ಸಮಗ್ರ ಸುದ್ದಿ ಚಿತ್ರದುರ್ಗ, ಸೆ.21: ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕೋಟ್ಯಂತರ ರೂ.
ಅವ್ಯವಹಾರವನ್ನು ಅಧಿಕಾರಿಗಳು ನಡೆಸಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ
ಕೈಗೊಂಡಿರುವ ಕಾಮಗಾರಿಗಳ ಸಂಪೂರ್ಣ ವಿವರ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ
ಸಲ್ಲಿಸಲಾಗುವುದು ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2018ರಿಂದ
ಕ್ಷೇತ್ರದಲ್ಲಿ ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆ, ಡಿಎಂಎಫ್, ಕೆಎಂಇಆರ್ಸಿ,
ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ, ಲ್ಯಾಂಡ್ ಆರ್ಮಿ, ಪಂಚಾಯತ್ ರಾಜ್ ಇಂಜಿನಿಯರಿಂಗ್
ಉಪವಿಭಾಗ, ಲೋಕೋಪಯೋಗಿ ಹೀಗೆ ವಿವಿಧ ಇಲಾಖೆ, ನಿಗಮ, ಮಂಡಳಿಗಳಿಂದ ಬಿಡುಗಡೆಗೊಂಡಿರುವ
ಅನುದಾನ ದುರ್ಬಳಕೆ ಆಗಿದೆಯೆಂಬ ಆರೋಪ ಕೇಳಿಬಂದಿದೆ ಎಂದರು.
ಕಾಮಗಾರಿ ನಡೆಯುವ ಸ್ಥಳದಲ್ಲಿ ಅಂದಾಜು ವೆಚ್ಚ, ಗುತ್ತಿಗೆದಾರರ ಹೆಸರು, ಅನುದಾನದ ಸಂಪೂರ್ಣ ಮಾಹಿತಿಯನ್ನೊಳಗೊಂಡ ನಾಮಫಲಕ ಅಳವಡಿಸಬೇಕು. ಆದರೆ, ಈ ಕೆಲಸವನ್ನೇ ಅಧಿಕಾರಿಗಳು ಮಾಡಿಲ್ಲ ಎಂದು ದೂರಿದರು.
ನೀರಾವರಿ ಇಲಾಖೆಯಡಿ ಕಾಮಗಾರಿ ಅಪೂರ್ಣವಾಗಿರುವಾಗಲೇ 30 ಕೋಟಿ ರೂ. ಬಿಡುಗಡೆಗೆ ಚೆಕ್ ಬರೆಯುವಂತೆ ಒತ್ತಡಕ್ಕೆ ಇಂಜಿನಿಯರ್ ನಿರಾಕರಿಸಿದ್ದು, ಬಳಿಕ ಈ ಅನುದಾವನ್ನು
ಹಿರಿಯೂರು ವಿಭಾಗಕ್ಕೆ ವರ್ಗಾಯಿಸಿಕೊಂಡು ಮಂಜೂರು ಮಾಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಜನಪ್ರತಿನಿಧಿಗಳು ಒತ್ತಡ ಹಾಕುವುದು ಸಹಜ. ಆದರೆ, ಅಧಿಕಾರಿಗಳು ಕಾನೂನಡಿ ಕೆಲಸ ಮಾಡಬೇಕು.
ತಪ್ಪು ಎಸಗಿದರೆ ಅಧಿಕಾರಿಗಳೇ ಜೈಲು ಸೇರಬೇಕಾಗುತ್ತದೆ ಎಂಬ ಅರಿವು ಇರಬೇಕೆಂದರು.
ಹೊಳಲ್ಕೆರೆ ಕ್ಷೇತ್ರದಲ್ಲಿ ಅಧಿಕಾರಿಗಳು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮಗಳ ತಾಣವನ್ನಾಸಿದ್ದಾರೆ. ಕೆರೆ ಹೂಳೆತ್ತುವಲ್ಲಿ, ಹಳ್ಳಗಳ ದುರಸ್ತಿ, ಚೆಕ್ ಡ್ಯಾಂ ನಿರ್ಮಾಣದಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಲಾಗಿದೆ ಎಂದು ಹೇಳಿದರು.
ಡಿಎಂಎಫ್ ಅನುದಾನದಡಿ ಕ್ಷೇತ್ರದಲ್ಲಿ ಗ್ರಾಮ ಸಭೆ ನಡೆಸದೆ ಮನಸೋಚ್ಛೆ ಮನೆಗಳನ್ನು
ಹಂಚಿಕೆ ಮಾಡಲಾಗಿದ್ದು, ಇದನ್ನು ವಿರೋಧಿಸುತ್ತಿದ್ದಂತೆ ಪಟ್ಟಿ ರದ್ದು ಮಾಡಿ ಹೊಸದಾಗಿ ಪ್ರಕ್ರಿಯೆ ಆರಂಭಿಸಿದರು ಎಂದರು.
ಡಿಎಂಎಫ್ ಹಾಗೂ ಎಸ್ಸಿಎಸ್ಪಿ, ಟಿಎಸ್ಪಿ ಅನುದಾನ ಬಳಕೆಯಲ್ಲಿ ಮಾನದಂಡವನ್ನು
ಸಂಪೂರ್ಣ ಉಲ್ಲಂಘಿಸಿ ತಮ್ಮ ಅನುಕೂಲಕ್ಕೆ ತಕ್ಕಂತೆ ಅಧಿಕಾರಿಗಳು ಬಳಸಿದ್ದಾರೆ. ಹೀಗೆ ಕ್ಷೇತ್ರದಲ್ಲಿ ಭ್ರಷ್ಟಾಚಾರದ ಹೊಳೆ ಹರಿದಿದೆ. ಈ ಸಂಬಂಧ ಖಚಿತ ಪಡಿಸಿಕೊಳ್ಳಲು
ಕ್ಷೇತ್ರದಲ್ಲಿ ಯಾವ್ಯಾವ ಇಲಾಖೆಯಿಂದ ಎಷ್ಟು ಅನುದಾನದಲ್ಲಿ ಕಾಮಗಾರಿ
ಕೈಗೊಳ್ಳಲಾಗಿದೆ, ಅದರ ಅಂದಾಜು ವೆಚ್ಚ, ಗುತ್ತಿಗೆದಾರರ ಹೆಸರು ಸೇರಿ ಸಂಪೂರ್ಣ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು
ತಿಳಿಸಿದರು.
ಅಗತ್ಯ ದಾಖಲೆಗಳು ಕೈಗೆ ತಲುಪುತ್ತಿದ್ದಂತೆ ಅದರಲ್ಲಿ ಆಗಿರುವ ಅವ್ಯವಹಾರ ಕುರಿತು ಕಿರುಹೊತ್ತಿಗೆ ತರಲಾಗುವುದು, ಜೊತೆಗೆ ಪಾದಯಾತ್ರೆ ನಡೆಸಿ ಭ್ರಷ್ಟಾಚಾರದ ಕುರಿತು
ಜನಜಾಗೃತಿ ಮೂಡಿಸಲಾಗುವುದು. ಲೋಕಾಯುಕ್ತ, ಸಿಒಡಿ ತನಿಖೆಗೆ ಆಗ್ರಹಿಸುವ ಜೊತೆಗೆ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಡಿಸಿ ಮನೆ ಸಿಸಿ ಕ್ಯಾಮೆರಾ ಆಫ್ : ಕ್ಷೇತ್ರದಲ್ಲಿನ ಅಧಿಕಾರಿಗಳ ಅಕ್ರಮಕ್ಕೆ ಕಡಿವಾಣ ಹಾಕಲು ಈ ಹಿಂದಿನ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಲ್ಲಿ ಕೋರಿದ್ದೇ. ಆದರೆ, ಅವರು
ನಿರ್ಲಕ್ಷ್ಯ ವಹಿಸಿ, ಭ್ರಷ್ಟಾಚಾರಕ್ಕೆ ಅವಕಾಶ ಕೊಟ್ಟರೆಂಬ ಭಾವನೆ ಮೂಡಿಸಿದರು ಎಂದು
ಆಂಜನೇಯ ಹೇಳಿದರು.
ದಿವ್ಯಾಪ್ರಭು ಅವರು ಅನೇಕ ಕಡತಗಳ ಮೇಲೆ ಇವೆಲ್ಲವೂ ಕಾರ್ಯರೂಪಕ್ಕೆ
ಹಾಗೂ ಅನುಮತಿ ನೀಡಲು ಅರ್ಹವಲ್ಲವೆಂದು ಬರೆದಿದ್ದರು. ಆದರೆ, ಟಿ.ವೆಂಕಟೇಶ್ ಅವರು
ಅಂತಹ ಬಹುತೇಕ ಫೈಲ್ಗಳನ್ನು ಕ್ಲಿಯರ್ ಮಾಡಿದ್ದಾರೆ. ಮುಖ್ಯವಾಗಿ ಅವರ ನಿವಾಸದಲ್ಲಿ
ಅಳವಡಿಸಿದ್ದ ಸಿಸಿ ಕ್ಯಾಮರಾ ಅವರು ಜಿಲ್ಲೆಯಲ್ಲಿ ಇರುವವರೆಗೂ
ಕಾರ್ಯನಿರ್ವಹಿಸುತ್ತಿರಲಿಲ್ಲವೆಂಬ ಆರೋಪ ಇದೆ. ಈ ಸಂಬಂಧವೂ ಮಾಹಿತಿ ನೀಡುವಂತೆ ಈಗಿನ
ಜಿಲ್ಲಾಧಿಕಾರಿ ಅವರಲ್ಲಿ ಕೋರಲಾಗುವುದು ಎಂದರು.
ಭದ್ರಾ ನಮ್ಮ ಕೊಡುಗೆ: ಚಿತ್ರದುರ್ಗ ಜಿಲ್ಲೆಗೆ ಭದ್ರಾ ಯೋಜನೆ ಆರಂಭಿಸಿದ್ದ
ಕಾಂಗ್ರೆಸ್ ಸರ್ಕಾರವೇ ಈಗ ನೀರು ಹರಿಸುತ್ತಿದೆ. ಈ ಮಧ್ಯೆ ಇವನ ಇತರೆ ಪಕ್ಷಗಳು
ಕಾಲಕಾಲಕ್ಕೆ ತಮ್ಮ ಕರ್ತವ್ಯ ನಿರ್ವಹಿಸಿವೆ ಎಂದು ಹೇಳಿದರು.
ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ ಮಾತನಾಡಿ, ಡಿಎಂಎಫ್
ಅನುದಾನದಲ್ಲಿ ಶಾಲೆಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಅದರ ಮೇಲೆ ಶಾಸಕರ ಅನುದಾನವೆಂದು ಬರೆಯಲಾಗಿದೆ ಎಂದು ದೂರಿದರು.
ಕೆರೆ ಹೂಳೆತ್ತುವುದು, ಚೆಕ್ಡ್ಯಾಂ ನಿರ್ಮಾಣದಲ್ಲಿ ಬಹಳಷ್ಟು ಅವ್ಯವಹಾರ ಆಗಿರುವುದು ಖಚಿತ. ಆದರೂ ಅಧಿಕೃತವಾಗಿ ದಾಖಲೆ ಪಡೆದುಕೊಂಡು ನಂತರ ತನಿಖೆಗೆ ಆಗ್ರಹಿಸಲಾಗುವುದು
ಎಂದರು.
ಜಿಪಂ ಮಾಜಿ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ಎಮ್ಮೆಹಟ್ಟಿ ಕೃಷ್ಣಮೂರ್ತಿ,
ಡಿ.ಕೆ.ಶಿವಮೂರ್ತಿ, ಲೋಹಿತ್ಕುಮಾರ್, ಕಾಂಗ್ರೆಸ್ ನಗರಾಧ್ಯಕ್ಷ ಮಜರ್, ಯುವ
ಕಾಂಗ್ರೆಸ್ ತಾಲ್ಲೂಕಾಧ್ಯಕ್ಷ ಚೇತನ್ ಎಚ್.ಬೋರೇನಹಳ್ಳಿ, ಮುಖಂಡರಾದ ಗೋಡೆಮನೆ
ಹನುಮಂತಪ್ಪ, ಬಿ.ಕೆ.ವಿಜಯಕುಮಾರ್, ಹನುಮಂತಪ್ಪ, ಸುರೇಶ್, ಅನಿಲ್ ಕೋಟಿ ಇತರರಿದ್ದರು.