ಶಿಕ್ಷಣಕ್ಕೆ ಆದ್ಯತೆ ನೀಡಿದಾಗಲೇ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ: ಜಿ.ಎನ್. ಮಲ್ಲಿಕಾರ್ಜುನಪ್ಪ

ಚಿತ್ರದುರ್ಗ: ಶಿಕ್ಷಣ ಕ್ಷೇತ್ರಕ್ಕೆ ನೀಡುವ ಆದ್ಯತೆಯ ಮೇಲೆಯೇ ದೇಶದ ಅಭಿವೃದ್ಧಿ ನಿಂತಿದೆ. ಗುರುವಿಗೆ ಪೂಜ್ಯನೀಯ ಸ್ಥಾನ ನೀಡುವ ಸಮಾಜ ಸರ್ವೋಚ್ಚ ಸ್ಥಾನಕ್ಕೆ ತಲುಪುತ್ತದೆ ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷ ಜಿ.ಎನ್. ಮಲ್ಲಿಕಾರ್ಜುನಪ್ಪ ಹೇಳಿದರು.

ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಹಾಗೂ ಕರ್ನಾಟಕ ರಾಜ್ಯ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ನಿವೃತ್ತಿ ಶಿಕ್ಷಕರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ 2026–27ನೇ ಸಾಲಿನ ‘ವಿಜ್ಞಾನ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಕ್ಷೇತ್ರ ಸದಾ ಪ್ರೇರಣಾದಾಯಕವಾದದ್ದು. ಜ್ಞಾನ ಮತ್ತು ಶಿಕ್ಷಣದಿಂದ ವಂಚಿತರಾದವರ ಬದುಕಿನಲ್ಲಿ ಅಕ್ಷರದ ಜ್ಯೋತಿ ಬೆಳಗಿಸಿ, ಅಭಿವೃದ್ಧಿಯ ಬಾಗಿಲು ತೆರೆಯುವ ಮಹತ್ತರ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಸಂಸ್ಕೃತಿಯ ಚಿಂತಕರಾಗಿರುವ ಶಿಕ್ಷಕರ ಜವಾಬ್ದಾರಿ ಇಂದಿನ ಸಂದರ್ಭದಲ್ಲಿ ಮತ್ತಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.

ಸಂಶೋಧನಾ ಕ್ಷೇತ್ರಕ್ಕೆ ಇಸ್ರೇಲ್ ನೀಡುವಷ್ಟು ಪ್ರಾಮುಖ್ಯತೆಯನ್ನು ಬೇರೆ ಯಾವುದೇ ದೇಶ ನೀಡುತ್ತಿಲ್ಲ. ಅಲ್ಲಿನ ಸಂಶೋಧನೆಗಳ ಪ್ರಯೋಜನವನ್ನು ಅಮೆರಿಕ ಪಡೆದುಕೊಳ್ಳುತ್ತಿದೆ. ಆದರೆ ಭಾರತದಲ್ಲಿ ಶಿಕ್ಷಣ ಕ್ಷೇತ್ರ ಲಾಭದಾಯಕವಲ್ಲ ಎಂಬ ಮನಸ್ಥಿತಿ ಕೆಲವು ಚುನಾಯಿತ ಜನಪ್ರತಿನಿಧಿಗಳಲ್ಲಿರುವುದು ವಿಷಾದನೀಯ. ಪ್ರತಿ ಸರ್ಕಾರದಲ್ಲಿಯೂ ಇದಕ್ಕೆ ಉದಾಹರಣೆಗಳನ್ನು ಕಾಣಬಹುದು ಎಂದು ಅಭಿಪ್ರಾಯಪಟ್ಟರು.

ಸಮಾಜದಲ್ಲಿ ಅಸಮತೋಲನ ಮತ್ತು ಅರಾಜಕತೆ ಹೆಚ್ಚಾದರೆ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಿ ನಿಲ್ಲುವುದಿಲ್ಲ. ಸಂಸ್ಕೃತಿ, ಶಿಕ್ಷಣ ಹಾಗೂ ಜ್ಞಾನದ ಕ್ರಿಯಾಶೀಲತೆಯ ಮೂಲಕ ಬದುಕನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಬೇಕು. ವಿದ್ಯಾರ್ಥಿಗಳಿಗೆ ಕೇವಲ ಅಂಕ ಗಳಿಸುವ ಶಿಕ್ಷಣ ನೀಡದೆ, ಬದುಕಿಗೆ ಉಪಯುಕ್ತವಾಗುವ ಶಿಕ್ಷಣ ನೀಡಬೇಕು. ಶಿಕ್ಷಕರ ಮೇಲಿನ ನಿರೀಕ್ಷೆ ಹೆಚ್ಚಿದ್ದು, ಸ್ವಪ್ರೇರಣೆಯಿಂದ ಮಾತ್ರ ದೊಡ್ಡ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.

ಸಾಧಕರನ್ನು ಗೌರವಿಸುವುದರಿಂದ ಮತ್ತೊಬ್ಬರಿಗೆ ಸಾಧನೆ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ. ಶಿಕ್ಷಕರಿಗೆ ಕಲಿಯುವುದು ಮತ್ತು ಕಲಿಸುವುದೇ ಜೀವನದ ದೊಡ್ಡ ಗುರಿಯಾಗಬೇಕು. ಈ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಜಿ.ಎನ್. ಮಲ್ಲಿಕಾರ್ಜುನಪ್ಪ ಕರೆ ನೀಡಿದರು.

ರೋಬೋಟಿಕ್ ಶಿಕ್ಷಕರಿಗಿಂತ ಮಾನವ ಶಿಕ್ಷಕರೇ ಪರಿಣಾಮಕಾರಿ

ಫೌಂಡೇಶನ್ ಉಪಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ ಮಾತನಾಡಿ, ಶಾಲೆಗಳಲ್ಲಿ ರೋಬೋಟಿಕ್ ಶಿಕ್ಷಕರ ಪ್ರವೇಶವಾಗುತ್ತಿದೆ. ಬೆಂಗಳೂರಿನ ಎರಡು ಪ್ರತಿಷ್ಠಿತ ಸಂಸ್ಥೆಗಳಲ್ಲಿ 2019ರಲ್ಲೇ ಪ್ರಾಯೋಗಿಕವಾಗಿ ರೋಬೋಟಿಕ್ ಶಿಕ್ಷಕರ ಮೂಲಕ ಕಲಿಕೆ ನಡೆಸಲಾಗಿತ್ತು. ಆದರೆ ಶಿಕ್ಷಣ ತಜ್ಞರ ವರದಿ ಪ್ರಕಾರ ಯಂತ್ರಗಳು ಚಲಿಸಬಲ್ಲವು; ಮನುಷ್ಯ ಶಿಕ್ಷಕರಷ್ಟು ಪರಿಣಾಮಕಾರಿಯಾಗಿ ಬೋಧಿಸಲು ಸಾಧ್ಯವಿಲ್ಲ. ತರಗತಿಯಲ್ಲಿ ಶಿಕ್ಷಕರ ಭೌತಿಕ ಉಪಸ್ಥಿತಿ ಅತ್ಯಂತ ಮುಖ್ಯ ಎಂದು ಹೇಳಿದರು.

ಮಕ್ಕಳಲ್ಲಿ ಮೊದಲು ಪುಸ್ತಕ ಓದುವ ಅಭ್ಯಾಸ ಬೆಳೆಸಬೇಕು. ಪುಸ್ತಕಗಳ ಬಗ್ಗೆ ಇರುವ ಮನೋಭಾವವನ್ನು ಬದಲಿಸಿ ಓದುವ ಹವ್ಯಾಸ ಬೆಳೆಸಿದರೆ ಮಗು ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಅಗತ್ಯ

ಫೌಂಡೇಶನ್ ನಿರ್ದೇಶಕ ಈ. ರುದ್ರಮುನಿ ಮಾತನಾಡಿ, ಶಿಕ್ಷಣದಲ್ಲಿ ಪ್ರಾಥಮಿಕ ಹಂತ ಅತ್ಯಂತ ಮುಖ್ಯವಾಗಿದೆ. ಸರ್ಕಾರ ಉನ್ನತ ಶಿಕ್ಷಣಕ್ಕೆ ನೀಡುವ ಆದ್ಯತೆಯನ್ನೇ ಪ್ರಾಥಮಿಕ ಶಿಕ್ಷಣಕ್ಕೂ ನೀಡಬೇಕು. ತಳಪಾಯ ಗಟ್ಟಿಯಾಗಿದ್ದರೆ ಮಾತ್ರ ಕಟ್ಟಡ ಸದೃಢವಾಗಿರುತ್ತದೆ. ಅದೇ ರೀತಿ ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಉತ್ತಮವಾಗಿದ್ದರೆ ಮುಂದಿನ ಹಂತದ ಶಿಕ್ಷಣವೂ ಪರಿಣಾಮಕಾರಿಯಾಗುತ್ತದೆ. ಹೀಗಾಗಿ ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು.

ಆರು ವಿಜ್ಞಾನ ಶಿಕ್ಷಕರಿಗೆ ‘ವಿಜ್ಞಾನ ರತ್ನ’ ಪ್ರಶಸ್ತಿ

2026–27ನೇ ಸಾಲಿನ ‘ವಿಜ್ಞಾನ ರತ್ನ’ ಪ್ರಶಸ್ತಿಯನ್ನು ಜಿಲ್ಲೆಯ ಆರು ವಿಜ್ಞಾನ ಶಿಕ್ಷಕರಿಗೆ ಪ್ರದಾನ ಮಾಡಲಾಯಿತು.

ಚಿತ್ರದುರ್ಗ ತಾಲ್ಲೂಕಿನ ಚವಲಿಹಳ್ಳಿ ಗೊಲ್ಲರಹಟ್ಟಿ ಸರ್ಕಾರಿ ಪ್ರೌಢಶಾಲೆಯ ಸಿ.ಜಿ. ಹಾಲೇಶ್, ಹಿರಿಯೂರು ತಾಲ್ಲೂಕಿನ ಪಾಲವ್ವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಟಿ.ಜೆ. ವೆಂಕಟೇಶ್, ಹೊಸದುರ್ಗ ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಬಿ.ಕೆ. ಪ್ರಮೀಳಾ, ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಶರಣಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಸೈಯದ್ ಸಾದಿಕ್ ಬಾಷಾ, ಮೊಳಕಾಲ್ಮೂರು ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್.ಕೆ. ವಿರೂಪಾಕ್ಷ ಹಾಗೂ ಚಳ್ಳಕೆರೆ ತಾಲ್ಲೂಕಿನ ದೇವರೆಡ್ಡಿಹಳ್ಳಿ ಗ್ರಾಮಾಂತರ ಪ್ರೌಢಶಾಲೆಯ ಬಿ.ಎ. ಮಮತಾದೇವಿ ಪ್ರಶಸ್ತಿಗೆ ಭಾಜನರಾದರು.

ಸಮಾರಂಭದಲ್ಲಿ ಸಂಸ್ಥೆ ಕಾರ್ಯದರ್ಶಿ ಕೆ.ಎಂ. ವೀರೇಶ್, ಪ್ರಾಂಶುಪಾಲೆ ಎಂ.ಆರ್. ಜಯಲಕ್ಷ್ಮಿ, ನಿವೃತ್ತ ಪ್ರಾಂಶುಪಾಲ ಪ್ರೊ. ಟಿ.ಎಚ್. ಕೃಷ್ಣಮೂರ್ತಿ, ಫೌಂಡೇಶನ್ ಖಜಾಂಚಿ ಕೆ.ವಿ. ನಾಗಲಿಂಗರೆಡ್ಡಿ ಹಾಗೂ ಕಾರ್ಯದರ್ಶಿ ಎಚ್.ಎಸ್.ಟಿ. ಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *