ಯಾದವ ಸಂಘ ಚುನಾವಣೆ: ಅಧ್ಯಕ್ಷರಾಗಿ ಮೀಸೆ ಮಹಾಲಿಂಗಪ್ಪ, ಉಪಾಧ್ಯಕ್ಷರಾಗಿ ಕಿರಣಕುಮಾರ್ ಆಯ್ಕೆ.

ಚಿತ್ರದುರ್ಗಮೇ. 30

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಜಿಲ್ಲಾ ಯಾದವ (ಗೊಲ್ಲ) ಸಂಘದ ಅಧ್ಯಕ್ಷ ಸೇರಿ ನಾಲ್ಕು ಸ್ಥಾನಗಳಿಗೆ ಶನಿವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿತ್ತು. ನಗರದ ರಂಗಯ್ಯನ ಬಾಗಿಲು ಸಮೀಪದ ಗೊಲ್ಲ ಸಂಘದ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಮೀಸೆ ಮಹಾಲಿಂಗಪ್ಪ ಬಣ ಗೆಲುವು ಸಾಧಿಸಿತು.

ಹಾಲಿ ಅಧ್ಯಕ್ಷ, ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಬಣವನ್ನು ಮಣಿಸಲು ಜಿಲ್ಲೆಯ ಹಾಲಿ-ಮಾಜಿ ಶಾಸಕರು, ಪ್ರಭಾವಿಗಳು ನೇರ-ಪರೋಕ್ಷವಾಗಿ ರಂಗಪ್ರವೇಶ ಮಾಡಿದ್ದರು. ಆದರೂ ಅಂತಿಮವಾಗಿ ಅಧ್ಯಕ್ಷರಾಗಿ ಮೀಸೆ ಮಹಾಲಿಂಗಪ್ಪ, ಉಪಾಧ್ಯಕ್ಷ- ಕಿರಣಕುಮಾರ್, ಪ್ರಧಾನ ಕಾರ್ಯದರ್ಶಿ-ರಾಮಲಿಂಗ ಯಾದವ್, ಖಜಾಂಚಿಯಾಗಿ ಬೂದಿಹಳ್ಳಿ ರಾಜಣ್ಣ ಗೆಲುವು ಸಾಧಿಸಿದರು. ಜಿಲ್ಲಾ ಯಾದವ ಸಂಘದ ಚುನಾವಣೆ ಆಡಳಿತ ಮೀಸೆ ಮಹಾಲಿಂಗಪ್ಪ ಬಣ ಪಡೆಯುವಲ್ಲಿ ಮೇಲುಗೈ ಸಾಧಿಸಿದ್ದು, ಈ ಮೂಲಕ ಆರು ತಿಂಗಳಿನಿಂದಲೂ ತೀವ್ರ ಕುತೂಹಲ ಕೆರಳಿಸಿದ್ದ ಪ್ರಕ್ರಿಯೆಗೆ ಶನಿವಾರ ತೆರೆಬಿದ್ದಿತು. ಮಧ್ಯಾಹ್ನ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಸದಸ್ಯರು, ಬೆಂಬಲಿಗರು ಸಂಭ್ರಮಿಸಿದರು.

ನೂತನ ಪದಾಧಿಕಾರಿಗಳಿಗೆ ಸಮಾಜದ ಮುಖಂಡರು, ಗಣ್ಯರು ಅಭಿನಂದನೆ ಸಲ್ಲಿಸಿದರು. ಮೇ 17ರಂದು 15 ನಿರ್ದೇಶಕ ಸ್ಥಾನಗಳಿಗೆ ಮತದಾನ ನಡೆದಿದ್ದು, ಇಡೀ ಜಿಲ್ಲೆಯನ್ನೇ ತನ್ನಡೆ ಗಮನಿಸುವ ರೀತಿ, ಎಂಎಲ್‍ಎ, ಎಂಪಿ ಚುನಾವಣೆ ರೀತಿ ಮತದಾನ ನಡೆದಿತ್ತು. ಮೀಸೆ ಮಹಾಲಿಂಗಪ್ಪ ಅವರ ಬಣವನ್ನು ಸೋಲಿಸಲು ಮಾಜಿ ಶಾಸಕ ಎ.ವಿ.ಉಮಾಪತಿ ಸೇರಿ ಹಾಲಿ-ಮಾಜಿ ಶಾಸಕರು, ಪ್ರಭಾವಿಗಳು, ಹಣವಂತರು ಅಖಾಡಕ್ಕೆ ಇಳಿದಿದ್ದರು.2,424 ಮತದಾರರನ್ನು ಹೊಂದಿರುವ ಜಿಲ್ಲಾ ಸಂಘದ 15 ನಿರ್ದೇಶಕರ ಸ್ಥಾನಕ್ಕೆ 34 ಮಂದಿ ಸ್ಪರ್ಧಿಸಿದ್ದು, ಎಲ್ಲರೂ ತೀವ್ರ ಪೈಪೋಟಿ ನೀಡಿದ್ದರು. ಅಂತಿಮವಾಗಿ ಮೀಸೆ ಮಹಾಲಿಂಗಪ್ಪ ಬಣ 8 ಸ್ಥಾನಗಳನ್ನು ಪಡೆಯುವ ಮೂಲಕ ಮೇಲುಗೈ ಸಾಧಿಸಿತ್ತು. ಆದರೂ ಆಡಳಿತ ವಶಪಡಿಸಿಕೊಳ್ಳಲು ಅಪರೇಷನ್ ಪ್ರಕ್ರಿಯೆಗೆ ಪ್ರಭಾವಿಗಳು ಕೈ ಹಾಕಿದ್ದರು. ಗೆದ್ದ ನಿರ್ದೇಶಕರನ್ನು ಹಿಡಿದಿಕೊಳ್ಳಲು ಎರಡು ಬಣದವರು ಮೇ 17ರಿಂದ 30ರ ವರೆಗೆ ಹರಸಾಹಸ ಪಟ್ಟಿದ್ದರು. ಮೀಸೆ ಮಹಾಲಿಂಗಪ್ಪ ಬಣದಿಂದ ಆಡಳಿತ ಕಿತ್ತುಕೊಳ್ಳಲು ಒಂದಿಬ್ಬರು ನಿರ್ದೇಶಕರನ್ನು ತಮ್ಮಡೆಗೆ ಸೆಳೆದುಕೊಳ್ಳುವ ಪ್ರಯತ್ನ ನಡೆದಿತ್ತು ಎಂಬ ಸುದ್ದಿ ಹರಿದಾಡಿತ್ತು. ಈ ರೀತಿ ಎರಡ ಬಣಗಳ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಅಂತಿಮವಾಗ ಶನಿವಾರ ತಹಸೀಲ್ದಾರ್ ಗೋವಿಂದರಾಜು ಚುನಾಣಾಧಿಕಾರಿ ಸಮ್ಮುಖದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಎಲ್ಲ ಸ್ಥಾನಗಳಿಗೂ ಎರಡು ಬಣದವರು ಸ್ಪರ್ಧಿಸಿದ್ದು, ಮೀಸೆ ಮಹಾಲಿಂಗಪ್ಪ ಗುಂಪು ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಜಿಲ್ಲಾ ಯಾದವ ಸಂಘದ ಆಡಳಿತದ ಸಾರಥ್ಯ ವಹಿಸಿಕೊಂಡಿದೆ.

ಗೆದ್ದ ಬಳಿಕ ಬೆಂಬಲಿಗರು, ಅಭಿಮಾನಿಗಳು, ಸಂಘದ ಸದಸ್ಯರು, ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಮೀಸೆ ಮಹಾಲಿಂಗಪ್ಪ, ವಿದ್ಯಾರ್ಥಿ ದೆಸೆಯಲ್ಲಿಯೇ ಸಮುದಾಯದ ಪರ ಹೋರಾಟ ನಡೆಸಿಕೊಂಡು ಬಂದಿದ್ದು, ತಿಂಗಳು ಗಟ್ಟಲೇ ಜೈಲುವಾಸ ಅನುಭವಿಸಿದ್ದೇ. ಅದರ ಫಲ ಜಿಪಂ ಹಾಗೂ ಯಾದವ ಸಂಘದ ಜಿಲ್ಲಾಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿತ್ತು ಎಂದರು. ಸಂಘದ ಕಟ್ಟಡ ಕೆಡವಿ ಬೃಹತ್ ಕಟ್ಟಡ ನಿರ್ಮಾಣ ಮಾಡಲು ಕನಸು ಕಟ್ಟಿಕೊಂಡಿದ್ದು, ಅದರ ಹಿನ್ನೆಲೆಯಲ್ಲಿ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿದ್ದವು. ಸರ್ಕಾರದಿಂದ ಅನುದಾನ ಕೂಡ ಬಿಡುಗಡೆ ಆಗಿತ್ತು. ಕಟ್ಟಡ ನಿರ್ಮಾಣದ ಹೊಣೆಗಾರಿಕೆಯನ್ನು ನಿರ್ಮಿತಿ ಕೇಂದ್ರಕ್ಕೆ ಜಿಲ್ಲಾಡಳಿತವೇ ವಹಿಸಿತ್ತು. ಆದರೆ, ಕಟ್ಟಡ ನಿರ್ಮಾಣ ವಿಳಂಬ ಮತ್ತು ಅದರಲ್ಲಿನ ಅವ್ಯವಹಾರಕ್ಕೆ ನಾನೇ ಕಾರಣವೆಂದು ಕೆಲವರು ಸುಳ್ಳು ಆರೋಪ ಮಾಡಿದರು. ಸಂಘದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು ಎಂದರು.

ಮತದಾರರಲ್ಲಿ ಗೊಂದಲ ಏರ್ಪಡಿಸುವ ಪ್ರಯತ್ನ ನಡೆಸಿದರು. ಆದರೂ ಮತದಾರರು ನನ್ನನ್ನು ದಾಖಲೆ ಮತಗಳಲ್ಲಿ ಗೆಲ್ಲಿಸಿದರು. ಅವರ ಭರವಸೆಗೆ ಚ್ಯುತಿ ಬಾರದ ರೀತಿ ಕೆಲಸ ನಿರ್ವಹಿಸುವೆ. ಮುಖ್ಯವಾಗಿ ಕಟ್ಟಡ ನಿಮಾರ್ಣಕ್ಕೆ ಜನಪ್ರತಿನಿಧಿಗಳಿಂದ ಅನುದಾನ ತಂದು ಪೂರ್ಣಗೊಳಿಸುವೆ. ಈ ವಿಷಯದಲ್ಲಿ ಪರ-ವಿರೋಧ ಎಂಬುದನ್ನು ಮರೆತು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮುದಾಯದ ಪ್ರಗತಿಗೆ ಶ್ರಮಿಸುವೆ ಎಂದು ತಿಳಿಸಿದರು. ಎಸ್‍ಟಿ ಮೀಸಲು ಗುರಿ: ಕಾಡುಗೊಲ್ಲ ಸಮುದಾಯ ಅತ್ಯಂತ ಹಿಂದುಳಿದಿದ್ದು, ಎಸ್‍ಟಿ ಗುಂಪಿಗೆ ಸೇರಿಸುವಂತೆ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸಂಸದ ಗೋವಿಂದ ಕಾರಜೋಳ ಸೇರಿ ಅನೇಕರು ಕೇಂದ್ರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮೀಸೆ ಮಹಾಲಿಂಗಪ್ಪ ಹೇಳಿದರು. ಕೂಡಲೇ ಅವರೆಲ್ಲರ ಮೇಲೆ ಒತ್ತಡ ತಂದು ಕಾಡುಗೊಲ್ಲ ಸಮುದಾಯಕ್ಕೆ ಎಸ್‍ಟಿ ಮೀಸಲು ದೊರೆಯುವಂತೆ ಮಾಡುವುದು ಸಂಘದ ಮುಂದಿರುವ ಪ್ರಮುಖ ಸವಾಲು. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ನಿರ್ದೇಶಕರಾದ ಕೆ.ಆರ್.ಹಳ್ಳಿ ರವಿ, ಈರಣ್ಣ ಈಶ್ವರಗೆರೆ, ಸಿ.ತಿಮ್ಮಣ್ಣ, ಚಿಕ್ಕಣ್ಣ, ಮುಂಗಸವಳ್ಳಿ ಪ್ರಕಾಶ್, ಬಿ.ಡಿ.ಬಸವರಾಜ್, ಅಶೋಕ್‍ಕುಮಾರ್, ಎ.ಚಿತ್ತಯ್ಯ, ಆಕರ್ಶ ಯಾದವ್ ಇತರರು ಉಪಸ್ಥಿತರಿದ್ದರು.

ಜಿಲ್ಲಾ ಗೊಲ್ಲ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡ ಮೀಸೆ ಮಹಾಲಿಂಗಪ್ಪ, ಉಪಾಧ್ಯಕ್ಷ ಕಿರಣಕುಮಾರ್ ಅವರನ್ನು ಸದಸ್ಯರು, ಬೆಂಬಲಿಗರು ಅಭಿನಂದಿಸಿದರು.

Leave a Reply

Your email address will not be published. Required fields are marked *