Horoscope Today: ಏಪ್ರಿಲ್ 17, – ಈ ರಾಶಿಯವರಿಗೆ ವಿದೇಶಿ ವ್ಯಾಪಾರ-ವ್ಯವಹಾರಗಳಿಗೆ ಉತ್ತಮ ಅವಕಾಶಗಳು ಒದಗಿಬರಲಿವೆ. 

ಶಾಲಿವಾಹನ ಶಕ 1949ರ ಚೈತ್ರ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ, ಶುಕ್ರವಾರದ ಈ ದಿನವು ವಿಭಿನ್ನ ಫಲಗಳನ್ನು ಹೊತ್ತು ತಂದಿದೆ. ದಾಯಾದಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು, ಸಂಗಾತಿಯೊಂದಿಗಿನ ಪ್ರಯಾಣದಲ್ಲಿ ಅಡಚಣೆ, ಪ್ರೇಮ ವಿಚಾರದಲ್ಲಿ ಹಿಂಜರಿಕೆ ಹಾಗೂ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಯೋಗವಿರುವ ಈ ದಿನದ ಪೂರ್ಣ ವಿವರ ಇಲ್ಲಿದೆ.

ಇಂದಿನ ಪಂಚಾಂಗ (ಶುಕ್ರವಾರ)

  • ಸಂವತ್ಸರ: ಪರಾಭವ
  • ಶಾಲಿವಾಹನ ಶಕೆ: 1949
  • ಅಯನ: ಉತ್ತರಾಯಣ
  • ಋತು: ವಸಂತ
  • ಮಾಸ: ಚೈತ್ರ, ಪಕ್ಷ: ಕೃಷ್ಣ
  • ತಿಥಿ: ಅಮಾವಾಸ್ಯೆ
  • ಸೌರ ಮಾಸ: ಮೇಷ
  • ಮಹಾನಕ್ಷತ್ರ: ಅಶ್ವಿನಿ, ನಿತ್ಯನಕ್ಷತ್ರ: ಭರಣಿ
  • ಯೋಗ: ಐಂದ್ರ, ಕರಣ: ಚತುಷ್ಪಾತ್
  • ಸೂರ್ಯೋದಯ: ಬೆಳಗ್ಗೆ 06:10 | ಸೂರ್ಯಾಸ್ತ: ಸಂಜೆ 06:37
  • ರಾಹುಕಾಲ: ಬೆಳಗ್ಗೆ 10:51 ರಿಂದ ಮಧ್ಯಾಹ್ನ 12:24 ರವರೆಗೆ
  • ಯಮಗಂಡ ಕಾಲ: ಮಧ್ಯಾಹ್ನ 03:30 ರಿಂದ ಸಂಜೆ 05:04 ರವರೆಗೆ
  • ಗುಳಿಕ ಕಾಲ: ಬೆಳಗ್ಗೆ 07:44 ರಿಂದ 09:18 ರವರೆಗೆ

ದ್ವಾದಶ ರಾಶಿಗಳ ಇಂದಿನ ಭವಿಷ್ಯ

ಮೇಷ ರಾಶಿ: ಅನಿರೀಕ್ಷಿತ ಅತಿಥಿಗಳ ಆಗಮನದಿಂದ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ಸಜ್ಜನರ ಒಡನಾಟದಿಂದ ಅನುಕೂಲವಿದೆ. ಮಹಿಳೆಯರಿಂದ ಸೂಕ್ತ ನೆರವು ದೊರೆಯಲಿದ್ದು, ಕೌಟುಂಬಿಕ ನೆಮ್ಮದಿ ಹೆಚ್ಚಲಿದೆ. ನಂಬಿಕೆಯಿಂದ ಮಾಡುವ ಕೆಲಸಗಳಲ್ಲಿ ಜಯ ಸಿಗಲಿದೆ. ವಾಹನ ಚಾಲನೆ ವೇಳೆ ಎಚ್ಚರಿಕೆ ಅಗತ್ಯ, ಆಯಾಸ ಕಾಡಬಹುದು. ಇತರರ ಅಸಭ್ಯ ವರ್ತನೆಗೆ ಮೌನವೇ ಉತ್ತಮ ಮದ್ದು. ಆದಾಯದಷ್ಟೇ ಖರ್ಚು ಕೂಡ ಇರಲಿದೆ.

ವೃಷಭ ರಾಶಿ: ಆಲಸ್ಯಕ್ಕೆ ಆಸ್ಪದ ನೀಡದೆ ಬಂದ ಅವಕಾಶಗಳನ್ನು ಬಳಸಿಕೊಳ್ಳಿ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗಲಿದೆ. ವ್ಯಾಪಾರ-ವ್ಯವಹಾರಗಳಲ್ಲಿ ನಿರ್ಧಾರ ಕೈಗೊಳ್ಳುವಾಗ ಸ್ವಲ್ಪ ಗೊಂದಲ ಉಂಟಾಗಬಹುದು. ಇತರರನ್ನು ನೋಡಿ ಅಸೂಯೆ ಪಡುವ ಗುಣ ಬಿಡಿ. ದಿನದ ಆರಂಭದಲ್ಲಿ ಕೆಲಸದ ಒತ್ತಡ ಹೆಚ್ಚಿರಲಿದೆ. ಮಾಡಿದ ಉಪಕಾರವನ್ನು ಸ್ಮರಿಸುವ ಗುಣ ಬೆಳೆಸಿಕೊಳ್ಳಿ. ದುಂದುವೆಚ್ಚಕ್ಕೆ ಕಡಿವಾಣ ಹಾಕುವುದು ಕಷ್ಟ ಹಾಗೂ ದುರ್ಬಲರ ಮೇಲೆ ಕೋಪಗೊಳ್ಳುವ ಸಾಧ್ಯತೆ ಇದೆ.

ಮಿಥುನ ರಾಶಿ: ದೈಹಿಕ ಆಯಾಸವಿದ್ದರೂ ಆಪ್ತರ ಒತ್ತಾಯಕ್ಕೆ ಮಣಿದು ವಾಯುವಿಹಾರಕ್ಕೆ ತೆರಳುವಿರಿ. ಸಮಾಜದಲ್ಲಿ ನಿಮ್ಮ ಘನತೆ-ಗೌರವ ವೃದ್ಧಿಯಾಗಲಿದೆ. ಆರೋಗ್ಯ ಸುಧಾರಿಸಲಿದ್ದು, ಪ್ರಯಾಣದ ಯೋಗವಿದೆ. ಮನೆಯಲ್ಲಿ ಹರ್ಷೋಲ್ಲಾಸ ನೆಲೆಸಲಿದ್ದು, ಸ್ನೇಹಿತರಿಂದ ಶುಭ ವಾರ್ತೆ ಕಾದಿದೆ. ಸದಾ ಕ್ರಿಯಾಶೀಲರಾಗಿರುವುದು ನಿಮಗೆ ಸಂತಸ ತರುತ್ತದೆ. ಕಚೇರಿಯಲ್ಲಿ ಮಹಿಳಾ ಸಹದ್ಯೋಗಿಗಳಿಂದ ಮುಜುಗರ ಎದುರಾಗಬಹುದು. ನಿಮ್ಮ ತಪ್ಪುಗಳನ್ನು ಇತರರು ತಿದ್ದುವ ಮುನ್ನ ನೀವೇ ಎಚ್ಚೆತ್ತುಕೊಳ್ಳಿ.

ಕರ್ಕಾಟಕ ರಾಶಿ: ನಿಮ್ಮ ನಿರ್ಲಕ್ಷ್ಯ ಹಾಗೂ ಜಡತ್ವದಿಂದ ಪ್ರಮುಖ ಕೆಲಸಗಳು ವಿಳಂಬವಾಗಬಹುದು. ಸಮಯವನ್ನು ವ್ಯರ್ಥ ಮಾಡದಿರಿ. ಮಕ್ಕಳ ಭವಿಷ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಒಳಿತು. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರಲಿದೆ. ಅಂದುಕೊಂಡ ಗುರಿ ಸಾಧಿಸುವ ಬಗ್ಗೆ ಮನಸ್ಸಿನಲ್ಲಿ ಸಣ್ಣ ಅಳುಕು ಕಾಡಬಹುದು. ಇತರರ ಬಗ್ಗೆ ಅಸಮಾಧಾನ ಮೂಡುವ ಸಾಧ್ಯತೆ ಇದೆ. ಮುನಿಸಿಕೊಂಡ ಜೀವನ ಸಂಗಾತಿಯನ್ನು ಓಲೈಸಬೇಕಾಗುತ್ತದೆ. ಅತಿ ಆತ್ಮವಿಶ್ವಾಸ ಅಪಾಯ ತಂದೊಡ್ಡುವುದು, ಎಚ್ಚರ.

ಸಿಂಹ ರಾಶಿ: ಇಂದಿನ ದಿನವು ಹೊಸ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ನೂತನ ವ್ಯಕ್ತಿಗಳ ಸಂಪರ್ಕದಿಂದ ವಿನೂತನ ಆಲೋಚನೆಗಳು ಮೂಡಲಿವೆ. ಕೌಟುಂಬಿಕ ಗೊಂದಲಗಳನ್ನು ಆದಷ್ಟು ಮಟ್ಟಿಗೆ ದೂರವಿಡಿ. ಕೆಟ್ಟ ಹವ್ಯಾಸಗಳಿಂದಾಗಿ ಅಪವಾದ ಎದುರಿಸಬೇಕಾದೀತು. ದಾನ-ಧರ್ಮ ಮಾಡುವ ಸದ್ಬುದ್ಧಿ ಮೂಡಲಿದೆ. ಹಳೆಯ ಸ್ನೇಹಿತರ ಭೇಟಿಯಿಂದ ಸಮಯ ಕಳೆಯುವುದು ಖುಷಿ ನೀಡುತ್ತದೆ. ನಿಮ್ಮ ಮೇಲಿನ ವಿಶ್ವಾಸ ಕೊಂಚ ಕುಗ್ಗಬಹುದು. ಆರ್ಥಿಕ ಹೂಡಿಕೆಗಳ ಬಗ್ಗೆ ಗಂಭೀರ ಚರ್ಚೆ ನಡೆಸುವಿರಿ.

ಕನ್ಯಾ ರಾಶಿ: ಇಂದಿನ ನಿಮ್ಮ ತಾಳ್ಮೆ ಹಾಗೂ ಲವಲವಿಕೆ ಹೊಸ ಚೈತನ್ಯ ನೀಡಲಿದೆ. ಕುಟುಂಬದ ಸದಸ್ಯರೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ. ಆರ್ಥಿಕವಾಗಿ ಲಾಭದಾಯಕ ದಿನ. ಮನೆಗೆ ಅಗತ್ಯವಿರುವ ಅಲಂಕಾರಿಕ ವಸ್ತುಗಳ ಖರೀದಿಗೆ ಮುಂದಾಗುವಿರಿ. ಸಣ್ಣಪುಟ್ಟ ವಿಚಾರಗಳಿಗೂ ಪೋಷಕರನ್ನು ದೂಷಿಸುವುದು ಸರಿಯಲ್ಲ. ಸಂಬಂಧಿಕರೊಂದಿಗೆ ವಾಗ್ವಾದಗಳು ನಡೆದು ಮನಸ್ತಾಪ ಉಂಟಾಗಬಹುದು. ಕೆಲಸದ ಒತ್ತಡದಿಂದಾಗಿ ಸಂಗಾತಿಯೊಂದಿಗೆ ಸಮಯ ಕಳೆಯಲು ಸಾಧ್ಯವಾಗದಿರಬಹುದು.

ತುಲಾ ರಾಶಿ: ಬಂಡವಾಳ ಹೂಡಿಕೆ ಕುರಿತು ಗಂಭೀರ ಚಿಂತನೆ ನಡೆಸುವಿರಿ. ಗೃಹ ನಿರ್ಮಾಣಕ್ಕಾಗಿ ಸಾಲ ಮಾಡುವ ಪರಿಸ್ಥಿತಿ ಎದುರಾಗಬಹುದು. ಆಸ್ತಿ-ಪಾಸ್ತಿಗೆ ಸಂಬಂಧಿಸಿದಂತೆ ವಿವಾದಗಳು ತಲೆದೋರಬಹುದು. ಅಪರಿಚಿತರೊಂದಿಗೆ ವ್ಯವಹರಿಸುವಾಗ ವಂಚನೆಗೊಳಗಾಗುವ ಅಪಾಯವಿರುವುದರಿಂದ ಎಚ್ಚರಿಕೆ ಇರಲಿ. ಹೊಸ ಯೋಜನೆಗಳಿಗೆ ಕೈಹಾಕಲು ಇದು ಸೂಕ್ತ ಸಮಯವಲ್ಲ. ಸಾಲಗಾರರ ಕಾಟ ಹೆಚ್ಚಾಗಬಹುದು. ಕೆಲಸದಲ್ಲಿ ಅಡ್ಡದಾರಿ ಹಿಡಿಯದಿರಿ.

ವೃಶ್ಚಿಕ ರಾಶಿ: ಕಲಾ ಕ್ಷೇತ್ರದ ಗಣ್ಯರಿಗೆ ಕೊಂಚ ಗೊಂದಲದ ವಾತಾವರಣವಿರಲಿದೆ. ಸಿಟ್ಟನ್ನು ನಿಯಂತ್ರಿಸಿಕೊಳ್ಳುವುದು ಅತೀ ಅಗತ್ಯ. ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಅಜಾಗರೂಕತೆಯಿಂದಾಗಿ ಗುರಿ ತಪ್ಪಬಹುದು. ಅತಿಯಾದ ಯೋಚನೆಗಳನ್ನು ಬಿಟ್ಟು, ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಿ. ಹಿರಿಯರ ಮಾರ್ಗದರ್ಶನ ನಿಮಗೆ ಶ್ರೀರಕ್ಷೆಯಾಗಲಿದೆ. ಪರಸ್ಪರ ಸಂಬಂಧಗಳಲ್ಲಿ ಸಕಾರಾತ್ಮಕ ಸಂವಹನ ಮುಖ್ಯ. ಅಧೀನ ನೌಕರರು ಆಪ್ತರಾಗಿ ಕೆಲಸದಲ್ಲಿ ನೆರವಾಗಲಿದ್ದಾರೆ. ಸಂಪತ್ತಿನ ಸದ್ಬಳಕೆಗೆ ಸೂಕ್ತ ಮಾರ್ಗ ಕಂಡುಕೊಳ್ಳಿ.

ಧನು ರಾಶಿ: ಕೌಟುಂಬಿಕ ವಿಚಾರಗಳಲ್ಲಿ ನಿರ್ಣಯ ಕೈಗೊಳ್ಳಲು ಕಾಲಾವಕಾಶ ಬೇಕಾಗುತ್ತದೆ. ಅಷ್ಟೇನೂ ಪ್ರಾಮುಖ್ಯತೆಯಿಲ್ಲದ ಕೆಲಸಗಳನ್ನು ಮುಂದೂಡುವುದು ಜಾಣತನ. ಮನೆಯಲ್ಲಿನ ಸಣ್ಣಪುಟ್ಟ ಸಮಸ್ಯೆಗಳು ಬೃಹತ್ತಾಗಿ ಕಾಣಿಸಬಹುದು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದವರಿಗೆ ಇಂದು ಅತ್ಯಂತ ಶುಭದಿನ. ನಿಮ್ಮನ್ನು ನೀವೇ ಹೊಗಳಿಕೊಳ್ಳುವ ಮುನ್ನ ಅದಕ್ಕೆ ತಕ್ಕ ಯೋಗ್ಯತೆ ಇದೆಯೇ ಎಂದು ವಿಮರ್ಶಿಸಿಕೊಳ್ಳಿ. ಪಡೆದ ಹಣಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುವಿರಿ, ಇದರಿಂದ ಗ್ರಾಹಕರು ಸಂತೃಪ್ತರಾಗುವರು. ಆಸ್ತಿ ಕಬಳಿಸುವ ಕುತಂತ್ರದ ಆಲೋಚನೆಗಳು ಬೇಡ.

ಮಕರ ರಾಶಿ: ಮನೆಯಲ್ಲಿ ಸಂತೋಷದ ವಾತಾವರಣ ಮನೆಮಾಡಲಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಾಧಕ-ಬಾಧಕಗಳನ್ನು ವಿಮರ್ಶಿಸಿ. ಹಣಕಾಸಿನ ಚಿಂತೆ ಕಾಡಬಹುದು. ನಿಮ್ಮ ಕೆಲವು ಕೆಲಸಗಳಿಂದ ಹಿರಿಯರಿಗೆ ಕೋಪ ಬರಬಹುದು. ಸಹನೆ ಹಾಗೂ ಏಕಾಗ್ರತೆಯಿಂದ ಮುನ್ನಡೆಯಿರಿ. ವಿದೇಶಿ ವ್ಯಾಪಾರ-ವ್ಯವಹಾರಗಳಿಗೆ ಉತ್ತಮ ಅವಕಾಶಗಳು ಒದಗಿಬರಲಿವೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕಂತೆ ಲಾಭ ನಿರೀಕ್ಷಿಸಬಹುದು. ಯಶಸ್ಸಿನ ಮುಂದೆ ದೈಹಿಕ ಆಯಾಸ ಲೆಕ್ಕಕ್ಕಿಲ್ಲ. ಪುಣ್ಯಕ್ಷೇತ್ರಗಳ ದರ್ಶನಕ್ಕೆ ತೆರಳುವ ಉತ್ಸಾಹ ಮೂಡಲಿದೆ.

ಕುಂಭ ರಾಶಿ: ಅನಿರೀಕ್ಷಿತವಾಗಿ ದೂರದ ಸಂಬಂಧಿಕರು ಮನೆಗೆ ಆಗಮಿಸುವರು, ಇದರಿಂದ ಖರ್ಚು-ವೆಚ್ಚಗಳು ಹೆಚ್ಚಾಗಲಿವೆ. ಹಣಕಾಸಿನ ವಹಿವಾಟುಗಳಲ್ಲಿ ಅನುಭವಿಗಳ ಸಲಹೆ ಪಡೆಯುವುದು ಉತ್ತಮ. ಮನರಂಜನಾ ಚಟುವಟಿಕೆಗಳಲ್ಲಿ ಸ್ನೇಹಿತರೊಂದಿಗೆ ಕಾಲ ಕಳೆಯುವಿರಿ. ಕೈಮಾತಾಗಿ ನೀಡಿದ್ದ ಹಣವನ್ನು ಮರಳಿ ಕೇಳಿದಾಗ ಮುಜುಗರ ಅಥವಾ ಅಪಮಾನ ಎದುರಿಸಬೇಕಾದೀತು. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ವಾಹನ ಅಪಘಾತಗಳ ಬಗ್ಗೆ ನಿಗಾ ಇರಲಿ. ಮನಸ್ಸಿಗೆ ನೋವುಂಟು ಮಾಡುವ ಘಟನೆಯೊಂದು ಇಡೀ ದಿನ ಕಾಡಬಹುದು.

ಮೀನ ರಾಶಿ: ಉಳಿತಾಯ ಮಾಡುವ ನಿಮ್ಮ ಪ್ರಯತ್ನಗಳಿಗೆ ಹಿನ್ನಡೆಯಾಗಬಹುದು. ಆದರೂ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಕುಟುಂಬದಲ್ಲಿ ಆನಂದದ ವಾತಾವರಣವಿರಲಿದೆ. ಯಾವುದೋ ಒಂದು ಶುಭ ವಾರ್ತೆ ನಿಮ್ಮನ್ನು ತಲುಪಲಿದೆ. ಬಂಧು-ಬಳಗದವರಿಂದ ನಿರ್ಲಕ್ಷ್ಯಕ್ಕೆ ಒಳಗಾದ ಭಾವನೆ ಮೂಡಬಹುದು. ದುಶ್ಚಟಗಳಿಂದ ಹೊರಬರುವ ಬಲವಾದ ಇಚ್ಛೆ ಹುಟ್ಟಿಕೊಳ್ಳಲಿದೆ. ಮನಸ್ಸು ಸಕಾರಾತ್ಮಕ ಹಾಗೂ ಆನಂದದಾಯಕ ಸ್ಥಿತಿಯಲ್ಲಿರಲಿದೆ.

Leave a Reply

Your email address will not be published. Required fields are marked *