ಹೊರಗೆ ಎಷ್ಟೇ ಚಳಿ ಇದ್ದರೂ ಐಸ್ ಕ್ರೀಮ್ ಪ್ರಿಯರು ಯಾವ ಋತುವಿನಲ್ಲೂ ಹಿಂದೆ ಸರಿಯುವುದಿಲ್ಲ. ಆದರೆ ನಮ್ಮ ಮನೆಯ ಹಿರಿಯರು ಮಾತ್ರ ಚಳಿಗಾಲದಲ್ಲಿ ಐಸ್ ಕ್ರೀಮ್ ತಿಂದರೆ ನೆಗಡಿ, ಕೆಮ್ಮು ಬರುತ್ತದೆ ಎಂದು ಎಚ್ಚರಿಸುತ್ತಲೇ ಇರುತ್ತಾರೆ. ಹಾಗಾದರೆ ಇದು ನಿಜವೇ? ಚಳಿಗಾಲದಲ್ಲಿ ತಣ್ಣನೆಯ ಆಹಾರ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆಯೇ ಎಂಬ ಪ್ರಶ್ನೆಗೆ ತಜ್ಞರು ನೀಡಿರುವ ಸ್ಪಷ್ಟ ಉತ್ತರ ಇಲ್ಲಿದೆ.
ಐಸ್ ಕ್ರೀಮ್ ತಿಂದರೆ ನೆಗಡಿ ಬರುತ್ತದೆಯೇ?
ಆರೋಗ್ಯ ತಜ್ಞರ ಪ್ರಕಾರ, ಐಸ್ ಕ್ರೀಮ್ ತಿನ್ನುವುದರಿಂದ ನೇರವಾಗಿ ನೆಗಡಿ ಅಥವಾ ಜ್ವರ ಬರುವುದಿಲ್ಲ. ನೆಗಡಿ ಮತ್ತು ಶೀತ ಸಾಮಾನ್ಯವಾಗಿ ವೈರಸ್ ಅಥವಾ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ, ತಣ್ಣನೆಯ ಆಹಾರದಿಂದ ಅಲ್ಲ. ತಣ್ಣನೆಯ ಆಹಾರ ಹೊಟ್ಟೆಗೆ ಹೋದ ಕೂಡಲೇ ದೇಹದ ಆಂತರಿಕ ವ್ಯವಸ್ಥೆ ಅದನ್ನು ಸಮತೋಲನಕ್ಕೆ ತರುತ್ತದೆ. ಆದ್ದರಿಂದ ದೇಹದ ಉಷ್ಣತೆ ಅಚಾನಕ್ ಕುಸಿಯುವುದಿಲ್ಲ. ಜೊತೆಗೆ, ಐಸ್ ಕ್ರೀಮ್ ತಿನ್ನುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ ಎಂಬ ಅಭಿಪ್ರಾಯವೂ ಇದೆ.
ಯಾರಿಗೆ ಐಸ್ ಕ್ರೀಮ್ ಒಳ್ಳೆಯದಲ್ಲ?
ಸಾಮಾನ್ಯವಾಗಿ ಆರೋಗ್ಯವಂತರಿಗೆ ಮಿತ ಪ್ರಮಾಣದಲ್ಲಿ ಐಸ್ ಕ್ರೀಮ್ ಸೇವನೆ ತೊಂದರೆಯಾಗುವುದಿಲ್ಲ. ಆದರೆ ಕೆಲವು ಆರೋಗ್ಯ ಸಮಸ್ಯೆಗಳಿರುವವರು ಜಾಗರೂಕರಾಗಿರಬೇಕು.
ಈಗಾಗಲೇ ಗಂಟಲು ನೋವು ಇರುವವರು
ಅಸ್ತಮಾ ಅಥವಾ ನಿರಂತರ ಕೆಮ್ಮು ಸಮಸ್ಯೆಯಿರುವವರು
ಚಳಿಗಾಲದಲ್ಲಿ ತೇವಾಂಶ ಕಡಿಮೆಯಾಗುವುದರಿಂದ ಗಂಟಲು ಒಣಗುವ ಸಮಸ್ಯೆಯಿರುವವರು
ಈ ಸಂದರ್ಭಗಳಲ್ಲಿ ಐಸ್ ಕ್ರೀಮ್ ಸೇವನೆ ಅಸ್ವಸ್ಥತೆಯನ್ನು ಹೆಚ್ಚಿಸಬಹುದು.
ಚಳಿಗಾಲದಲ್ಲಿ ಐಸ್ ಕ್ರೀಮ್ ತಿನ್ನುವಾಗ ಗಮನಿಸಬೇಕಾದ ಸಲಹೆಗಳು
ಚಳಿಗಾಲದಲ್ಲಿ ಐಸ್ ಕ್ರೀಮ್ ಸಂಪೂರ್ಣವಾಗಿ ತ್ಯಜಿಸಬೇಕೆಂದಿಲ್ಲ. ಆದರೆ ಮಿತಿಯೇ ಮುಖ್ಯ.
ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಸೇವಿಸುವುದು ಉತ್ತಮ
ಒಮ್ಮೆಲೆ ನುಂಗದೆ ನಿಧಾನವಾಗಿ ತಿನ್ನಬೇಕು
ಐಸ್ ಕ್ರೀಮ್ ತಿಂದ ನಂತರ ಸ್ವಲ್ಪ ಉಗುರು ಬೆಚ್ಚಗಿನ ನೀರು ಅಥವಾ ಹಾಲು ಕುಡಿಯುವುದು ಒಳಿತು
ಸ್ವಲ್ಪವೂ ಶೀತ ಅಥವಾ ಗಂಟಲು ಸಮಸ್ಯೆ ಇದ್ದರೆ ದೂರವಿರುವುದು ಉತ್ತಮ.
ಒಟ್ಟಾರೆ, ಚಳಿಗಾಲದಲ್ಲಿ ಆರೋಗ್ಯವಂತರಿಗೆ ಮಿತ ಪ್ರಮಾಣದಲ್ಲಿ ಐಸ್ ಕ್ರೀಮ್ ತಿನ್ನುವುದು ಸುರಕ್ಷಿತವೇ. ಆದರೆ ಅತಿಯಾಗಿ ಸೇವಿಸಿದರೆ ಅದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ದೇಹದ ಸ್ಥಿತಿಯನ್ನು ಗಮನಿಸಿ, ತಜ್ಞರ ಸಲಹೆಯಂತೆ ಮಿತವಾಗಿ ಸೇವಿಸುವುದೇ ಉತ್ತಮ.