ಐಪಿಎಲ್ 2026ರ ಟೂರ್ನಿಯಲ್ಲಿ ಇದುವರೆಗೆ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಅಜೇಯ ಓಟಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಬ್ರೇಕ್ ಹಾಕಿದೆ. ಉಪ್ಪಲ್ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಸನ್‌ರೈಸರ್ಸ್ 57 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಐತಿಹಾಸಿಕ ಗೆಲುವಿನ ರೂವಾರಿಗಳು ಸನ್‌ರೈಸರ್ಸ್ ಪರ ಐಪಿಎಲ್ ಅಖಾಡಕ್ಕೆ ಮೊದಲ ಬಾರಿಗೆ ಇಳಿದ ಯುವ ವೇಗದ ಬೌಲರ್‌ಗಳಾದ ಪ್ರಫುಲ್ ಹಿಂಗೆ ಮತ್ತು ಸಕೀಬ್ ಹುಸೇನ್. ಇವರಿಬ್ಬರ ತಲಾ 4 ವಿಕೆಟ್‌ಗಳ ಮಾರಕ ದಾಳಿಗೆ ಬಲಿಷ್ಠ ರಾಜಸ್ಥಾನ್ ಬ್ಯಾಟಿಂಗ್ ಪಡೆ ಅಕ್ಷರಶಃ ಪೆವಿಲಿಯನ್ ಪರೇಡ್ ನಡೆಸಿತು.
ನಾಯಕನ ಜವಾಬ್ದಾರಿಯುತ ಆಟವಾಡಿದ ಇಶಾನ್ ಕಿಶನ್ ಟಾಸ್ ಗೆದ್ದ ಸನ್‌ರೈಸರ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ, ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಘಾತಕ ವೇಗಿ ಜೋಫ್ರಾ ಆರ್ಚರ್ ಅವರು ಓಪನರ್ ಅಭಿಷೇಕ್ ಶರ್ಮಾ ಅವರನ್ನು ಬಲಿಪಡೆಯುವ ಮೂಲಕ ಆತಿಥೇಯರಿಗೆ ಆರಂಭಿಕ ಆಘಾತ ನೀಡಿದರು. ಭರವಸೆಯ ಆಟಗಾರ ಟ್ರಾವಿಸ್ ಹೆಡ್ ಕೂಡ ಶೀಘ್ರವೇ ನಿರ್ಗಮಿಸಿದರು. ಈ ಸಂಕಷ್ಟದ ಸಮಯದಲ್ಲಿ ನಾಯಕನ ಜವಾಬ್ದಾರಿ ಹೊತ್ತ ಇಶಾನ್ ಕಿಶನ್ ಅಕ್ಷರಶಃ ಅಬ್ಬರಿಸಿದರು. ಕೇವಲ 44 ಎಸೆತಗಳಲ್ಲಿ 91 ರನ್ ಸಿಡಿಸಿ ಆರ್ಆರ್ ಬೌಲರ್ಗಳನ್ನು ದಂಡಿಸಿದರು. ಇವರಿಗೆ ಹೆನ್ರಿಕ್ ಕ್ಲಾಸೆನ್ (40 ರನ್) ಉತ್ತಮ ಸಾಥ್ ನೀಡಿದರು. ಈ ಜೋಡಿ ಮೂರನೇ ವಿಕೆಟ್‌ಗೆ 88 ರನ್ ಕಲೆಹಾಕಿ ತಂಡಕ್ಕೆ ಚೇತರಿಕೆ ನೀಡಿತು. ಅಂತಿಮ ಓವರ್‌ಗಳಲ್ಲಿ ನಿತೀಶ್ ರೆಡ್ಡಿ ಮತ್ತು ಸಲೀಲ್ ಅರೋರಾ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಹೈದರಾಬಾದ್ ತಂಡ ನಿಗದಿತ ಓವರ್‌ಗಳಲ್ಲಿ 216 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಪ್ರಫುಲ್-ಸಕೀಬ್ ಮೋಡಿ, ರಾಜಸ್ಥಾನ್ ದಿಢೀರ್ ಪತನ 217 ರನ್‌ಗಳ ಗುರಿ ಬೆನ್ನತ್ತಿದ ರಾಜಸ್ಥಾನ್ ತಂಡಕ್ಕೆ ಯುವ ತಾರೆ ವೈಭವ್ ಸೂರ್ಯವಂಶಿ ಮೇಲೆ ಭಾರೀ ನಿರೀಕ್ಷೆ ಇತ್ತು. ಆದರೆ, ತಮ್ಮ ಚೊಚ್ಚಲ ಓವರ್ ಎಸೆದ ಪ್ರಫುಲ್ ಹಿಂಗೆ ಎರಡನೇ ಎಸೆತದಲ್ಲೇ ವೈಭವ್ ವಿಕೆಟ್ ಕಿತ್ತರು. ಅದೇ ಓವರ್‌ನಲ್ಲಿ ಧ್ರುವ್ ಜುರೆಲ್ ಸೇರಿದಂತೆ ಒಟ್ಟು 3 ವಿಕೆಟ್ ಕಬಳಿಸಿ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದರು.
ಮುಂದಿನ ಓವರ್‌ನಲ್ಲಿ ದಾಳಿಗಿಳಿದ ಮತ್ತೋರ್ವ ಪದಾರ್ಪಣೆ ಆಟಗಾರ ಸಕೀಬ್ ಹುಸೇನ್ ಕೂಡ ಪ್ರಫುಲ್ಗೆ ಸಾಥ್ ನೀಡಿದರು. ಕೇವಲ 3 ಓವರ್‌ಗಳ ಅಂತ್ಯಕ್ಕೆ ಕೇವಲ 9 ರನ್ ಗಳಿಸುವಷ್ಟರಲ್ಲಿ ಆರ್ಆರ್ ತನ್ನ ಪ್ರಮುಖ 5 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಗೆ ತಲುಪಿತ್ತು.
ವ್ಯರ್ಥವಾದ ಜಡೇಜಾ-ಫೆರೇರಾ ಹೋರಾಟ ತೀವ್ರ ಸಂಕಷ್ಟದಲ್ಲಿದ್ದ ತಂಡಕ್ಕೆ ರವೀಂದ್ರ ಜಡೇಜಾ ಹಾಗೂ ಡೊನೊವನ್ ಫೆರೇರಾ ಆಸರೆಯಾದರು. ಇವರಿಬ್ಬರು ಸೇರಿ 122 ರನ್‌ಗಳ ಅದ್ಭುತ ಜೊತೆಯಾಟವಾಡಿ ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರು. ಆದರೆ, ಮತ್ತೆ ದಾಳಿಗಿಳಿದು ಮ್ಯಾಜಿಕ್ ಸ್ಪೆಲ್ ಮುಂದುವರಿಸಿದ ಸಕೀಬ್ ಹುಸೇನ್, ಫೆರೇರಾ ಅವರನ್ನು ಪೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ 159 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಮೊದಲ ಸೋಲಿನ ರುಚಿ ಕಂಡಿತು.


