ಗೃಹ ಜ್ಯೋತಿ ಫಲಾನುಭವಿಗಳಿಗೆ ಬೆಸ್ಕಾಂ ಮಹತ್ವದ ಸೂಚನೆ: ದಾಖಲೆ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನ

ಅ 19: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹ ಜ್ಯೋತಿ’ ಯೋಜನೆಯ ಮರುಪರಿಶೀಲನಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮಹತ್ವದ ಪ್ರಕಟಣೆ ಹೊರಡಿಸಿದೆ. ಮನೆ-ಮನೆ ಸಮೀಕ್ಷೆಯ ವೇಳೆ ಅಗತ್ಯ ದಾಖಲೆಗಳನ್ನು ಒದಗಿಸಲು ಸಾಧ್ಯವಾಗದ ಗ್ರಾಹಕರಿಗೆ ಅಕ್ಟೋಬರ್ 31ರವರೆಗೆ ಕೊನೆಯ ಅವಕಾಶ ಕಲ್ಪಿಸಲಾಗಿದೆ.

​ಶೇ. 97.45ರಷ್ಟು ಸಮೀಕ್ಷೆ ಪೂರ್ಣ

ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಜ್ಯೋತಿ ಫಲಾನುಭವಿಗಳು ಸೇರಿದಂತೆ ಒಟ್ಟು 74.29 ಲಕ್ಷಕ್ಕೂ ಅಧಿಕ ಗ್ರಾಹಕರು ಗೃಹ ಜ್ಯೋತಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಅಕ್ಟೋಬರ್ 14ರ ಅಂಕಿ-ಅಂಶಗಳ ಪ್ರಕಾರ, ಬರೋಬ್ಬರಿ 72.40 ಲಕ್ಷ ಗ್ರಾಹಕರ (ಶೇ. 97.45) ಸಮೀಕ್ಷಾ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.

​16 ಲಕ್ಷಕ್ಕೂ ಅಧಿಕ ಮನೆಗಳ ಪರಿಶೀಲನೆ ಬಾಕಿ

ಸರ್ವೇ ವೇಳೆ ಸಿಬ್ಬಂದಿ ತೆರಳಿದಾಗ ಬೀಗ ಹಾಕಲಾಗಿದ್ದ ಹಾಗೂ ಖಾಲಿ ಇದ್ದ ಸುಮಾರು 16.37 ಲಕ್ಷ ಮನೆಗಳ ಗ್ರಾಹಕರು ಸಮೀಕ್ಷೆಯಿಂದ ಹೊರಗುಳಿದಿದ್ದರು. ಇದರಲ್ಲಿ 16.09 ಲಕ್ಷ ಬೀಗ ಹಾಕಿದ ಮನೆಗಳು ಮತ್ತು 28,519 ಖಾಲಿ ಮನೆಗಳು ಸೇರಿವೆ. ಈ ಗ್ರಾಹಕರ ಯೋಜನಾ ಸೌಲಭ್ಯ ರದ್ದಾಗುವುದನ್ನು ತಪ್ಪಿಸಲು ಮತ್ತು ಅವರಿಗೆ ಮತ್ತೊಂದು ಅವಕಾಶ ನೀಡುವ ಉದ್ದೇಶದಿಂದ ದಿನಾಂಕ ವಿಸ್ತರಿಸುವಂತೆ ಬೆಸ್ಕಾಂ ಸರ್ಕಾರಕ್ಕೆ ಮನವಿ ಮಾಡಿತ್ತು.

​ಬೆಸ್ಕಾಂ ಮನವಿಯನ್ನು ಪುರಸ್ಕರಿಸಿರುವ ರಾಜ್ಯ ಸರ್ಕಾರ, ಪರಿಶೀಲನಾ ಅವಧಿಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಿ ಆದೇಶಿಸಿದೆ.

​ಗ್ರಾಹಕರು ಏನು ಮಾಡಬೇಕು?

ಸಮೀಕ್ಷೆ ಸಮಯದಲ್ಲಿ ಮನೆಗೆ ಬೀಗ ಹಾಕಿ ಲಭ್ಯವಿಲ್ಲದ ಅಥವಾ ದಾಖಲೆ ಸಲ್ಲಿಸಲು ಸಾಧ್ಯವಾಗದ ಗ್ರಾಹಕರು ತಕ್ಷಣವೇ ತಮ್ಮ ಸಮೀಪದ ಬೆಸ್ಕಾಂ ಉಪ-ವಿಭಾಗ ಕಚೇರಿಗೆ ಖುದ್ದಾಗಿ ಭೇಟಿ ನೀಡಬೇಕು. ಅಲ್ಲಿ ಅಗತ್ಯವಿರುವ ದಾಖಲೆಗಳನ್ನು ಹಾಜರುಪಡಿಸಿ ಪರಿಶೀಲನೆ ಪೂರ್ಣಗೊಳಿಸಿಕೊಳ್ಳಬೇಕು. ಇದು ಕಡ್ಡಾಯ ಹಾಗೂ ಕೊನೆಯ ಅವಕಾಶವಾಗಿದ್ದು, ಅಕ್ಟೋಬರ್ 31ರ ನಂತರ ಯಾವುದೇ ವಿನಂತಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *