ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್.
ಚಳ್ಳಕೆರೆ ತಾಲೂಕು ತಿಮ್ಮಪ್ಪಯ್ಯನಹಳ್ಳಿ ನ್ಯಾಯಬೆಲೆ ಅಂಗಡಿ ಮಾಲೀಕ ಹಾಗೂ ಆತನ ಮಗನ ಉದ್ಧಟತನ ಮತ್ತು ಸಾರ್ವಜನಿಕರಿಗೆ ಎಸಗುತ್ತಿರುವ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ರಿ) ಚಳ್ಳಕೆರೆ ತಾಲೂಕು ಘಟಕದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಮುಖ ಆರೋಪಗಳು ಮತ್ತು ವಿವರಗಳು:
- ಇ-ಕೆವೈಸಿ ನಿರ್ಲಕ್ಷ್ಯ: ಸರ್ಕಾರದಿಂದ ಕಡ್ಡಾಯಗೊಳಿಸಲಾದ ಇ-ಕೆವೈಸಿ ಪ್ರಕ್ರಿಯೆಯನ್ನು ಮಾಡದೆ ಮಾಲೀಕರು ಕರ್ತವ್ಯ ಲೋಪವೆಸಗಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ 2682 ಜನಸಂಖ್ಯೆ ಇದ್ದರೂ ಕೇವಲ 163 ಜನರಿಗೆ ಮಾತ್ರ ಇ-ಕೆವೈಸಿ ಮಾಡಲಾಗಿದೆ. ಪ್ರಶ್ನಿಸಿದರೆ ಉಡಾಫೆಯಿಂದ ಉತ್ತರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
- ಪಡಿತರ ವಿತರಣೆಯಲ್ಲಿ ವಿಳಂಬ: ತಿಂಗಳಿಗೆ ಕೇವಲ 1-2 ದಿನ ಮಾತ್ರ ಅಕ್ಕಿ ವಿತರಿಸಲಾಗುತ್ತಿದ್ದು, ಕೂಲಿಕಾರರು, ವೃದ್ಧರು ಹಾಗೂ ಮಹಿಳೆಯರು 5 ರಿಂದ 6 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲುವಂತೆ ತೊಂದರೆ ನೀಡಲಾಗುತ್ತಿದೆ.
- ಸುಳ್ಳು ಕೇಸುಗಳ ದಾಖಲು: ಅನ್ಯಾಯವನ್ನು ಪ್ರಶ್ನಿಸಿದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ರೈತ ಸಂಘ ಹಾಗೂ ದಲಿತ ಸಂಘಟನೆಗಳ ಮುಖಂಡರು ಸೇರಿದಂತೆ 9 ಜನರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಭಯದ ವಾತಾವರಣ ಸೃಷ್ಟಿಸಲಾಗಿದೆ.
- ಬೆದರಿಕೆ: ಅಂಗಡಿ ಮಾಲೀಕರ ಮಗ “ನಾನು ವಕೀಲ, ನಿಮ್ಮನ್ನು ಮುಗಿಸುತ್ತೇನೆ” ಎಂದು ಗ್ರಾಹಕರಿಗೆ ಮತ್ತು ಮುಖಂಡರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೂಡಲೇ ಈ ಕುರಿತು ಕೂಲಂಕುಷವಾಗಿ ತನಿಖೆ ನಡೆಸಿ, ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಗ್ರಾಮಸ್ಥರಿಗೆ ನೆಮ್ಮದಿಯ ಬದುಕು ಕಲ್ಪಿಸಿಕೊಡಬೇಕೆಂದು ರೈತ ಸಂಘದ ವತಿಯಿಂದ ಆಗ್ರಹಿಸಲಾಗಿದೆ.