ಸಿರಿ ಧಾನ್ಯಗಳು ಕೇವಲ ಟ್ರೆಂಡ್ ಅಲ್ಲ – ಇದು ಆರೋಗ್ಯಕರ ಜೀವನಶೈಲಿಯ ಕೀಲಿಕೈ
ಸಿರಿ ಧಾನ್ಯಗಳ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಭಾರೀ ಚರ್ಚೆ ನಡೆಯುತ್ತಿದೆ. ಆದರೆ “ಸಿರಿ ಧಾನ್ಯಗಳನ್ನು ತಿನ್ನುವುದೇ ಆರೋಗ್ಯದ ಕಾಳಜಿ ತೋರಿಸುವುದೇ?” ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡಿದೆ. ವಾಸ್ತವದಲ್ಲಿ, ಇವು ಕೇವಲ ಫ್ಯಾಷನ್ ಆಹಾರವಲ್ಲ; ನಮ್ಮ ದೇಹ, ಪರಿಸರ ಮತ್ತು ಕೃಷಿಯೊಂದಿಗೆ ಆಳವಾದ ನಂಟು ಹೊಂದಿರುವ ಪೌಷ್ಟಿಕ ಆಹಾರಗಳಾಗಿವೆ.
ಭಾರತದಲ್ಲಿ ಹಿಂದಿನಿಂದಲೂ ಸಜ್ಜೆ, ರಾಗಿ, ನವಣೆ, ಜೋಳ, ಹಾರಕ, ಊದಲು, ಬರಗು, ಸಾಮೆ, ಕೊರ್ಲೆ ಮುಂತಾದ ಸಿರಿ ಧಾನ್ಯಗಳು ಜನರ ಮುಖ್ಯ ಆಹಾರವಾಗಿದ್ದವು. ಮಳೆಯಾಧಾರಿತ ಕೃಷಿಯಲ್ಲಿಯೂ ಸುಲಭವಾಗಿ ಬೆಳೆಯುವ ಸಾಮರ್ಥ್ಯ ಇವುಗಳಿಗಿದ್ದು, ಬರಗಾಲಕ್ಕೂ ತಾಳ್ಮೆಯಿಂದ ಬೆಳೆಯುತ್ತಿದ್ದ ಕಾರಣ ಜನರು ಆರೋಗ್ಯವಾಗಿದ್ದರು. ಆದರೆ ನೀರಾವರಿ ಕೃಷಿ ವಿಸ್ತಾರವಾದ ಬಳಿಕ ಅಕ್ಕಿ ಮತ್ತು ಗೋಧಿ ಪ್ರಾಬಲ್ಯ ಹೆಚ್ಚಾಗಿ ಸಿರಿ ಧಾನ್ಯಗಳು ಕಡೆಗಣಿಸಲ್ಪಟ್ಟವು.
ಇದೀಗ ಅವುಗಳ ಮಹತ್ವ ಮತ್ತೆ ಜನರ ಗಮನಕ್ಕೆ ಬಂದಿದೆ. ಸಿರಿ ಧಾನ್ಯಗಳಲ್ಲಿ ಸಂಕೀರ್ಣ ಪಿಷ್ಟ, ನಾರು, ಪ್ರೋಟೀನ್, ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಕ್ಯಾಲ್ಶಿಯಂ, ಕಬ್ಬಿಣ, ಮೆಗ್ನೀಶಿಯಂ, ಅಮೈನೋ ಆಮ್ಲಗಳಂತಹ ಪೋಷಕಾಂಶಗಳು ದೇಹದ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತವೆ.
ರುಚಿಯ ವಿಷಯದಲ್ಲೂ ಸಿರಿ ಧಾನ್ಯಗಳು ಹಿಂದೆ ಇಲ್ಲ. ರೊಟ್ಟಿ, ಮುದ್ದೆ, ದೋಸೆ, ಇಡ್ಲಿ, ಉಪ್ಪಿಟ್ಟು, ಖಿಚಡಿ, ಪಾಯಸ, ಹಲ್ವಾ, ಕೇಕ್, ಕುಕೀಸ್‌ಗಳವರೆಗೂ ಇವುಗಳಿಂದ ರುಚಿಕರವಾದ ಅಡುಗೆ ಸಾಧ್ಯ. ಸಮಯದ ಅಭಾವ ಇದ್ದರೂ ಅನ್ನದ ಬದಲು ಸಿರಿ ಧಾನ್ಯಗಳನ್ನು ಬಳಸುವುದರಿಂದ ಪೋಷಕಾಂಶಗಳು ದೇಹಕ್ಕೆ ಸೇರುತ್ತವೆ.
ಮತ್ತೊಂದು ಪ್ರಮುಖ ಲಾಭವೆಂದರೆ ಗ್ಲೂಟೆನ್ ಮುಕ್ತ ಆಹಾರ. ಗೋಧಿಯ ಗ್ಲೂಟೆನ್‌ನಿಂದ ಜೀರ್ಣಕ್ರಿಯೆ ಸಮಸ್ಯೆ ಇರುವವರಿಗೆ ಸಿರಿ ಧಾನ್ಯಗಳು ಉತ್ತಮ ಪರ್ಯಾಯ. ಮಧುಮೇಹಿಗಳಿಗೂ ಇದು ಅತ್ಯುತ್ತಮ ಆಹಾರವಾಗಿದ್ದು, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಧಾನವಾಗಿ ಏರಿಸುವ ಮೂಲಕ ನಿಯಂತ್ರಣದಲ್ಲಿಡುತ್ತದೆ. ತೂಕ ಇಳಿಕೆಗೆ, ಹೃದಯ ಆರೋಗ್ಯಕ್ಕೆ ಹಾಗೂ ರಕ್ತದೊತ್ತಡ ನಿಯಂತ್ರಣಕ್ಕೂ ಸಹಕಾರಿ.
ಸಿರಿ ಧಾನ್ಯಗಳು ಆರೋಗ್ಯಕ್ಕೆ ಮಾತ್ರವಲ್ಲ, ಪರಿಸರಕ್ಕೂ ಸ್ನೇಹಿ. ಕಡಿಮೆ ನೀರು, ಕಡಿಮೆ ರಾಸಾಯನಿಕಗಳು ಮತ್ತು ಕೀಟನಾಶಕಗಳ ಅಗತ್ಯವಿರುವುದರಿಂದ ಜಲ, ಮಣ್ಣು ಮತ್ತು ಗಾಳಿಯ ಮಾಲಿನ್ಯವನ್ನು ಕಡಿಮೆ ಮಾಡುತ್ತವೆ. ಹೀಗಾಗಿ ಸಿರಿ ಧಾನ್ಯಗಳ ಸೇವನೆ ವ್ಯಕ್ತಿಗತ ಆರೋಗ್ಯದ ಜೊತೆಗೆ ಪರಿಸರ ಸಂರಕ್ಷಣೆಯತ್ತವೂ ಒಂದು ಹೆಜ್ಜೆಯಾಗಿದೆ.
Views: 9