ಸಹಕಾರ ಬ್ಯಾಂಕುಗಳು ರೈತರ ಬೆನ್ನಿಗೆ ನಿಲ್ಲಲಿ: ಮರ್ಚೆಂಟ್ಸ್ ಬ್ಯಾಂಕ್ ಅಮೃತ ಮಹೋತ್ಸವದಲ್ಲಿ ಸಚಿವರ ಕರೆ.

ಚಿತ್ರದುರ್ಗ ನ. 29

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಸಹಕಾರ ಕ್ಷೇತ್ರದ ಬ್ಯಾಂಕುಗಳು ರೈತರ ಹಿತ ಕಾಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು, ರಾಜ್ಯ ಸೇರಿದಂತೆ ದೇಶದ ಹಲವೆಡೆ ಬರಗಾಲದ ಸ್ಥಿತಿ ಇರುವುದರಿಂದ ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಇತರ ಸಹಕಾರ ಬ್ಯಾಂಕುಗಳು ರೈತರಿಗೆ ಪೂರಕವಾಗಿ ಕೆಲಸ ಮಾಡಬೇಕಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ ರಘುಮೂರ್ತಿ ಕರೆ ನೀಡಿದರು.

ನಗರದ ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ ನಿಯಮಿತದ ಅಮೃತ ಮಹೋತ್ಸವದ ಅಂಗವಾಗಿ ಭಾನುವಾರ ಹಳೇ ಮಾಧ್ಯಮಿಕ ಶಾಲಾ ಮೈದಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಪರ್ವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾಲ ವಸೂಲಾತಿ ವೇಳೆ ಶಕ್ತರಿರುವವರಿಂದ ಪಡೆದುಕೊಳ್ಳಬೇಕು, ಆದರೆ ಬಲವಂತ ಮಾಡಿ ರೈತರಿಗೆ ತೊಂದರೆ ನೀಡಬಾರದು ಎಂಬ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಸಹಕಾರ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. 1951ರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಮಾಜಿ ಶಾಸಕ ಹಾಗೂ ಮಾಜಿ ಸಚಿವರಾದ ದಿವಂಗತ ಎ. ಭೀಮಪ್ಪ ನಾಯಕ್ ಅವರ ನೇತೃತ್ವದಲ್ಲಿ ಈ ಬ್ಯಾಂಕ್ ಪ್ರಾರಂಭವಾಯಿತು ಹಲವು ಹಿರಿಯರು ಬ್ಯಾಂಕಿಗೆ ಭದ್ರ ಬುನಾದಿ ಹಾಕಿದ್ದಾರೆ. ಬ್ಯಾಂಕಿನಲ್ಲಿ 42 ವರ್ಷ ನಿರ್ದೇಶಕರಾಗಿ ಹಾಗೂ 34 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಲಕ್ಷ್ಮೀಕಾಂತರೆಡ್ಡಿ ಅವರು ತಮ್ಮ ಸುಪುತ್ರ ರಘುರಾಮ್ ರೆಡ್ಡಿ ಅವರಿಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿರುವು ದನ್ನು ಶ್ಲಾಘಿಸಿ, ಇದು ರಾಜ್ಯದ ಅಥವಾ ದೇಶದ ಇತಿಹಾಸದಲ್ಲೇ ವಿಶೇಷ ಸಂದರ್ಭವಾಗಿರಬಹುದು ಎಂದರು.

ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಸಹಕಾರ ಬ್ಯಾಂಕುಗಳ ಸಹಯೋಗದಲ್ಲಿ ಜಾಗೃತಿ ಮೂಡಿಸಿದ್ದರ ಫಲವಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 3 ಲಕ್ಷ ರೈತರಿದ್ದು, ಆ ಪೈಕಿ ಸುಮಾರು 2.5 ಲಕ್ಷ ರೈತರು ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ ವಿಮಾ ಪರಿಹಾರ ಮಂಜೂರಾತಿ ಹಂತದಲ್ಲಿದೆ ಎಂದರು.ಜಿಲ್ಲೆಯ ಆರು ತಾಲೂಕುಗಳು ಬರಗಾಲಕ್ಕೆ ತುತ್ತಾಗಿದ್ದು, ಜಿಲ್ಲೆಯಲ್ಲಿ ಸುಮಾರು 1,700 ಕೋಟಿ ರೂಪಾಯಿ ಹಾಗೂ ರಾಜ್ಯದಲ್ಲಿ 60,000 ಕೋಟಿ ರೂಪಾಯಿಗೂ ಅಧಿಕ ಬೆಳೆ ಹಾನಿಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಜಿಲ್ಲೆಗೆ ಸುಮಾರು 250 ಕೋಟಿ ರೂಪಾಯಿಗೂ ಹೆಚ್ಚಿನ ಅನುದಾನ ಬರುವ ನಿರೀಕ್ಷೆಯಿದೆ ಮರ್ಚೆಂಟ್ ಬ್ಯಾಂಕ್ 75 ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಶತಮಾನೋತ್ಸವ ಆಚರಿಸುವತ್ತ ಮುನ್ನಡೆದು, ಬ್ಯಾಂಕಿನ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಸದಸ್ಯರ ಸಹಕಾರದಿಂದ ದೇಶದಲ್ಲೇ ಒಂದು ಇತಿಹಾಸ ನಿರ್ಮಿಸಲಿ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ಬ್ಯಾಂಕ್ ನಡೆಸುವುದು ಸುಲಭದ ಕೆಲಸವಲ್ಲ; ಸಾಲ ಪಡೆಯುವವರಷ್ಟೇ ಠೇವಣಿ ಇಡುವವರೂ ಮುಖ್ಯವಾಗಿದ್ದು, ಠೇವಣಿದಾರರ ಹಣವನ್ನು ವಾಪಸ್ ಸುರಕ್ಷಿತವಾಗಿ ಕೊಡಬೇಕು ಮತ್ತು ಸಾಲ ಕೊಟ್ಟವರಿಂದಲೂ ಸುರಕ್ಷಿತವಾಗಿ ಹಣ ಮರಳಿ ಪಡೆಯುವ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿ ಬ್ಯಾಂಕ್ ನಡೆಸುವವರು ಇರುತ್ತಾರೆ ಹಣ ಕೇಳುವ ಸಂದರ್ಭದಲ್ಲಿ ಆತ್ಮೀಯರಾದರೂ ಕೆಲವೊಮ್ಮೆ ವೈರತ್ವ ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಪ್ರತಿಯೊಂದು ರೂಪಾಯಿಯೂ ದೇವರ ದುಡ್ಡಿನಂತೆ ಜೋಪಾನವಾಗಿ ಕಾಪಾಡಬೇಕಾದ್ದಾಗಿದ್ದು, ಸರಿಯಾದ ಸಮಯಕ್ಕೆ ಬಡ್ಡಿ ಮತ್ತು ಡಿವಿಡೆಂಡ್ ಸಮೇತ ನೀಡುವ ಶ್ರದ್ಧೆ ಇರುವ ಕಾರಣ ಮರ್ಚೆಂಟ್ ಬ್ಯಾಂಕ್ 75 ವರ್ಷ ನಡೆದಿದೆ ಎಂದು ಹೇಳಿ 75 ವರ್ಷಗಳಲ್ಲಿ ಒಬ್ಬ ಠೇವಣಿದಾರರಿಗೂ ಒಂದು ರೂಪಾಯಿಯೂ ಮೋಸವಾಗದಂತೆ ಇರುವ ಬ್ಯಾಂಕ್ ಇದ್ದರೆ ಅದು ನಮ್ಮ ಮರ್ಚೆಂಟ್ ಬ್ಯಾಂಕ್ ಸಣ್ಣ ಸಂಸ್ಥೆಯಾಗಿ ಆರಂಭವಾದ ಬ್ಯಾಂಕ್ ಆರ್ಥಿಕ ಶಿಸ್ತಿನಿಂದ ನಡೆಯುತ್ತಿರುವುದರಿಂದ ರಾಜ್ಯದಲ್ಲೇ ಹೆಮ್ಮೆ ಪಡುವ ಸಂಸ್ಥೆಯಾಗಿ ಬೆಳೆದಿದ್ದು, ಮುಂದೆಯೂ ಇನ್ನಷ್ಟು ಎತ್ತರಕ್ಕೆ ಬೆಳೆಯುವ ಅವಕಾಶವಿದೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಲದ ಬಡ್ಡಿದರ ಹಾಗೂ ಠೇವಣಿ ಬಡ್ಡಿದರಗಳ ಪೈಪೋಟಿಯ ನಡುವೆ ಬ್ಯಾಂಕ್‍ನ್ನು ಸುಸ್ಥಿರವಾಗಿ ಮುನ್ನಡೆಸುವುದು ಸವಾಲಿನ ಕೆಲಸವಾಗಿದೆ ಎಂದರು.

ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್ ಮಾತನಾಡಿ, ಬಡತನದಿಂದ ಬಳಲುತ್ತಿರುವ ಭಾರತದಂತಹ ದೇಶಕ್ಕೆ ಸಹಕಾರ ಬ್ಯಾಂಕುಗಳು ಹಾಗೂ ಸಹಕಾರ ಸಂಘಗಳು ಅನಿವಾರ್ಯವಾಗಿದ್ದು, ಚಿತ್ರದುರ್ಗದ ಮರ್ಚೆಂಟ್ ಬ್ಯಾಂಕ್ 75 ವರ್ಷಗಳನ್ನು ಪೂರೈಸಿ ಸುಭದ್ರವಾಗಿ ಮುನ್ನಡೆಯುತ್ತಿರುವುದು ಸಂತಸದ ವಿಷಯವಾಗಿದೆ ಸಾವಿರಾರು ಕುಟುಂಬಗಳಿಗೆ ಆರ್ಥಿಕ ನೆರವು ನೀಡಿ ಜೀವನಮಟ್ಟ ಸುಧಾರಿಸಿದೆ ಅಮೆರಿಕದಂತಹ ಮುಂದುವರಿದ ದೇಶಗಳಲ್ಲಿ ಇಂತಹ ಸಹಕಾರಿ ಬ್ಯಾಂಕುಗಳು ಅಥವಾ ಸಂಘಗಳಿಲ್ಲ; ಏಕೆಂದರೆ ಶ್ರೀಮಂತರಿಗೆ ಇವುಗಳ ಅಗತ್ಯವಿಲ್ಲ, ಆದರೆ ಬಡವರಿಗೆ ಸಹಕಾರಿ ಬ್ಯಾಂಕುಗಳ ಹಣಕಾಸಿನ ನೆರವು ಮತ್ತು ಸಹಕಾರ ಅಗತ್ಯವಿದೆ ದೇಶದಲ್ಲಿ ಲಕ್ಷಾಂತರ ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳು ಬಡವರ ಆರ್ಥಿಕ ಜೀವನ ಸುಧಾರಿಸಲು ಶ್ರಮಿಸುತ್ತಿವೆ ಮರ್ಚೆಂಟ್ ಬ್ಯಾಂಕ್ 75 ವರ್ಷಗಳನ್ನು ಪೂರೈಸಿದ್ದು, ಸಾವಿರಾರು ಹಾಗೂ ಲಕ್ಷಾಂತರ ಕುಟುಂಬಗಳ ಜೀವನಮಟ್ಟ ಮತ್ತು ಜೀವನೋಪಾಯಕ್ಕೆ ನೆರವಾಗಿದೆ ಹಲವು ಕಡೆ ಆರ್ಥಿಕ ಸಂಸ್ಥೆಗಳು ಮುಚ್ಚಿಹೋಗಿರುವ ಸಂದರ್ಭದಲ್ಲಿ, ಆಡಳಿತ ಮಂಡಳಿ ಮತ್ತು ನೌಕರರ ವಿಚಾರಗಳನ್ನು ಬದಿಗಿಟ್ಟು ನೋಡಿದಾಗ ಮರ್ಚೆಂಟ್ ಬ್ಯಾಂಕ್ 75 ವರ್ಷಗಳ ಬಳಿಕವೂ ಸುಭದ್ರವಾಗಿದ್ದು, ಗ್ರಾಹಕರು ಮತ್ತು ಸದಸ್ಯರ ನಂಬಿಕೆಯನ್ನು ಉಳಿಸಿಕೊಂಡಿದೆ ಎಂದರು.

90 ವರ್ಷ ವಯಸ್ಸಿನ ಲಕ್ಷ್ಮೀಕಾಂತ್ ರೆಡ್ಡಿ ಅವರಿಗೆ ಇನ್ನು ಹತ್ತು ವರ್ಷಗಳಲ್ಲಿ 100 ವರ್ಷ ತುಂಬಲಿದ್ದು, ಮೊದಲು ಅವರ ಶತಮಾನೋತ್ಸವವನ್ನು ನಾವೆಲ್ಲರೂ ಸೇರಿ ಆಚರಿಸಬೇಕು ಇಂದಿನ ದಿನಗಳಲ್ಲಿ ಅಪರೂಪ ವಾಗಿರುವ ಇಂತಹ ಹಿರಿಯ ಜೀವಗಳನ್ನು ಉಳಿಸಿಕೊಂಡು ಸಂತೋಷದಿಂದ ಇಡುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ರಘುರಾಮ್ ರೆಡ್ಡಿರವರು ಅಧ್ಯಕ್ಷರಾಗಿ ತಂದೆಯವರಿಗಿಂತಲೂ ಹೆಚ್ಚಾಗಿ ನಯ-ವಿನಯ, ಸ್ನೇಹಜೀವಿ ಸ್ವಭಾವ ಹಾಗೂ ಎಲ್ಲಾ ಜಾತಿ-ವರ್ಗದವರೊಂದಿಗೆ ಆತ್ಮೀಯತೆಯಿಂದ ಬೆರೆಯುವ ಗುಣ ಹೊಂದಿರುವ ಸಮರ್ಥ ವ್ಯಕ್ತಿಯನ್ನು ದೊಡ್ಡ ಸಂಸ್ಥೆಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಶ್ಲಾಘಿಸಿದ್ದಾರೆ.

ಆದಿಜಾಂಬವ ಅಭಿವೃದ್ಧಿ ನಿಗಮದ ಅದ್ಯಕ್ಷರಾದ ಜಿ.ಎಸ್.ಮಂಜುನಾಥ್ ಮಾತನಾಡಿ ಮರ್ಚಂಟ್ ಬ್ಯಾಂಕ್ ಕೇವಲ ವ್ಯವಹಾರ ಮತ್ತು ಬಡ್ಡಿ ವಸೂಲಿಗೆ ಸೀಮಿತವಾಗದೆ, ರಕ್ತದಾನ, ಉದ್ಯಾನವನಗಳ ಅಭಿವೃದ್ಧಿ ಹಾಗೂ ದೈವಾಧೀನರಾದವರ ಕುಟುಂಬಗಳಿಗೆ ನೆರವು ನೀಡುವಂತಹ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಈ ಮನರಂಜನಾ ಕಾರ್ಯಕ್ರಮವು ಸಾರ್ವಜನಿಕರಲ್ಲಿ ಹೊಸ ಚೈತನ್ಯ ತುಂಬುವ ಪ್ರಯತ್ನವಾಗಿದೆ ಚಿತ್ರದುರ್ಗ ಜಿಲ್ಲೆಯು ಕಲೆ, ಕ್ರೀಡೆ ಹಾಗೂ ವಿವಿಧ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನೆಲವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಜಡತ್ವ ಕಂಡುಬರುತ್ತಿದೆ ಯಾವ ವಿಷಯಕ್ಕೆ ಸ್ಪಂದಿಸಬೇಕು ಮತ್ತು ಯಾವುದಕ್ಕೆ ಸ್ಪಂದಿಸಬಾರದು ಎಂಬ ಬಗ್ಗೆ ಜನರು ಚಿಂತಿಸುವ ಅಗತ್ಯವಿದೆ ಬ್ಯಾಂಕ್ ಸರ್ಕಾರದಂತೆ ಎಲ್ಲರಿಗೂ ಕೈಹಿಡಿಯಲು ಸಾಧ್ಯವಾಗದಿದ್ದರೂ, ಮರುಪಾವತಿ ಮಾಡುವ ಶಕ್ತಿ ಮತ್ತು ಸಿದ್ಧತೆ ಇರುವವರಿಗೆ ಮಾತ್ರ ಸಾಲ ನೀಡಿ ಅವರನ್ನು ಮೇಲೆತ್ತುವ ಕೆಲಸವನ್ನು ಲಕ್ಷ್ಮೀಕಾಂತ್ ರೆಡ್ಡಿ ಅವರು ಜವಾಬ್ದಾರಿಯಿಂದ ನಿಭಾಯಿಸಿದ್ದಾರೆ.

ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಗಿಡಗಳನ್ನು ಬೆಳೆಸಿ ತಂಪಾಗಿರಿಸಿಕೊಳ್ಳುವುದು ನಾಗರಿಕರ ಕರ್ತವ್ಯವಾಗಿದ್ದು, ಅದರಿಂದ ಹೊರಗಿನಿಂದ ಜನರು ನಗರವನ್ನು ನೋಡಲು ಬರುತ್ತಾರೆ ಸಾಲುಮರಗಳನ್ನು ಮತ್ತು ಉದ್ಯಾನವನದ ಸಸಿಗಳನ್ನು ಕೀಳುವುದು ಹಾಗೂ ರಸ್ತೆಗಳನ್ನು ಒತ್ತುವರಿ ಮಾಡಿಕೊಂಡು ಕೊಳೆಗೇರಿಯಂತೆ ಮಾಡಿಕೊಳ್ಳುತ್ತಿದ್ದಾರೆ. ನಿಗದಿತ ನಿವೇಶನಕ್ಕಿಂತ ಹೆಚ್ಚಾಗಿ ಒತ್ತುವರಿ ಮಾಡಿ ಮನೆ ಕಟ್ಟಿಕೊಂಡಿರುವುದರಿಂದ ಕಾನೂನಾತ್ಮಕವಾಗಿ ಕಟ್ಟಡಗಳನ್ನು ತೆರವುಗೊಳಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಸಿ ಸುಮಾರು 45 ವರ್ಷಗಳ ಹಿಂದೆ 50 ಸಾವಿರವಿದ್ದ ಚಿತ್ರದುರ್ಗ ನಗರದ ಜನಸಂಖ್ಯೆ ಈಗ ನಾಲ್ಕು ಲಕ್ಷಕ್ಕೆ ತಲುಪಿದ್ದು, ಪಾರ್ಕಿಂಗ್ ಸಮಸ್ಯೆ ಎದುರಾಗಿದೆ. ನೆರೆಹೊರೆಯವರು ಒತ್ತುವರಿ ಮಾಡುವಾಗ ಯಾರೂ ಪ್ರಶ್ನಿಸದಿರುವುದು ಮತ್ತು ರಾಜಕೀಯ ಪ್ರಭಾವದಿಂದ ನಗರಸಭೆಯೂ ಒತ್ತುವರಿ ತಡೆಯದಿರು ವುದರಿಂದ ನಗರದ ಬೆಳವಣಿಗೆ ಹಾಗೂ ಮಾರುಕಟ್ಟೆ ಮೌಲ್ಯದ ಮೇಲೆ ಪರಿಣಾಮ ಬೀರುತ್ತಿದೆ ಚಿತ್ರದುರ್ಗ ನಗರದ ಒತ್ತುವರಿ ತಡೆದು ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ರೂಪಿಸಲು ಪ್ರಜ್ಞಾವಂತ ನಾಗರಿಕರು ಒಟ್ಟಾಗಿ ಕೈಜೋಡಿಸಬೇಕು ಎಂದರು.

ಮರ್ಚೆಂಟ್ಸ್ ಬ್ಯಾಂಕ್‍ನ ನಿಕಟ ಪೂರ್ವ ಅಧ್ಯಕ್ಷರು, ನಿರ್ದೇಶಕರಾದ ಎಸ್.ಆರ್. ಲಕ್ಷ್ಮೀಕಾಂತ ರೆಡ್ಡಿ, ಬ್ಯಾಂಕ್‍ನ ನಿದೇರ್ಶಕರಾದ ಸುರೇಶ್ ಬಾಬು ಸ್ವಾಗತಿಸಿದರು, ಮರ್ಚೆಂಟ್ಸ್ ಬ್ಯಾಂಕ್‍ನ ಅಧ್ಯಕ್ಷರಾದ ರಘು ರಾಮ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರುನಿರ್ದೇಶಕರಾದ ಶ.ಮಂಜುನಾಥ್ ವಂದಿಸಿದರು. ಕಾರ್ಯ ಕ್ರಮದ ನಂತರ ರಾಜೇಶ್ ಕೃಷ್ಣನ್ ಮತ್ತು ತಂಡ,ಬೆಂಗಳೂರು, ಇವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು. ನವೀನ್ ಮಸ್ಕಲ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಮರ್ಚೆಂಟ್ಸ್ ಬ್ಯಾಂಕ್‍ನ ಉಪಾಧ್ಯಕ್ಷ ಎಲ್.ಇ.ಶ್ರೀನಿವಾಸಬಾಬು, ನಿರ್ದೇಶಕರುಗಳಾದ ಎಲ್.ಜಯಣ್ಣ,ರಾಜಾನಾಯ್ಕ, ಟಿ.ಹೆಚ್.ರಾಜಪ್ಪ, ಮುಕುಂದ ರಾವ್, ಸುರೇಶ್, ಡಿ.ಪ್ರಕಾಶ್, ಇಂದ್ರಮ್ಮ, ಸುಜಾತ, ವೃತ್ತಿಪರ ನಿರ್ದೇಶಕರುಗಳಾದ ರಾಜೀವ್, ಕಾರ್ತಿಕ್,ಸೋಮಶೇಖರ್ ಹಾಜರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *