ಬಳ್ಳಾರಿಯನ್ನು ‘ಬಾಲ್ಯ ವಿವಾಹ ಮುಕ್ತ ಜಿಲ್ಲೆ’ಯನ್ನಾಗಿಸಲು ಪಣ: ಜಿಲ್ಲಾಡಳಿತ ಹಾಗೂ ರೀಚ್ ಸಂಸ್ಥೆಯಿಂದ ವಿಶೇಷ ಜಾಗೃತಿ ಅಭಿಯಾನ

(ವರದಿ: ಕುಮಾರ್ ಜಿ.ಎನ್)

ಬಳ್ಳಾರಿ (ಜೂನ್ 18, 2026): ಜಿಲ್ಲೆಯಲ್ಲಿ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ತಡೆಗಟ್ಟಿ, ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಸದುದ್ದೇಶದಿಂದ ಬಳ್ಳಾರಿ ಜಿಲ್ಲಾಡಳಿತ, ‘ರೀಚ್’ ಸಂಸ್ಥೆ ಹಾಗೂ ‘ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್’ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ವಿಶೇಷ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲಾಧಿಕಾರಿಗಳಿಂದ ಜಾಗೃತಿ ಫಲಕ ಬಿಡುಗಡೆ: ಗುರುವಾರ (ಜೂ. 18) ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತಾದ ಜಾಗೃತಿ ಫಲಕಗಳನ್ನು ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರು ಬಿಡುಗಡೆ ಮಾಡಿದರು. ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರಗಳು ಹಾಗೂ ದೇವಸ್ಥಾನಗಳಲ್ಲಿ ಈ ಜಾಗೃತಿ ಫಲಕಗಳನ್ನು ಅಳವಡಿಸಲು ಕ್ರಮಕೈಗೊಳ್ಳುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಇದೇ ವೇಳೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರಾಮಕೃಷ್ಣಾನಾಯಕ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಶಶಿಕಾಂತ್, ರೀಚ್ ಸಂಸ್ಥೆಯ ಅಧ್ಯಕ್ಷ ಸಿಂಹ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಶ್ರೀದರಗಟ್ಟೆ ಗ್ರಾಮ ಪಂಚಾಯಿತಿಯಲ್ಲಿ ಮಹಾಸಭೆ: ಇದೇ ಅಭಿಯಾನದ ಭಾಗವಾಗಿ ಶ್ರೀದರಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಸಂಜೀವಿನಿ ಒಕ್ಕೂಟ’ದ ಮಹಾಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ಪ್ರಮುಖರಾದ ಬಸಮ್ಮ ಅವರು, “ಬಾಲ್ಯ ವಿವಾಹ ನಿಷೇಧದ ಕುರಿತಾದ ಫಲಕಗಳನ್ನು ಕೇವಲ ದೇವಸ್ಥಾನಗಳಷ್ಟೇ ಅಲ್ಲದೆ, ಮಠ-ಮಂದಿರಗಳು ಹಾಗೂ ಚರ್ಚ್‌ಗಳಲ್ಲೂ ಅಳವಡಿಸಲಾಗುವುದು. ಗ್ರಾಮದಲ್ಲಿ ಎಲ್ಲಿಯಾದರೂ ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡುಬಂದರೆ ಸಾರ್ವಜನಿಕರು ತಕ್ಷಣವೇ ಸಹಾಯವಾಣಿ ಸಂಖ್ಯೆಗಳಾದ 1098 ಅಥವಾ 112 ಗೆ ಕರೆ ಮಾಡಿ ಮಾಹಿತಿ ನೀಡಬೇಕು” ಎಂದು ಮನವಿ ಮಾಡಿದರು.

ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಮಾದೇವಿ ಅವರು ಇಲಾಖೆಯಿಂದ ದೊರೆಯುವ ಮಾತೃವಂದನ, ಉದ್ಯೋಗಿನಿ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳು ಮತ್ತು ಯೋಜನೆಗಳ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ (DCPU) ಸುಧಾ ಅವರು ಮಾತನಾಡಿ, “ಶ್ರೀದರಗಟ್ಟೆ ಗ್ರಾಮ ಪಂಚಾಯಿತಿಯನ್ನು ಮೊದಲು ಬಾಲ್ಯ ವಿವಾಹ ಮುಕ್ತವನ್ನಾಗಿಸಬೇಕು, ಆ ಮೂಲಕ ಇಡೀ ಬಳ್ಳಾರಿ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಕೈಜೋಡಿಸಬೇಕು” ಎಂದು ಕರೆ ನೀಡಿದರು.

ತಾಲೂಕು ಪಂಚಾಯಿತಿಯ ಎನ್.ಆರ್.ಎಲ್.ಎಂ (NRLM) ಸಂಯೋಜಕರಾದ ಗಂಗಾಧರ್ ಅವರು ಸಂಜೀವಿನಿ ಒಕ್ಕೂಟದ ಸಮನ್ವಯತೆಯ ಕುರಿತು ವಿವರಿಸಿದರು. “ಇದು ಬಡವರ ಏಳಿಗೆಗಾಗಿ ರೂಪಿಸಿರುವ ಯೋಜನೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಒಕ್ಕೂಟದಲ್ಲಿ ನೋಂದಣಿಯಾಗಬೇಕು” ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಎನ್.ಆರ್.ಎಲ್.ಎಂ ಸಿಬ್ಬಂದಿ ಅಶ್ವಿನಿ ನಿರೂಪಿಸಿದರು. ಸಭೆಯಲ್ಲಿ ಒಕ್ಕೂಟದ ಎಲ್ಲಾ ಮಹಿಳಾ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೀಚ್ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *