ಬೆಂಗಳೂರು: ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಭರ್ಜರಿ ಜಯ ದಾಖಲಿಸಿದೆ. ತವರಿನ ಅಂಗಳ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ ಎರಡನೇ ಗೆಲುವು ಒಲಿಸಿಕೊಂಡಿರುವ ಆರ್‌ಸಿಬಿ, ಇದೀಗ ಪಾಯಿಂಟ್ಸ್ ಟೇಬಲ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿ ಬೀಗಿದೆ.
ಆಡಿದ 5 ಪಂದ್ಯಗಳಲ್ಲಿ 4 ಗೆಲುವು ದಾಖಲಿಸಿರುವ ಆರ್‌ಸಿಬಿ ಒಟ್ಟು 8 ಅಂಕಗಳೊಂದಿಗೆ, ಇದುವರೆಗೆ ಅಗ್ರಸ್ಥಾನದಲ್ಲಿದ್ದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಹಿಂದಿಕ್ಕಿದೆ. ವಿಶೇಷವೆಂದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಕ್ನೋ ವಿರುದ್ಧ ಆರ್‌ಸಿಬಿಗೆ ಒಲಿದ ಮೊಟ್ಟಮೊದಲ ಗೆಲುವು ಇದಾಗಿದೆ. ಈ ಹಿಂದೆ ತವರಿನಲ್ಲಿ ನಡೆದಿದ್ದ ಎರಡೂ ಪಂದ್ಯಗಳಲ್ಲೂ ಲಕ್ನೋ ಮೇಲುಗೈ ಸಾಧಿಸಿತ್ತು.
ರಸಿಕ್, ಭುವಿ ಮಾರಕ ದಾಳಿಗೆ ನಲುಗಿದ ಲಕ್ನೋ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ನಿರ್ಧಾರವನ್ನು ಬೌಲರ್‌ಗಳು ಸಂಪೂರ್ಣವಾಗಿ ಸಮರ್ಥಿಸಿಕೊಂಡರು. ಮೊದಲು ಬ್ಯಾಟ್ ಮಾಡಿದ ಲಕ್ನೋ, ಆರ್‌ಸಿಬಿ ಬೌಲರ್‌ಗಳ ಕರಾರುವಾಕ್ ದಾಳಿಗೆ ಸಿಲುಕಿ 20 ಓವರ್‌ಗಳಲ್ಲಿ ಕೇವಲ 146 ರನ್‌ಗಳಿಗೆ ಆಲೌಟ್ ಆಯಿತು.
ಲಕ್ನೋ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ಆರಂಭಿಕ ಆಟಗಾರ ಐಡೆನ್ ಮಾರ್ಕ್ರಾಮ್ ಕೇವಲ 12 ರನ್‌ಗೆ ನಿರ್ಗಮಿಸಿದರೆ, ನಾಯಕ ರಿಷಭ್ ಪಂತ್ 5ನೇ ಓವರ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಎಸೆತದಲ್ಲಿ ಗಾಯಗೊಂಡು ನಿವೃತ್ತರಾದರು. ಕೊನೆಯಲ್ಲಿ ಮತ್ತೆ ಕ್ರೀಸ್‌ಗೆ ಬಂದರೂ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆಯುಷ್ ಬಡೋನಿ (38 ರನ್) ಹಾಗೂ ಮುಕುಲ್ ಚೌಧರಿ (39 ರನ್) ಅವರ ಹೋರಾಟದಿಂದ ತಂಡ ಸಾಧಾರಣ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಬೌಲಿಂಗ್‌ನಲ್ಲಿ ಮಿಂಚಿದ ಆರ್‌ಸಿಬಿಯ ರಸಿಕ್ ದಾರ್ 4 ವಿಕೆಟ್ ಕಿತ್ತರೆ, ಭುವನೇಶ್ವರ್ ಕುಮಾರ್ 3, ಕೃನಾಲ್ ಪಾಂಡ್ಯ 2 ಹಾಗೂ ಜೋಶ್ ಹ್ಯಾಜಲ್‌ವುಡ್ 1 ವಿಕೆಟ್ ಪಡೆದು ಮಿಂಚಿದರು.
ವಿರಾಟ್ ಅಬ್ಬರ, ಆರ್‌ಸಿಬಿಗೆ ಸುಲಭ ಜಯ 147 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಆರ್‌ಸಿಬಿಗೆ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸ್ಫೋಟಕ ಆರಂಭ ಒದಗಿಸಿದರು. ಕೇವಲ 34 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 49 ರನ್ ಸಿಡಿಸಿದ ಕೊಹ್ಲಿ, ದೇವದತ್ ಪಡಿಕ್ಕಲ್ ಜೊತೆಯಾಗಿ ಭದ್ರ ಬುನಾದಿ ಹಾಕಿದರು.
ನಂತರ ಕ್ರೀಸ್‌ಗೆ ಬಂದ ನಾಯಕ ರಜತ್ ಪಾಟಿದಾರ್ ಕೇವಲ 13 ಎಸೆತಗಳಲ್ಲಿ 27 ರನ್ ಚಚ್ಚಿದರೆ, ಜಿತೇಶ್ ಶರ್ಮಾ 9 ಎಸೆತಗಳಲ್ಲಿ 23 ರನ್ ಸಿಡಿಸಿ ಪಂದ್ಯವನ್ನು ಏಕಪಕ್ಷೀಯಗೊಳಿಸಿದರು. ಅಂತಿಮವಾಗಿ ಟಿಮ್ ಡೇವಿಡ್ ಮತ್ತು ರೊಮಾರಿಯೊ ಶೆಫರ್ಡ್ ಕೇವಲ 15.1 ಓವರ್‌ಗಳಲ್ಲೇ 5 ವಿಕೆಟ್ ನಷ್ಟಕ್ಕೆ ತಂಡವನ್ನು ಗೆಲುವಿನ ದಡ ಸೇರಿಸಿದರು.


