ಚಿತ್ರದುರ್ಗ ಜು. 19
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಜುಲೈ ತಿಂಗಳ ಮುಗಿಯುತ್ತಾ ಬಂದರು ಮುಂಗಾರು ಮಳೆ ಬಂದಿರುವುದಿಲ್ಲ ಈ ಹಿನ್ನಲೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯಕ್ರಮವನ್ನು ಜರೂರಾಗಿ ಮಾಡಬೇಕೆಂದು ವಿಧಾನಸಭಾಕ್ಷೇತ್ರದ ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿಯವರಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಬಣದ ಕರ್ನಾಟಕ ರಾಜ್ಯ ರೈತ ಸಂಘ ಮನವಿ ಮಾಡಿದೆ.
ಚಿತ್ರದುರ್ಗ ನಗರದಲ್ಲಿ ಶಾಸಕರನ್ನು ಭೇಟಿಯಾದ ರೈತ ಮುಖಂಡರು, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಜುಲೈ ತಿಂಗಳ ಮುಗಿಯುತ್ತಾ ಬಂದರು ಮುಂಗಾರು ಮಳೆ ಬಂದಿರುವುದಿಲ್ಲ. ಇದುವರೆಗೂ ರೈತರು ಬಿತ್ತನೆ ಮಾಡಿರುವುದಿಲ್ಲ ಹಾಗೂ ಕೊಳವೆಬಾವಿ ನಂಬಿಕೊಂಡು ಅಡಿಕೆ, ಹೂ ಹಣ್ಣು, ತರಕಾರಿಗಳನ್ನು ಹಾಕಿರುತ್ತಾರೆ. ಇದುವರೆಗೂ ಮಳೆ ಬಾರದ ಕಾರಣ ಕೊಳವೆಬಾವಿ ಬತ್ತಿ ಹೋಗುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಆದ್ದರಿಂದ ತಾವುಗಳು ಕೂಡಲೇ ಸರ್ಕಾರದ ಸಂಬಂಧಪಟ್ಟ ಇಲಾಖೆ ಸಚಿವರನ್ನು ಸಂಪರ್ಕಿಸಿ ಚಿತ್ರದುರ್ಗ ಜಿಲ್ಲೆ ಮೋಡ ಬಿತ್ತನೆ ಕಾರ್ಯಕ್ರಮವನ್ನು ಜರೂರಾಗಿ ಮಾಡಬೇಕೆಂದು ಮನವಿ ಮಾಡಿದರು.
ಇದರೊಂದಿಗೆ ಚಿತ್ರದುರ್ಗ ಜಿಲ್ಲೆ 3 ತಾಲ್ಲೂಕಿನ ಭದ್ರಾ ಮೇಲ್ದಂಡೆ ಯೋಜನೆಯ ಹುಣಸೆಕಟ್ಟೆ ಹಾಗೂ ಕುರುಮರಡಿಕೆರೆ ಕೆರೆಯನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಸೇರಿಸಿ ಕೆರೆಗೆ ನೀರು ಹರಿಸಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಧನಂಜಯ, ಬಸ್ತಿಹಳ್ಳಿ ಸುರೇಶ್ ಬಾಬು, ಕರಿಬಸವಯ್ಯ, ಬಸವರಾಜು, ಮಂಜುನಾಥ್, ಸತ್ಯಪ್ಪ, ಧರಣೇಂದ್ರ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ತಿಪ್ಪೇಸ್ವಾಮಿ, ಪಾಪಯ್ಯ ಬಚ್ಚಬೋರನಹಟ್ಟಿ ರಂಗೇಗೌಡ, ರಾಜಪ್ಪ ಕಿರಣ್ ಕುಮಾರ್ ಸೇತರಿದಂತೆ ಇತರರು ಭಾಗವಹಿಸಿದ್ದರು.