ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ : ಇದೇ ತಿಂಗಳ 23 ರಂದು ನಡೆಯುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಶಿಹುಲಿಕುಂಟೆ ಮಠ್ ರವರ ಗೆಲುವಿಗೆ ಎಲ್ಲರೂ ಸೇರಿ ವ್ಯವಸ್ಥಿತವಾಗಿ ಕೆಲಸ ಮಾಡೋಣ ಎಂದು ಕೆಡಿಪಿ. ಸದಸ್ಯ ಕೆ.ಸಿ.ನಾಗರಾಜ್ ಮನವಿ ಮಾಡಿದರು.
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ನಿಂದ ಲಿಡ್ಕರ್ ಭವನದಲ್ಲಿ ಬುಧವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ವಾರ್ಡ್, ಬೂತ್, ಗ್ರಾಮ ಮಟ್ಟದಲ್ಲಿ ಪದವೀಧರರನ್ನು ಸೇರಿಸಿ ಚರ್ಚೆ ನಡೆಸಿ ನಂತರ ತಂಡ ಕಟ್ಟಿಕೊಂಡು ಪ್ರತಿ ಮತದಾರರನ್ನು ಸಂಪರ್ಕಿಸಿ ಕಾಂಗ್ರೆಸ್ ಅಭ್ಯರ್ಥಿ
ಶಶಿಹುಲಿಕುಂಟೆಮಠ್ಗೆ ಮತ ನೀಡಿ ಜಯಶಾಲಿಯನ್ನಾಗಿಸುವಂತೆ ವಿನಂತಿಸಿಕೊಳ್ಳೋಣ.
ಕಾರ್ಯಕರ್ತರು, ಪದಾಧಿಕಾರಿಗಳು, ಮುಖಂಡರುಗಳು ಸಕ್ರಿಯವಾಗಿ ಚುನಾವಣೆಯಲ್ಲಿ ತೊಡಗಿಕೊಂಡು ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಮಾತನಾಡಿ ಪದವೀಧರರನ್ನು ಮತ ಪಟ್ಟಿಗೆ ಎನ್ರೋಲ್ ಮಾಡಿಸಿರುವುದು ಪಕ್ಷದ ಸಾಧನೆ. ಕಾಂಗ್ರೆಸ್ ಅಭ್ಯರ್ಥಿ
ಶಶಿಹುಲಿಕುಂಟೆ ಮಠ್ ಯೂತ್ ಕಾಂಗ್ರೆಸ್ನಿಂದ ಬಂದವರು. ಕಳೆದ ಆರು ತಿಂಗಳಿನಿಂದಲೂ ಐದು ಜಿಲ್ಲೆಗಳಲ್ಲಿ ಎಲ್ಲಾ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಪದವೀಧರರು, ಶಿಕ್ಷಕರು, ಉಪನ್ಯಾಸಕರುಗಳನ್ನು ಸಂಪರ್ಕಿಸುತ್ತಿದ್ದಾರೆ. ಚುನಾವಣೆಗೆ ಇನ್ನು ಕೇವಲ ಒಂಬತ್ತು ದಿನಗಳ ಸಮಯಾವಕಾಶವಿರುವುದರಿಂದ ಅಭ್ಯರ್ಥಿಯೇ ಎಲ್ಲಾ ಕಡೆ ಸುತ್ತಾಡುವುದು ಕಷ್ಟವಾಗುತ್ತದೆ. ಹಾಗಾಗಿ ಕಾರ್ಯಕರ್ತರು, ಪದಾದಿಕಾರಿಗಳು, ಮುಖಂಡರುಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪದವೀಧರರ ಬಳಿ ಹೋಗಿ ಮತಯಾಚಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಐವತ್ತು ಸಾವಿರ ಮತಗಳಿರುವುದರಿಂದ ಎಲ್ಲಾ ಕ್ಷೇತ್ರದ ಶಾಸಕರುಗಳನ್ನು ಅಭ್ಯರ್ಥಿ ಭೇಟಿಯಾಗಬೇಕು. ವಿಧಾನಸಭೆಯಲ್ಲಿ 136 ಕಾಂಗ್ರೆಸ್ ಶಾಸಕರುಗಳಿದ್ದು, ಏನೆ ನಿರ್ಣಯ ಕೈಗೊಂಡರು ಮೇಲ್ಮನೆಯಲ್ಲಿ ಬಿಲ್ ಪಾಸ್ ಆಗಬೇಕಾಗಿರುವುದರಿಂದ ವಿಧಾನಪರಿಷತ್ ಸದಸ್ಯರುಗಳ ಸಂಖ್ಯೆ ಹೆಚ್ಚಾಗಬೇಕಾಗಿರುವುದರಿಂದ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಅತ್ಯಂತ ಮಹತ್ವವಿದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ ಮಾತನಾಡುತ್ತ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲು ಶಶಿಹುಲಿಕುಂಟೆ ಮಠ್ಗೆ ಪಕ್ಷ ಮೊದಲೆ ಟಿಕೆಟ್ ನೀಡಿರುವುದರಿಂದ ಜಯ ಖಚಿತ. ಯಾವುದೇ ಚುನಾವಣೆಯಾಗಲಿ ಒಬ್ಬರಿಂದ ಸಾಧ್ಯವಿಲ್ಲ. ಕಾರ್ಯಕರ್ತರು, ಪದಾಧಿಕಾರಿಗಳು, ಮುಖಂಡರು ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಿದಾಗ ಮಾತ್ರ ಅಭ್ಯರ್ಥಿ ಗೆಲುವು ಸುಲಭವಾಗಲಿದೆ ಎಂದು ನುಡಿದರು.
ವಾರ್ಡ್, ಹೋಬಳಿ, ಪಂಚಾಯಿತಿ, ಬೂತ್ ಮಟ್ಟದಲ್ಲಿ ಒಬ್ಬೊಬ್ಬರನ್ನು ನೇಮಿಸಿ ಸಂಪೂರ್ಣ ಜವಾಬ್ದಾರಿ ಕೊಡಬೇಕು. ಇಲ್ಲಿಯವರೆಗೂ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಈ ಬಾರಿ ಖಂಡಿತ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್ಕುಮಾರ್ ಮಾತನಾಡಿ ಅಭ್ಯರ್ಥಿ ಶಶಿಹುಲಿಕುಂಟೆ ಮಠ್ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಎಲ್ಲರ ಸಂಪರ್ಕದಲ್ಲಿದ್ದಾರೆ. ನಗರದ 35 ವಾರ್ಡ್ಗಳಲ್ಲಿಯೂ ಕಾರ್ಯಕರ್ತರು, ಪದಾಧಿಕಾರಿಗಳು, ಮುಖಂಡರುಗಳಿಗೆ ಜವಾಬ್ದಾರಿ ವಹಿಸಿದರೆ ಅಭ್ಯರ್ಥಿ ಪರ ಪದವೀಧರರಲ್ಲಿ ಮತ ಯಾಚಿಸಲು ಸುಲಭವಾಗುತ್ತದೆಂದು ಸಲಹೆ ನೀಡಿದರು.
ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತನಂದಿನಿಗೌಡ, ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಹೆಚ್.ಶಬ್ಬೀರ್ಭಾಷ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್, ಮಾಜಿ ಅಧ್ಯಕ್ಷ ಅಬ್ದುಲ್ಲಾ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮೋಕ್ಷರುದ್ರಸ್ವಾಮಿ, ಮುನಿರಾ ಎ.ಮಕಾಂದಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ನಜ್ಮತಾಜ್ ಇನ್ನು ಅನೇಕರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.