ನೀವು ಮಾಡುವ ವಾಕಿಂಗ್ ಕುರಿತು ನಿಮಗೆಷ್ಟು ಗೊತ್ತು? ಯಾವ ರೀತಿಯ ನಡಿಗೆ ಒಳ್ಳೆಯದು.

ವ್ಯಾಯಾಮದ ಸರಳ ರೂಪಗಳಲ್ಲಿ ವಾಕಿಂಗ್ ಕೂಡ ಒಂದಾಗಿದೆ. ತೂಕ ಇಳಿಕೆಗೆ ಮಾತ್ರವಲ್ಲ, ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಸಹ, ಪ್ರತಿದಿನ ನಡಿಗೆ ಮಾಡುತ್ತಾರೆ. ಆದರೆ ನಿಮಗೆ ಗೊತ್ತಾ? ವಾಕಿಂಗ್ ನಲ್ಲಿಯೂ ಅನೇಕ ರೀತಿಯ ವಿಧಗಳಿವೆ. ಪ್ರತಿಯೊಂದೂ ರೀತಿಯ ನಡಿಗೆಯೂ ನಿರ್ದಿಷ್ಟ ಆರೋಗ್ಯ ಪ್ರಯೋಜನಗಳಿಗೆ ಅನುಗುಣವಾಗಿರುತ್ತದೆ. ಹೃದಯದ ಆರೋಗ್ಯವನ್ನು ಸುಧಾರಿಸುವುದರಿಂದ ಹಿಡಿದು ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸುವ ವರೆಗೆ, ನೀವು ಆಯ್ಕೆ ಮಾಡುವ ವಾಕಿಂಗ್ ಪ್ರಕಾರವು ನಿಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾದರೆ ಯಾವ ರೀತಿಯ ವಾಕಿಂಗ್ ಯಾರಿಗೆ ಉತ್ತಮವಾಗಿವೆ ಎಂಬುದನ್ನು ತಿಳಿದುಕೊಳ್ಳಿ.

ನಡೆಯುವುದು ಕೇವಲ ಒಂದು ಪಾದವನ್ನು ಇನ್ನೊಂದರ ಮುಂದೆ ಇಡುವುದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಸರಿಯಾದ ರೀತಿಯ ವಾಕಿಂಗ್ ಅನ್ನು ಆಯ್ಕೆ ಮಾಡುವುದರಿಂದ ಫಿಟ್ನೆಸ್ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ನಡಿಗೆ ಕೇವಲ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಮಾತ್ರವಲ್ಲ, ನಿಮ್ಮ ಹೃದಯವನ್ನು ಬಲಪಡಿಸಿ ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸಿಕೊಳ್ಳಲು ಅತ್ಯವಶ್ಯಕವಾಗಿದೆ. ಹಾಗಾಗಿ ನಿಮಗೆ ಸರಿಹೊಂದುವ ವಾಕಿಂಗ್ ಶೈಲಿಯನ್ನು ಆರಿಸಿ, ಆರೋಗ್ಯ ಕಾಪಾಡಿಕೊಳ್ಳಿ.

ಚುರುಕಾದ ನಡಿಗೆ: ಇದು ನಿಮ್ಮ ಹೃದಯ ಮತ್ತು ಶ್ವಾಸಕೋಶಗಳನ್ನು ಬಲಪಡಿಸುವ ಶಕ್ತಿಯುತ ಮಾರ್ಗವಾಗಿದೆ. ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ, ವಾರಕ್ಕೆ ಐದು ಬಾರಿ ಚುರುಕಾದ ವಾಕಿಂಗ್ ರಕ್ತದೊತ್ತಡವನ್ನು ಕಡಿಮೆ ಮಾಡಿ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಣೆ ಮಾಡುತ್ತದೆ. ಅದಲ್ಲದೆ ಒಟ್ಟಾರೆ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ಗಂಟೆಗೆ 3- 4 ಮೈಲಿಗಳನ್ನು ಒಂದೇ ರೀತಿಯ ವೇಗದಲ್ಲಿ ಪ್ರಾರಂಭಿಸಿ ಬಳಿಕ ನಡಿಗೆಯನ್ನು ತೀವ್ರಗೊಳಿಸಬೇಕು. ಈ ರೀತಿಯ ವಾಕಿಂಗ್ ಮಾಡುವುದರಿಂದ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುವುದರ ಜೊತೆಗೆ ಒಟ್ಟಾರೆ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಬಹುದು.

ಪವರ್ ವಾಕಿಂಗ್: ಇದು ಚುರುಕಾದ ನಡಿಗೆಗಿಂತಲೂ ಹೆಚ್ಚು ಹುರುಪು ನೀಡುವ ಆವೃತ್ತಿಯಾಗಿದ್ದು, ಈ ರೀತಿಯ ವಾಕಿಂಗ್ ಸಾಮಾನ್ಯ ವಾಕಿಂಗ್ ಗಿಂತ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ, ಜೊತೆಗೆ ತೂಕ ಕಡಿಮೆ ಮಾಡಿಕೊಳ್ಳಲು ಬಯಸುತ್ತಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಒಂದು ಮೈಲಿ ಜಾಗಿಂಗ್ ಮಾಡುವ ಬದಲು ಅಷ್ಟೇ ದೂರ ಪವರ್ ವಾಕಿಂಗ್ ಮಾಡುವುದು ಸಮ ಎಂದು ಹೇಳಲಾಗುತ್ತದೆ.

ಅಸಮ ಭೂಪ್ರದೇಶದಲ್ಲಿ ನಡಿಗೆ: ಕ್ಯಾಲೊರಿ ಕಡಿಮೆ ಮಾಡಿ ತೂಕ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಯಸುವವರು ಪವರ್ ವಾಕಿಂಗ್ ಜೊತೆಗೆ ಪರ್ಯಾಯವಾಗಿ ಟ್ರೇಲ್ ವಾಕಿಂಗ್ ಅಥವಾ ಅಸಮ ಭೂಪ್ರದೇಶದಲ್ಲಿ ನಡೆಯುವುದನ್ನು ರೂಢಿಸಿಕೊಳ್ಳಬೇಕು. ಇದು ನಿಮ್ಮನ್ನು ಪ್ರಕೃತಿಯೊಂದಿಗೆ ಸಂಪರ್ಕಿಸಿ ದೇಹಕ್ಕೆ ವ್ಯಾಯಾಮ ನೀಡುವುದು ಮಾತ್ರವಲ್ಲ, ಮನಸ್ಸನ್ನು ನಿರಾಳಗೊಳಿಸುತ್ತದೆ. 2016 ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವ್ಯಾಯಾಮ ಮತ್ತು ಪ್ರಕೃತಿಯಲ್ಲಿ ಸಮಯ ಕಳೆಯುವ ಸಂಯೋಜಿತ ಪ್ರಯೋಜನಗಳು ಆರೋಗ್ಯ ಮತ್ತು ಯೋಗಕ್ಷೇಮವನ್ನು ಹೆಚ್ಚಿಸಲು ನಾವು ಮಾಡಬಹುದಾದ ಪರಿಪೂರ್ಣ ಚಟುವಟಿಕೆಯಾಗಿದೆ. ಆದರೆ ಈ ರೀತಿ ಸಮತಟ್ಟಾಗಿರದ ಪ್ರದೇಶಗಳಲ್ಲಿ ವಾಕಿಂಗ್ ಮಾಡುವಾಗ ಜಾಗೃತರಾಗಿರಬೇಕು. ಅಲ್ಲದೆ ಬೂಟುಗಳನ್ನು ಆಯ್ಕೆ ಮಾಡುವಾಗಲೂ ಕೂಡ ಗಮನಹರಿಸುವುದು ಒಳ್ಳೆಯದು.

ಹಿಮ್ಮುಖ ನಡಿಗೆ: ಇದು ಅಸಾಂಪ್ರದಾಯಿಕವಾಗಿದ್ದರೂ, ಹಿಂದಕ್ಕೆ ನಡೆಯುವುದು (ರೆಟ್ರೊ ವಾಕಿಂಗ್) ಸಮತೋಲನವನ್ನು ಹೆಚ್ಚಿಸುತ್ತದೆ, ಇದು ನಿಮ್ಮ ಮೊಣಕಾಲುಗಳ ಮೇಲಿನ ಒತ್ತಡವನ್ನು ಪೂರ್ತಿಯಾಗಿ ನಿವಾರಿಸುತ್ತದೆ. ಹಿಂದಕ್ಕೆ ನಡೆಯುವುದು ಹೃದಯ- ಶ್ವಾಸಕೋಶದ ಫಿಟ್ ನೆಸ್ ಅನ್ನು ಸುಧಾರಿಸುತ್ತದೆ ಎಂದು ಅಧ್ಯಯನ ಕಂಡುಹಿಡಿದಿದೆ. ಆದರೆ ಈ ರೀತಿಯ ನಡಿಗೆಯನ್ನು ಯಾವಾಗಲೂ ಸುರಕ್ಷಿತ, ಸಮತಟ್ಟಾದ ಪ್ರದೇಶದಲ್ಲಿ ಪ್ರಾರಂಭಿಸಿ. ನಿಮಗೆ ನಡೆದು ಸ್ವಲ್ಪ ಧೈರ್ಯ ಬಂದ ಮೇಲೆ ಕ್ರಮೇಣ ನಿಮ್ಮ ವೇಗವನ್ನು ಹೆಚ್ಚಿಸಿ.

Source : https://tv9kannada.com/health/ways-of-walking-choose-the-right-type-of-walking-to-maintain-fitness-in-kannada-news-pgt-944607.html

Leave a Reply

Your email address will not be published. Required fields are marked *