ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಬಲವರ್ಧನೆಗೆ ಎಲ್ಲ ಸದಸ್ಯರ ಸಹಕಾರ ಅಗತ್ಯ: ಭೀಮಾರೆಡ್ಡಿ
ಚಿತ್ರದುರ್ಗ, ನ. 24 :
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಸಂಘದ ಯಶಸ್ಸು ಕೇವಲ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಎಲ್ಲ ಸದಸ್ಯರು ಯಾವುದೇ ಭೇದಭಾವವಿಲ್ಲದೆ, ಪರಸ್ಪರ ಸೌಹಾರ್ದತೆ ಮತ್ತು ಒಗ್ಗಟ್ಟಿನಿಂದ ಶ್ರಮವಹಿಸಿ ಕಾರ್ಯನಿರ್ವಹಿಸಿದಾಗ ಮಾತ್ರ ಸಂಘವು ಸದೃಢವಾಗಿ ಮುನ್ನಡೆಯಲು ಸಾಧ್ಯ ಎಂದು ಚಿತ್ರದುರ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ, ನಿವೃತ್ತ ಡಿವೈಎಸ್ಪಿ ಭೀಮಾರೆಡ್ಡಿ ತಿಳಿಸಿದರು.
ನಗರದ ಸಂಘದ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಚಿತ್ರದುರ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದೆ ಜಿಲ್ಲೆಯಲ್ಲಿ ಸಂಘವು ನಿಷ್ಕ್ರಿಯವಾಗಿದ್ದ ಸಂದರ್ಭದಲ್ಲಿ ತುಮಕೂರು ಸಂಘದ ಅಧ್ಯಕ್ಷರಾಗಿದ್ದ ಮಾಲೂರಪ್ಪ ಅವರು ಚಿತ್ರದುರ್ಗಕ್ಕೆ ಭೇಟಿ ನೀಡಿ ನೀಡಿದ ಪ್ರೋತ್ಸಾಹದಿಂದ ಪೊಲೀಸ್ ಮೈದಾನದಲ್ಲಿ ಸಂಘವನ್ನು ಆರಂಭಿಸಲಾಯಿತು. ನಂತರ ನಿವೃತ್ತರಾಗುತ್ತಿದ್ದ ಪೊಲೀಸ್ ಅಧಿಕಾರಿಗಳು ಸಂಘದ ಸದಸ್ಯರಾಗತೊಡಗಿದರು. ದಿವಂಗತ ಎಚ್. ಆಂಜನೇಯ ಅವರು ನಿವೃತ್ತ ಪೊಲೀಸ್ ಉಪಾಧೀಕ್ಷಕರಾಗಿ ಸಂಘದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಇತರ ಪದಾಧಿಕಾರಿಗಳ ಸಹಕಾರದೊಂದಿಗೆ ಸಂಘವನ್ನು ವ್ಯವಸ್ಥಿತವಾಗಿ ಮುನ್ನಡೆಸಲಾಯಿತು ಎಂದು ಸ್ಮರಿಸಿದರು.
ಆರಂಭದಲ್ಲಿ ಸಂಘಕ್ಕೆ ಸ್ವಂತ ಕಟ್ಟಡವಿರಲಿಲ್ಲ. ಹಳೆಯ ಪೊಲೀಸ್ ಅಧೀಕ್ಷಕರ ಕಚೇರಿ ಆವರಣದಲ್ಲಿದ್ದ ಎರಡು ಕೊಠಡಿಗಳನ್ನು ನವೀಕರಿಸಿ ಸಂಘಕ್ಕೆ ನೀಡಲಾಗಿತ್ತು. ನಂತರ ಸ್ವಂತ ಕಟ್ಟಡ ನಿರ್ಮಿಸುವ ಉದ್ದೇಶದಿಂದ ಅಂದಿನ ಪೊಲೀಸ್ ಅಧೀಕ್ಷಕರಾಗಿದ್ದ ಎಂ.ಎನ್. ಅನುಚೇತ್ ಅವರಿಗೆ ಮನವಿ ಸಲ್ಲಿಸಲಾಯಿತು. ಅಂತಿಮವಾಗಿ ಲಿಖಿತ ಮನವಿ ಹಾಗೂ ಅಗತ್ಯ ಪರವಾನಗಿ ಪ್ರಕ್ರಿಯೆಗಳ ಮೂಲಕ 60×50 ಅಡಿ ಅಳತೆಯ ಜಾಗ ಮಂಜೂರಾಯಿತು. ಅಂದಿನ ರಾಜ್ಯಾಧ್ಯಕ್ಷ ಕೆಂಪಯ್ಯ ಹಾಗೂ ಪೊಲೀಸ್ ಮಹಾನಿರ್ದೇಶಕರಾಗಿದ್ದ ಓಂಪ್ರಕಾಶ್ ಅವರ ಸಹಕಾರದಿಂದ ಜಾಗ ಲಭಿಸಿತು. ಆರಂಭದಲ್ಲಿ ನಾಲ್ಕು ಲಕ್ಷ ರೂಪಾಯಿ ಸಂಗ್ರಹಿಸಿ, ಸದಸ್ಯರು, ಪೊಲೀಸ್ ಅಧಿಕಾರಿಗಳು, ಬೆಂಗಳೂರಿನವರು ಹಾಗೂ ಸ್ಥಳೀಯ ಸಾರ್ವಜನಿಕರ ನೆರವಿನಿಂದ ಕಟ್ಟಡ ನಿರ್ಮಿಸಿ ಉದ್ಘಾಟಿಸಲಾಯಿತು ಎಂದು ವಿವರಿಸಿದರು.
ಹಿಂದಿನ ಸಭೆಯಲ್ಲಿ ಬೈಲಾ ತಿದ್ದುಪಡಿ ಹಾಗೂ ಇತರ ರಾಜ್ಯಗಳ ಸಂಘಗಳ ಕಾರ್ಯವೈಖರಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಸಮಿತಿಯ ಅವಧಿಯನ್ನು ಒಂದು ವರ್ಷ ವಿಸ್ತರಿಸಲು ನಿರ್ಧರಿಸಲಾಗಿತ್ತು. ಇದೀಗ ಕಾರ್ಯಕಾರಿ ಸಮಿತಿಯ ಅವಧಿ ಮುಕ್ತಾಯಗೊಂಡಿರುವುದರಿಂದ ನೂತನ ಸಮಿತಿ ರಚನೆಗೆ ನಿವೃತ್ತ ಪೊಲೀಸ್ ಉಪಾಧೀಕ್ಷಕರಾದ ಬಸಪ್ಪ, ಇಸಾಕ್ ಹಾಗೂ ರೆಹಮಾನ್ ಅವರನ್ನು ಒಳಗೊಂಡ ಪರಿಶೀಲನಾ ಸಮಿತಿಯನ್ನು ನೇಮಿಸಲಾಗಿದೆ. ಸಂಘದ ಅಭಿವೃದ್ಧಿಗಾಗಿ ಹಿಂದಿನಿಂದಲೂ ಶ್ರಮಿಸಿದವರು ಹಾಗೂ ಆಸಕ್ತ ಸದಸ್ಯರನ್ನು ಪರಿಗಣಿಸಿ ಹೊಸ ಸಮಿತಿ ರಚಿಸಲಾಗುವುದು ಎಂದರು.
ಸಂಘದ ಒಗ್ಗಟ್ಟು ಮತ್ತು ವ್ಯವಸ್ಥೆಗೆ ಉಪಾಧೀಕ್ಷಕರ ಮೆಚ್ಚುಗೆ
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಚಿತ್ರದುರ್ಗ ಜಿಲ್ಲೆಯ ಉಪಾಧೀಕ್ಷಕ ಅರುಣ್ ನಾಗೇಗೌಡ, ತಾವು ಕರ್ನಾಟಕದ ಸುಮಾರು ಆರು-ಏಳು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಇಷ್ಟೊಂದು ಸುಸಜ್ಜಿತ ಕಟ್ಟಡ, ಉತ್ತಮ ಸೌಲಭ್ಯಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಒಂದೆಡೆ ಸೇರಿರುವುದನ್ನು ಇದೇ ಮೊದಲ ಬಾರಿಗೆ ನೋಡುತ್ತಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದಲ್ಲಿರುವ ಉತ್ತಮ ವ್ಯವಸ್ಥೆ, ಸದಸ್ಯರ ಒಗ್ಗಟ್ಟು ಹಾಗೂ ಪರಸ್ಪರ ಸಹಕಾರ ಇದೇ ರೀತಿ ಮುಂದುವರಿಯಲಿ ಎಂದು ಆಶಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಉಪಾಧೀಕ್ಷಕ ಬಸವರಾಜು, ರಾಜ್ಯದ ಇತರ ಪೊಲೀಸ್ ನಿವೃತ್ತ ಅಧಿಕಾರಿಗಳ ಸಂಘಗಳಿಗೆ ಹೋಲಿಸಿದರೆ ಚಿತ್ರದುರ್ಗದ ಸಂಘವು ಅತ್ಯಂತ ಉತ್ತಮವಾಗಿ ಮತ್ತು ಗೌರವಯುತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಜೀವನದಲ್ಲಿ ನಾವು ಮಾಡುವ ಸಣ್ಣಪುಟ್ಟ ಒಳ್ಳೆಯ ಕೆಲಸಗಳು ಮಾತ್ರ ಕೊನೆಯವರೆಗೂ ಉಳಿಯುತ್ತವೆ. ಅಧಿಕಾರ ಮತ್ತು ಅಂತಸ್ತುಗಳು ಶಾಶ್ವತವಲ್ಲ. ಶಿವಮೊಗ್ಗ, ದಾವಣಗೆರೆ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳ ನಿವೃತ್ತ ಪೊಲೀಸ್ ಸಂಘಗಳಿಗೆ ಭೇಟಿ ನೀಡಿದ್ದೇನೆ. ಆದರೆ ಚಿತ್ರದುರ್ಗದ ಸಂಘದಂತಹ ಸುಸಜ್ಜಿತ ಕಟ್ಟಡ ಹಾಗೂ ಸದಸ್ಯರ ಸಕ್ರಿಯ ಭಾಗವಹಿಸುವಿಕೆಯನ್ನು ಬೇರೆಡೆ ಕಾಣುವುದು ಅಪರೂಪ ಎಂದು ಹೇಳಿದರು.
ಜನನ ಮತ್ತು ಮರಣ ನಿಶ್ಚಿತವಾಗಿದ್ದು, ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಈ ಭೂಮಿಯನ್ನು ತೊರೆಯಲೇಬೇಕು. ಆದ್ದರಿಂದ ಜೀವಿತಾವಧಿಯಲ್ಲಿ ಹಾಗೂ ಸೇವಾವಧಿಯಲ್ಲಿ ಮಾಡಿದ ಒಳ್ಳೆಯ ಕೆಲಸಗಳೇ ಶಾಶ್ವತವಾಗಿ ಉಳಿಯುತ್ತವೆ. ಅಪಘಾತ ಅಥವಾ ತುರ್ತು ಸಂದರ್ಭಗಳಲ್ಲಿ ಸದಸ್ಯರನ್ನು ಗುರುತಿಸಲು ಅನುಕೂಲವಾಗುವಂತೆ ಸಂಘದ ಮುಂದಿನ ಪದಾಧಿಕಾರಿಗಳು ಪ್ರತಿಯೊಬ್ಬ ಸದಸ್ಯರ ಶಾಶ್ವತ ವಿಳಾಸ, ವಯಸ್ಸು ಹಾಗೂ ತುರ್ತು ಸಂಪರ್ಕ ಸಂಖ್ಯೆಗಳ ಮಾಹಿತಿಯನ್ನು ಒಳಗೊಂಡ ವ್ಯವಸ್ಥೆ ರೂಪಿಸಬೇಕು ಎಂದು ಸಲಹೆ ನೀಡಿದರು.
ಪೊಲೀಸ್ ಸೇವೆಯಲ್ಲಿದ್ದಾಗ ಕರ್ತವ್ಯದ ಒತ್ತಡದಿಂದ ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ನಿವೃತ್ತಿಯ ನಂತರವಾದರೂ ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
75 ವರ್ಷ ಪೂರೈಸಿದ 15 ಮಂದಿಗೆ ಸನ್ಮಾನ
ಸಂಘದ ಪ್ರಧಾನ ಕಾರ್ಯದರ್ಶಿ ನಿವೃತ್ತ ಡಿವೈಎಸ್ಪಿ ಯೂಸುಫ್ ಅವರು ಸಂಘ ನಡೆದು ಬಂದ ಹಾದಿ ಹಾಗೂ ಇದುವರೆಗೆ ಕೈಗೊಂಡಿರುವ ಚಟುವಟಿಕೆಗಳ ಕುರಿತು ವಿವರಿಸಿದರು.
ಸಭೆಯಲ್ಲಿ ಕೋಶಾಧ್ಯಕ್ಷ ನಿವೃತ್ತ ಡಿವೈಎಸ್ಪಿ ಹನುಮಂತ್ ರೆಡ್ಡಿ, ಗೌರವಾಧ್ಯಕ್ಷ ಎಸ್. ಬಸವರಾಜು, ಉಪಾಧ್ಯಕ್ಷ ಟಿ.ಎಚ್. ರಾಜಪ್ಪ, ಸಹ ಕಾರ್ಯದರ್ಶಿ ಜಿ.ಎಸ್. ಕೃಷ್ಣಮೂರ್ತಿ, ಲೆಕ್ಕ ಪರಿಶೋಧಕ ಆರ್. ತಿಮ್ಮಣ್ಣ ಸೇರಿದಂತೆ ಸಂಘದ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 75 ವರ್ಷ ವಯಸ್ಸು ಪೂರೈಸಿದ 15 ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಏಪ್ರಿಲ್ 1, 2025ರಿಂದ ಮಾರ್ಚ್ 31, 2026ರವರೆಗೆ ನಿಧನರಾದ ಸಂಘದ 15 ಸದಸ್ಯರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.
ಪ್ರಸ್ತುತ ಕಾರ್ಯಕಾರಿ ಸಮಿತಿಯ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ 2026-27ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿ ಆಯ್ಕೆ ಹಾಗೂ ಸಂಘದ ನವೀಕರಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.
ಯಶೋಧಮ್ಮ ಪ್ರಾರ್ಥಿಸಿದರು. ಮಹಂತರೆಡ್ಡಿ ಸ್ವಾಗತಿಸಿದರು. ನಾಗರಾಜ್ ವಂದಿಸಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು