Health Tips: ಜೀರಿಗೆಯು ಹೆಚ್ಚಾಗಿ ಅಡುಗೆ ಮನೆಯಲ್ಲಿ ಬಳಸುವ ಮಸಾಲೆ ಪದಾರ್ಥವಾಗಿದ್ದು, ಇದನ್ನು ಭಕ್ಷ್ಯಗಳ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಪ್ರತಿ ಭಾರತೀಯ ಮನೆಯಲ್ಲೂ ಜೀರಿಗೆ ಕಾಣ ಸಿಗುವ ಆಹಾರ ಪದಾರ್ಥವಾಗಿದ್ದು, ಆಯುರ್ವೇದದಲ್ಲೂ ಇದರ ಉಲ್ಲೇಖವಿದೆ.
ಅದರಲ್ಲೂ ಜೀರಿಗೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಹಲವು ಆರೋಗ್ಯ ಲಾಭ ಗಳಿದ್ದು ಆರೋಗ್ಯ ತಜ್ಞರು ಕೂಡ ಈ ನೀರನ್ನು ಕುಡಿಯಲು ಸಲಹೆ ನೀಡಿದ್ದಾರೆ. ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಜೀರಿಗೆ ನೀರು (Jeera Water) ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ರಕ್ತದೊತ್ತಡವನ್ನು ನಿಯಂತ್ರಿಸುವುದರ ಜತೆಗೆ ಬಹಳಷ್ಟು ಆರೋಗ್ಯ ಲಾಭವನ್ನು ನೀಡುತ್ತದೆ.
ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸುತ್ತದೆ
ಜೀರಿಗೆ ನೀರು ಸರಳವಾದರೂ ಶಕ್ತಿಶಾಲಿ ಪಾನೀಯವಾಗಿದ್ದು, ಅದು ನಿಮ್ಮ ಚಯಾಪಚಯ ಕ್ರಿಯೆ ಮತ್ತು ಜೀರ್ಣಕ್ರಿಯೆಗೆ ಅದ್ಭುತ ಪ್ರಯೋಜನ ನೀಡುತ್ತದೆ. ಬೆಳಗ್ಗೆ ಎದ್ದ ಕೂಡಲೇ ಬೆಚ್ಚಗಿನ ಜೀರಾ ನೀರನ್ನು ಕುಡಿಯುವುದರಿಂದ ನಿಮ್ಮ ಚಯಾಪಚಯ ಕ್ರಿಯೆಗೆ ಅಗತ್ಯವಾದ ವೇಗ ದೊರೆಯುತ್ತದೆ. ಇದು ಸುಲಭವಾಗಿ ಕ್ಯಾಲೋರಿ ಬರ್ನ್ ಮಾಡಿ ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
ಊಟವಾದ ಬಳಿಕ ಆಗಾಗ್ಗೆ ಹೊಟ್ಟೆ ಉಬ್ಬುವುದು, ಗ್ಯಾಸ್ಟ್ರಿಕ್‌ನಂತಹ ಸಮಸ್ಯೆ ಅನುಭವಿಸಿದರೆ, ಜೀರಾ ನೀರು ಇದನ್ನು ಸುಲಭವಾಗಿ ಪರಿಹರಿಸುತ್ತದೆ. ಇದು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸಿ ಆರೋಗ್ಯಕರ ಕರುಳು ಮತ್ತು ಉತ್ತಮ ಚಯಾಪಚಯ ಕ್ರಿಯೆಗೆ ಕಾರಣವಾಗುತ್ತದೆ.ಇದು ಕರುಳಿನ ಆರೋಗ್ಯ ಜತೆಗೆ ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಜೀರಿಗೆಯಲ್ಲಿ ಪೊಟ್ಯಾಸಿಯಮ್ ಮತ್ತು ಕಬ್ಬಿಣಾಂಶ ಹೇರಳವಾಗಿದ್ದು ಉತ್ತಮ ಶಕ್ತಿಯ ಮೂಲ ವಾಗಿದೆ. ಜೀರಿಗೆಯಲ್ಲಿ ಮೆಗ್ನೀಷಿಯಮ್, ಕ್ಯಾಲ್ಸಿಯಂ ಸೇರಿ ವಿವಿಧ ಖನಿಜ ಇದ್ದು ವಿಟಮಿನ್ ಎ, ಬಿ, ಸಿ ಹೇರಳವಾಗಿರುವುದರಿಂದ ಸೋಂಕು ನಿವಾರಕವೂ ಹೌದು. ಜೀರಿಗೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಜೀರಾ ನೀರು ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸುತ್ತದೆ ಮತ್ತು ಹಠಾತ್ ಇನ್ಸುಲಿನ್ ಸ್ಪೈಕ್ ಗಳನ್ನು ತಡೆದು ಸಕ್ಕರೆಯ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ನಿಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
ಚರ್ಮದ ಆರೋಗ್ಯ ಸುಧಾರಿಸುತ್ತದೆ
ಜೀರಿಗೆಯಲ್ಲಿ ಆಯಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ಇವು ಚರ್ಮದ ಸುಕ್ಕುಗಳನ್ನು ತಡೆದು ಯೌವನ ಕಾಪಾಡುತ್ತದೆ. ಜೀರಿಗೆಯಲ್ಲಿ ಟೆರ್ಪೆನ್ಸ್, ಫ್ಲೇವನಾಯ್ಡ್ಸ್‌ನಂತಹ ಜೈವಿಕ ಸಂಯುಕ್ತಗಳಿದ್ದು ಮುಖದ ಕಾಂತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಶಕ್ತಿಯನ್ನು ಹೆಚ್ಚಿಸಿ ಆಯಾಸವನ್ನು ಕಡಿಮೆ ಮಾಡುತ್ತದೆ
ನೀವು ದಣಿದಿದ್ದರೆ ಅಥವಾ ಆಲಸ್ಯ ಅನುಭವಿಸಿದರೆ ಜೀರಿಗೆ ನೀರು ನಿಮಗೆ ನೈಸರ್ಗಿಕ ಶಕ್ತಿಯನ್ನು ನೀಡುತ್ತದೆ. ಇದು ನಿಮ್ಮ ಜೀವಕೋಶಗಳಿಗೆ ರಕ್ತ ಪರಿಚಲನೆ ಮತ್ತು ಆಮ್ಲಜನಕದ ಪೂರೈಕೆಯನ್ನು ಸುಧಾರಿಸುತ್ತದೆ.
ತಯಾರಿಸುವ ವಿಧಾನ
ಒಂದು ಲೋಟ ನೀರು ಹಾಗೂ ಒಂದು ಸ್ಪೂನ್ ಜೀರಿಗೆಯನ್ನು ಉಗುರು ಬೆಚ್ಚಗೆ ಬಿಸಿ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು ಅಥವಾ ರಾತ್ರಿ ಒಂದು ಲೋಟದಲ್ಲಿ ಒಂದು ಸ್ಪೂನ್ ಜೀರಿಗೆ ನೆನೆ ಹಾಕಿ ಇಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು.