ನರೇಗಾ ಅಂತ್ಯ, ವಿಬಿ-ಜಿ-ರಾಮ್-ಜಿ ಆರಂಭ:ಹೊಸ ಉದ್ಯೋಗ ಖಾತ್ರಿ ಕಾರ್ಡ್ ಪಡೆಯುವುದು ಹೇಗೆ?

ಕಳೆದ ಎರಡು ದಶಕಗಳಿಂದ ಜಾರಿಯಲ್ಲಿದ್ದ ನರೇಗಾ (MGNREGA) ಯೋಜನೆಯನ್ನು ಕೈಬಿಟ್ಟು, ಕೇಂದ್ರ ಸರ್ಕಾರವು 2026ರ ಜುಲೈ 1ರಿಂದ ಹೊಸದಾಗಿ ‘ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಮತ್ತು ಆಜೀವಿಕಾ ಮಿಷನ್ – ಗ್ರಾಮೀಣ’ (VB-G RAM G – Viksit Bharat Guarantee for Rozgar and Ajeevika Mission Gramin) ಕಾಯ್ದೆಯನ್ನು ಜಾರಿಗೆ ತಂದಿದೆ. ಹಳೆಯ ಯೋಜನೆಗಿಂತ ಹೆಚ್ಚಿನ ಉದ್ಯೋಗ ದಿನಗಳು ಹಾಗೂ ಪರಿಷ್ಕೃತ ವೇತನವನ್ನು ಈ ಹೊಸ ಯೋಜನೆಯಡಿ ಒದಗಿಸಲಾಗುತ್ತಿದೆ.

ಇದರ ಸಂಪೂರ್ಣ ವಿವರ, ನೋಂದಣಿ ಪ್ರಕ್ರಿಯೆ ಮತ್ತು ಹೊಸ ನಿಯಮಗಳ ಮಾಹಿತಿ ಇಲ್ಲಿದೆ.

ಉದ್ಯೋಗ ಮತ್ತು ಆದಾಯದ ವಿವರ

ಹಳೆಯ ಯೋಜನೆಯಲ್ಲಿ ವರ್ಷಕ್ಕೆ 100 ದಿನಗಳ ಕೆಲಸ ನೀಡಲಾಗುತ್ತಿತ್ತು. ಆದರೆ, ಹೊಸ ಕಾಯ್ದೆಯನ್ವಯ ಒಂದು ಆರ್ಥಿಕ ವರ್ಷದಲ್ಲಿ ಪ್ರತಿ ಗ್ರಾಮೀಣ ಕುಟುಂಬಕ್ಕೆ ಕನಿಷ್ಠ 125 ದಿನಗಳ ಅಕುಶಲ ದೈಹಿಕ ಶ್ರಮದ ಕೆಲಸವನ್ನು ಕಾನೂನುಬದ್ಧವಾಗಿ ಖಾತರಿಪಡಿಸಲಾಗಿದೆ. ಇದರಿಂದ ಗ್ರಾಮೀಣ ಕುಟುಂಬಗಳು ಕೃಷಿ ಚಟುವಟಿಕೆಗಳ ಜೊತೆಗೆ ವಾರ್ಷಿಕವಾಗಿ 45,000 ದಿಂದ 60,000 ರೂ.ಗಳವರೆಗೆ ಹೆಚ್ಚುವರಿ ಆದಾಯ ಗಳಿಸಲು ಸಾಧ್ಯವಾಗುತ್ತದೆ.

  • ರಾಷ್ಟ್ರೀಯ ಕನಿಷ್ಠ ಕೂಲಿ: ದೇಶಾದ್ಯಂತ ಕನಿಷ್ಠ ಕೂಲಿಯನ್ನು 300 ರೂ.ಗಳಿಗೆ ನಿಗದಿಪಡಿಸಲಾಗಿದೆ. ಸರಾಸರಿ ದಿನಗೂಲಿ 298.8 ರೂ.ನಿಂದ 327.4 ರೂ.ಗೆ ಏರಿಕೆಯಾಗಿದೆ.
  • ಕರ್ನಾಟಕದಲ್ಲಿ ವೇತನ: ಕರ್ನಾಟಕದಲ್ಲಿ ದೈನಂದಿನ ವೇತನವನ್ನು 385 ರೂ.ಗೆ ನಿಗದಿಪಡಿಸಲಾಗಿದೆ. ಇದರಂತೆ ರಾಜ್ಯದ ಗ್ರಾಮೀಣ ಕುಟುಂಬವೊಂದು 125 ದಿನಗಳ ಪೂರ್ಣ ಕೆಲಸದಿಂದ ಕನಿಷ್ಠ 48,000 ರೂ.ಗಳ ಹೆಚ್ಚುವರಿ ಆದಾಯ ಪಡೆಯಬಹುದು.
  • ಗಮನಿಸಿ: ಒಂದು ಕುಟುಂಬಕ್ಕೆ ಒಂದೇ ಜಾಬ್ ಕಾರ್ಡ್ ನೀಡಲಾಗುತ್ತದೆ. ಕುಟುಂಬದಲ್ಲಿ ದುಡಿಯುವ ಕೈಗಳು ಹೆಚ್ಚಿದ್ದರೂ, ಒಂದು ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 125 ದಿನಗಳ ಉದ್ಯೋಗ ಮಾತ್ರ ಲಭ್ಯವಿರುತ್ತದೆ.

ನೋಂದಣಿ ಪ್ರಕ್ರಿಯೆ ಮತ್ತು ಹೊಸ ಜಾಬ್ ಕಾರ್ಡ್

  • ಹೊಸ ‘ಗ್ರಾಮೀಣ ಉದ್ಯೋಗ ಖಾತರಿ ಕಾರ್ಡ್’ (Gramin Rozgar Guarantee Card) ಪಡೆಯಲು ಅಥವಾ ಹಳೆಯ ಕಾರ್ಡ್ ನವೀಕರಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಬೇಕು.
  • ಕುಟುಂಬದಲ್ಲಿ 18 ವರ್ಷ ದಾಟಿದ ಹಾಗೂ ಅಕುಶಲ ದೈಹಿಕ ಶ್ರಮದ ಕೆಲಸ ಮಾಡಲು ಸಿದ್ಧರಿರುವ ಸದಸ್ಯರ ವಿವರಗಳನ್ನು ಆಧಾರ್ ಸಂಖ್ಯೆಯೊಂದಿಗೆ ನೀಡಿ ಅರ್ಜಿ ಸಲ್ಲಿಸಬೇಕು.
  • ಪ್ರಸ್ತುತ ಇ-ಕೆವೈಸಿ (e-KYC) ಮಾಡಿಸಿರುವ ಹಳೆಯ ನರೇಗಾ ಕಾರ್ಡ್‌ಗಳು ಹೊಸ ಡಿಜಿಟಲ್ ಕಾರ್ಡ್ ವಿತರಣೆಯಾಗುವವರೆಗೆ ಮಾನ್ಯವಾಗಿರುತ್ತವೆ.

ಕಡ್ಡಾಯ ನಿಯಮಗಳು ಹಾಗೂ ಸೌಲಭ್ಯಗಳು

  • ನಿರುದ್ಯೋಗ ಭತ್ಯೆ: ಈ ಯೋಜನೆಯು ಸಂಪೂರ್ಣ ಬೇಡಿಕೆ ಆಧಾರಿತವಾಗಿದೆ. ಕೆಲಸಕ್ಕೆ ಅರ್ಜಿ ಸಲ್ಲಿಸಿದ 15 ದಿನಗಳೊಳಗೆ ಉದ್ಯೋಗ ಒದಗಿಸುವುದು ಕಡ್ಡಾಯ. ವಿಫಲವಾದರೆ, ಕಾರ್ಮಿಕರಿಗೆ ದೈನಂದಿನ ನಿರುದ್ಯೋಗ ಭತ್ಯೆ ನೀಡಬೇಕಾಗುತ್ತದೆ. ಇದರ ಸಂಪೂರ್ಣ ಆರ್ಥಿಕ ಹೊರೆಯನ್ನು ರಾಜ್ಯ ಸರ್ಕಾರಗಳೇ ಭರಿಸಬೇಕು.
  • ವೇತನ ಪಾವತಿ ವಿಳಂಬಕ್ಕೆ ದಂಡ: ಕೆಲಸ ಮುಗಿದ 15 ದಿನಗಳ ಒಳಗಾಗಿ ಅಥವಾ ವಾರಕ್ಕೊಮ್ಮೆ ನೇರ ನಗದು ವರ್ಗಾವಣೆ (DBT) ಮೂಲಕ ಬ್ಯಾಂಕ್ ಖಾತೆಗೆ ವೇತನ ಜಮಾ ಆಗಬೇಕು. ವಿಳಂಬವಾದರೆ ಕಾನೂನುಬದ್ಧವಾಗಿ ಬಡ್ಡಿ ಸಮೇತ ವಿಳಂಬ ಪರಿಹಾರ (Delay Compensation) ಪಾವತಿಸಬೇಕಾಗುತ್ತದೆ.
  • ದೂರದ ಕೆಲಸಕ್ಕೆ ಹೆಚ್ಚುವರಿ ವೇತನ: ಕೆಲಸದ ಸ್ಥಳವು ಕಾರ್ಮಿಕರ ವಾಸಸ್ಥಳದಿಂದ 5 ಕಿ.ಮೀ ವ್ಯಾಪ್ತಿಯೊಳಗೆ ಇರಬೇಕು. 5 ಕಿ.ಮೀ ಗಿಂತ ದೂರವಿದ್ದರೆ ಶೇ. 10ರಷ್ಟು ಹೆಚ್ಚುವರಿ ವೇತನ ನೀಡಲಾಗುತ್ತದೆ.
  • ಗೈರುಹಾಜರಿ ನಿಯಮ: ಕೆಲಸ ನಿಯೋಜನೆಗೊಂಡ ನಂತರ ಕಾರ್ಮಿಕರು ಗೈರಾದರೆ, ಆ ದಿನಗಳಿಗೆ ನಿರುದ್ಯೋಗ ಭತ್ಯೆ ಅಥವಾ ಪರಿಹಾರವನ್ನು ಕ್ಲೇಮ್ ಮಾಡಲು ಅವಕಾಶವಿರುವುದಿಲ್ಲ.
  • ಕೃಷಿ ಹಂಗಾಮಿನ ವಿರಾಮ: ಬಿತ್ತನೆ ಮತ್ತು ಕೊಯ್ಲಿನ ಗರಿಷ್ಠ ಅವಧಿಯಲ್ಲಿ ಕೃಷಿ ಕಾರ್ಮಿಕರ ಕೊರತೆ ಉಂಟಾಗುವುದನ್ನು ತಪ್ಪಿಸಲು, ವರ್ಷದಲ್ಲಿ ಗರಿಷ್ಠ 60 ದಿನಗಳ ಕಾಲ ಈ ಯೋಜನೆಗೆ ವಿರಾಮ (Agriculture Pause) ಘೋಷಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ. ಉಳಿದ 305 ದಿನಗಳ ಅವಧಿಯಲ್ಲಿ 125 ದಿನಗಳ ಕೆಲಸ ಖಚಿತವಾಗಿರುತ್ತದೆ.

ಹೊಸ ಯೋಜನೆಯ ಪ್ರಮುಖ ಬದಲಾವಣೆಗಳು

  • ತಂತ್ರಜ್ಞಾನದ ಕಟ್ಟುನಿಟ್ಟಿನ ಬಳಕೆ: ನಕಲಿ ಹಾಜರಾತಿ ಮತ್ತು ಭ್ರಷ್ಟಾಚಾರ ತಡೆಯಲು ಬಯೋಮೆಟ್ರಿಕ್ ಹಾಜರಾತಿ, ಜಿಪಿಎಸ್ (GPS) ಟ್ರ್ಯಾಕಿಂಗ್ ಹಾಗೂ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಕಾಮಗಾರಿಗಳ ಪರಿಶೀಲನೆ ನಡೆಸಲಾಗುತ್ತದೆ.
  • ವಿಶೇಷ ಆದ್ಯತೆ: ವಿಕಲಚೇತನರು (PwD), ಒಂಟಿ ಮಹಿಳೆಯರು, ಹಿರಿಯ ನಾಗರಿಕರು, ತೃತೀಯ ಲಿಂಗಿಗಳು ಹಾಗೂ ಹಿಂದುಳಿದ ಬುಡಕಟ್ಟು ಸಮುದಾಯದವರಿಗೆ (PVTGs) ಉದ್ಯೋಗ ಹಂಚಿಕೆಯಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ.
  • ಶಾಶ್ವತ ಆಸ್ತಿಗಳ ನಿರ್ಮಾಣ: ಕಾಮಗಾರಿಗಳು ಕೇವಲ ಮಣ್ಣಿನ ಕೆಲಸಕ್ಕೆ ಸೀಮಿತವಾಗದೆ, ಗ್ರಾಮೀಣ ಭಾಗದಲ್ಲಿ ಶಾಶ್ವತ ರಸ್ತೆಗಳು, ಜಲ ಸಂರಕ್ಷಣೆ, ಕೃಷಿ ಪೂರಕ ಮೂಲಸೌಕರ್ಯ, ಮತ್ತು ಆಟದ ಮೈದಾನಗಳ ಅಭಿವೃದ್ಧಿ ಸೇರಿದಂತೆ 300ಕ್ಕೂ ಹೆಚ್ಚು ವಿಧದ ಕೆಲಸಗಳನ್ನು ಗುರುತಿಸಲಾಗಿದೆ.
  • ಹಣಕಾಸು ಹಂಚಿಕೆ: ಯೋಜನೆಯ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಹಂಚಿಕೊಳ್ಳಲಿವೆ (ಈಶಾನ್ಯ ರಾಜ್ಯಗಳಿಗೆ ಇದು 90:10 ಅನುಪಾತದಲ್ಲಿರುತ್ತದೆ).

Leave a Reply

Your email address will not be published. Required fields are marked *