“ಫೈಬರ್‌ಯುಕ್ತ ಆಹಾರ: ದೀರ್ಘಕಾಲದ ಆರೋಗ್ಯದ ರಹಸ್ಯ”

ಪೌಷ್ಠಿಕಾಂಶದ ಬಗ್ಗೆ ಮಾತನಾಡುವಾಗ ಜನರು ಸಾಮಾನ್ಯವಾಗಿ ಪ್ರೋಟೀನ್ ಮತ್ತು ನ್ಯೂಟ್ರಿಷನ್ ಕುರಿತು ಹೆಚ್ಚು ಗಮನ ಕೊಡುತ್ತಾರೆ. ಆದರೆ ಫೈಬರ್ (ನಾರಿನಾಂಶ) ಎನ್ನುವ ಅಂಶವನ್ನು ಬಹುಮಂದಿ ಕಡೆಗಣಿಸುತ್ತಾರೆ.
ಆದರೆ, ಆರೋಗ್ಯಕರ ಜೀವನಶೈಲಿಗೆ ಫೈಬರ್ ಕೂಡ ಅಷ್ಟೇ ಅಗತ್ಯ. ಇದು ದೇಹದ ಜೀರ್ಣಕ್ರಿಯೆ, ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ಮತ್ತು ಹೃದಯದ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಫೈಬರ್ ಎಂದರೆ ಏನು?

ಸಸ್ಯ ಮೂಲದ ಆಹಾರದಲ್ಲಿರುವ ಜೀರ್ಣವಾಗದ ಭಾಗವೇ ನಾರು ಅಥವಾ ಫೈಬರ್. ಇದು ದೇಹದಲ್ಲಿ ಜೀರ್ಣವಾಗದಿದ್ದರೂ ಶರೀರದ ಒಳಾಂಗಾಂಗಗಳ ಕಾರ್ಯಗಳನ್ನು ಸಮತೋಲನಗೊಳಿಸಲು ಸಹಕಾರಿಯಾಗುತ್ತದೆ.

ನಾರಿನಾಂಶದ ಬಗೆಗಳು

  1. ಕರಗಬಲ್ಲ ನಾರು (Soluble Fiber):
    ಆಹಾರದ ಜಠರದಿಂದ ಕರುಳಿಗೆ ಸಾಗುವ ವೇಗವನ್ನು ನಿಧಾನಗೊಳಿಸಿ, ಹೊಟ್ಟೆ ತುಂಬಿದ ಭಾವವನ್ನು ನೀಡುತ್ತದೆ. ಕೊಲೆಸ್ಟ್ರಾಲ್ ಮತ್ತು ರಕ್ತದ ಸಕ್ಕರೆಯನ್ನು ನಿಯಂತ್ರಿಸುತ್ತದೆ.
  2. ಕರಗದ ನಾರು (Insoluble Fiber):
    ಕರುಳಿನ ಚಲನೆಗೆ ಸಹಕಾರಿಯಾಗಿ ಮಲಬದ್ಧತೆ ಮತ್ತು ಕರುಳಿನ ಸಮಸ್ಯೆಗಳನ್ನು ತಡೆಗಟ್ಟುತ್ತದೆ.
  3. ಜೀರ್ಣವಾಗದ ಪಿಷ್ಟ (Resistant Starch):
    ಕರುಳಿನ ಒಳ್ಳೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ನೆರವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ನಾರಿನಾಂಶದ ಆರೋಗ್ಯ ಲಾಭಗಳು

ಕರುಳಿನ ಚಲನೆಗೆ ಸಹಕಾರಿಯಾಗಿ ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ.

ಮಲಬದ್ಧತೆ ಮತ್ತು ಮೂಲವ್ಯಾಧಿ ಸಮಸ್ಯೆ ನಿಯಂತ್ರಿಸುತ್ತದೆ.

ಹೊಟ್ಟೆ ತುಂಬಿದ ಭಾವದಿಂದಾಗಿ ತೂಕ ಇಳಿಸಲು ನೆರವಾಗುತ್ತದೆ.

ಕೊಲೆಸ್ಟ್ರಾಲ್‌ ಪ್ರಮಾಣ ಕಡಿಮೆ ಮಾಡಿ ಹೃದ್ರೋಗದ ಅಪಾಯ ತಗ್ಗಿಸುತ್ತದೆ.

ದೊಡ್ಡ ಕರುಳಿನ ಕ್ಯಾನ್ಸರ್‌ ಸಂಭವದ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಧುಮೇಹ, ರಕ್ತದೊತ್ತಡ ಮತ್ತು ಪಾರ್ಶ್ವವಾಯು ಅಪಾಯವನ್ನು ತಡೆಯುತ್ತದೆ.

ಕರುಳಿನ ಒಳ್ಳೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಕರಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಹಿಳೆಯರಲ್ಲಿ PMS ಮತ್ತು ಹಾರ್ಮೋನ್ ಅಸಮತೋಲನವನ್ನು ತಗ್ಗಿಸಲು ಸಹಕಾರಿಯಾಗಿದೆ.

ನಾರಿನಾಂಶ ಕಡಿಮೆ ತಿಂದರೆ ಏನಾಗುತ್ತದೆ?

ಅನಿಯಮಿತ ಜೀರ್ಣಕ್ರಿಯೆ, ಮಲಬದ್ಧತೆ ಮತ್ತು ಹೊಟ್ಟೆ ಉಬ್ಬುವಿಕೆ ಉಂಟಾಗುತ್ತದೆ.

ಕಾಲಕ್ರಮೇಣ ಮಧುಮೇಹ, ಕೊಲೆಸ್ಟ್ರಾಲ್ ಹೆಚ್ಚಳ ಮತ್ತು ಕರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು.

ನಮ್ಮ ಆಹಾರದಲ್ಲಿ ನಾರಿನಾಂಶವನ್ನು ಸೇರಿಸುವುದು ಹೇಗೆ?

ದಿನಕ್ಕೆ 25-30 ಗ್ರಾಂ ಫೈಬರ್ ಅಗತ್ಯ.

ದಿನವನ್ನು ಹಣ್ಣಿನ ಸೇವನೆಯಿಂದ ಪ್ರಾರಂಭಿಸಿ.

ಪ್ರತಿಯೊಂದು ಊಟದಲ್ಲೂ ತರಕಾರಿಗಳು ಮತ್ತು ಸೊಪ್ಪು ಸೇರಿಸಿ.

ರಾಗಿ, ಓಟ್ಸ್, ಬ್ರೌನ್ ರೈಸ್, ಬೀನ್ಸ್, ಬಟಾಣಿ, ಪೇರಲೆ, ಸೇಬು, ಬಾದಾಮಿ ಮುಂತಾದ ಆಹಾರಗಳು ಉತ್ತಮ ಫೈಬರ್ ಮೂಲಗಳು.

ಕ್ರಮೇಣ ನಾರಿನಾಂಶದ ಪ್ರಮಾಣವನ್ನು ಹೆಚ್ಚಿಸಿ, ಹೆಚ್ಚು ನೀರು ಕುಡಿಯುವುದು ಮರೆಯಬೇಡಿ.

ಸಾರಾಂಶ

ಫೈಬರ್ ಕೇವಲ ಜೀರ್ಣಕ್ರಿಯೆಗೆ ಮಾತ್ರವಲ್ಲ, ಸಂಪೂರ್ಣ ದೇಹದ ಆರೋಗ್ಯಕ್ಕಾಗಿ ಅತ್ಯಂತ ಅಗತ್ಯವಾದ ಪೌಷ್ಠಿಕ ಅಂಶ. ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ನಾರಿನಾಂಶ ಮತ್ತು ನೀರಿನ ಸೇವನೆಯಿಂದ ಆರೋಗ್ಯಕರ ಜೀವನವನ್ನು ಸಾಧಿಸಬಹುದು.

Views: 21

Leave a Reply

Your email address will not be published. Required fields are marked *