಮುಖಂಡರು ಭಾಗವಹಿಸಿದ್ದರು.
ಭೀಮಸಮುದ್ರ ರೈತ ಸಂಘದ ಅನಿರ್ದಿಷ್ಟಾವಧಿ ಮುಷ್ಕರ 60 ದಿನ ಪೂರೈಸಿರುವ ಹಿನ್ನೆಲೆಯಲ್ಲಿ, ಗಣಿಗಾರಿಕೆಯಿಂದ ಉಂಟಾಗುತ್ತಿರುವ ಪರಿಸರ ಹಾಗೂ ಕೃಷಿ ಸಮಸ್ಯೆಗಳ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಸಂಕಲ್ಪವನ್ನು ಮುಖಂಡರು ವ್ಯಕ್ತಪಡಿಸಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
🟠 Instagram
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು