ಕ್ಯಾಚ್ ಕೈಚೆಲ್ಲಿ ಮ್ಯಾಚ್ ಸೋತ ಟೀಂ ಇಂಡಿಯಾ: ಆಫ್ರಿಕಾ ಎದುರು ಮಂಡಿಯೂಡಿದ ಹರ್ಮನ್‌ಪ್ರೀತ್ ಪಡೆ.

ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ 2026ರ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ 18ನೇ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ಪರಾಭವಗೊಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲಿ ಉತ್ತಮ ಆರಂಭ ಪಡೆದರೂ, ನಿರ್ಣಾಯಕ ಘಟ್ಟದಲ್ಲಿ ಮಾಡಿದ ತಪ್ಪುಗಳಿಂದಾಗಿ ಟೀಂ ಇಂಡಿಯಾ ಸೋಲೊಪ್ಪಿಕೊಳ್ಳಬೇಕಾಯಿತು. ಪ್ರಮುಖವಾಗಿ ಮರಿಜಾನ್ನೆ ಕಪ್ ಅವರ ಕ್ಯಾಚ್ ಕೈಚೆಲ್ಲಿದ್ದು ಪಂದ್ಯದ ಗತಿಯನ್ನೇ ಬದಲಿಸಿತು. ಇದು ಪ್ರಸಕ್ತ ಟೂರ್ನಿಯಲ್ಲಿ ಭಾರತಕ್ಕೆ ಎದುರಾದ ಮೊದಲ ಸೋಲಾಗಿದ್ದರೆ, ದಕ್ಷಿಣ ಆಫ್ರಿಕಾ ಸತತ ಎರಡನೇ ಜಯ ದಾಖಲಿಸಿದೆ.

ಕೈಕೊಟ್ಟ ಬ್ಯಾಟಿಂಗ್ ಪಡೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮೊದಲ ಮೂರು ಓವರ್‌ಗಳಲ್ಲಿ 30 ರನ್ ಕಲೆಹಾಕಿದರೂ, ಅನಗತ್ಯ ಶಾಟ್ ಆಡಲು ಹೋಗಿ ಸ್ಮೃತಿ ವಿಕೆಟ್ ಒಪ್ಪಿಸುವ ಮೂಲಕ ಈ ಜೊತೆಯಾಟ ಅಂತ್ಯವಾಯಿತು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಯಾಸ್ತಿಕಾ ಭಾಟಿಯಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ಬಿರುಸಿನ ಆಟವಾಡುತ್ತಿದ್ದ ಶಫಾಲಿ ಕೂಡ 31 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು.

ನಂತರ ಬಂದ ಜೆಮಿಮಾ ರಾಡ್ರಿಗಸ್ (12), ತಮ್ಮ 200ನೇ ಐತಿಹಾಸಿಕ ಟಿ20 ಪಂದ್ಯವನ್ನಾಡಿದ ನಾಯಕಿ ಹರ್ಮನ್‌ಪ್ರೀತ್ ಕೌರ್ (24), ದೀಪ್ತಿ ಶರ್ಮಾ (29) ಹಾಗೂ ರಿಚಾ ಘೋಷ್ (15) ಉತ್ತಮ ಆರಂಭ ಪಡೆದರೂ ಅದನ್ನು ಬೃಹತ್ ಮೊತ್ತವಾಗಿ ಪರಿವರ್ತಿಸಲು ವಿಫಲರಾದರು. ಪರಿಣಾಮ, ಭಾರತ ನಿಗದಿತ ಓವರ್‌ಗಳಲ್ಲಿ 158 ರನ್‌ಗಳಿಗೆ ಸೀಮಿತವಾಯಿತು.

ಆರಂಭಿಕ ಮೇಲುಗೈ ಮತ್ತು ಬೌಲಿಂಗ್ ವೈಫಲ್ಯ 159 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವನ್ನು ಪವರ್‌ಪ್ಲೇ ಅವಧಿಯಲ್ಲಿ ಭಾರತೀಯ ಸ್ಪಿನ್ನರ್‌ಗಳು ಕಾಡಿದರು. ಕೇವಲ 25 ರನ್‌ಗಳಿಗೆ ಎರಡು ಪ್ರಮುಖ ವಿಕೆಟ್‌ಗಳು ಪತನಗೊಂಡವು. ಮೊದಲ 6 ಓವರ್‌ಗಳಲ್ಲಿ ಆಫ್ರಿಕಾ ಕೇವಲ 26 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ, ಬಳಿಕ ಜೊತೆಯಾದ ಮರಿಜಾನ್ನೆ ಕಪ್ ಹಾಗೂ ಟಜ್ಮಿನ್ ಬ್ರಿಟ್ಸ್ ಎಚ್ಚರಿಕೆಯ ಆಟವಾಡಿದರು. ಆರಂಭಿಕ ಮೇಲುಗೈ ಸಾಧಿಸಿದ್ದರೂ, ಮಧ್ಯಮ ಓವರ್‌ಗಳಲ್ಲಿ ಭಾರತದ ಬೌಲಿಂಗ್ ಲಯ ತಪ್ಪಿತು. ಅನುಭವಿ ಸ್ಪಿನ್ನರ್ ದೀಪ್ತಿ ಶರ್ಮಾ ಧಾರಾಳವಾಗಿ ರನ್ ಬಿಟ್ಟುಕೊಟ್ಟಿದ್ದು ಎದುರಾಳಿ ತಂಡದ ಮೇಲಿದ್ದ ಒತ್ತಡವನ್ನು ಕಡಿಮೆ ಮಾಡಿತು.

ಕ್ಯಾಚ್ ಕೈಚೆಲ್ಲಿ ಪಂದ್ಯ ಕಳೆದುಕೊಂಡ ಟೀಂ ಇಂಡಿಯಾ ಪಂದ್ಯದ ಅತ್ಯಂತ ನಿರ್ಣಾಯಕ ಘಟ್ಟದಲ್ಲಿ ರಾಧಾ ಯಾದವ್ ಅವರು ಮರಿಜಾನ್ನೆ ಕಪ್ ನೀಡಿದ ಸುಲಭ ಕ್ಯಾಚ್ ಅನ್ನು ಬಿಟ್ಟದ್ದು ಭಾರತಕ್ಕೆ ದುಬಾರಿಯಾಯಿತು. ಆ ಜೀವದಾನದ ಸಂಪೂರ್ಣ ಲಾಭ ಪಡೆದ ಕಪ್, ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರ ಜೊತೆಗೆ, ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಕೆಲವು ನಿರ್ಧಾರಗಳು ಕೂಡ ಹಿನ್ನಡೆಗೆ ಕಾರಣವಾದವು. ದುಬಾರಿಯಾಗಿದ್ದರೂ ದೀಪ್ತಿ ಶರ್ಮಾ ಕೈಗೆ 19ನೇ ಓವರ್ ನೀಡಿದ್ದು ಹಾಗೂ ಬದಲಿ ಆಟಗಾರ್ತಿಯಾಗಿ ಬಂದ ಪ್ರೇಮಾ ಹೆಚ್ಚು ರನ್ ನೀಡಿದ್ದು ಟೀಂ ಇಂಡಿಯಾ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದವು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *