ಚಿತ್ರದುರ್ಗ ಜು. 5
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಮಕ್ಕಳಿಗೆ ಶಿಕ್ಷಣದಲ್ಲಿ ಉತ್ತಮವಾದ ಅಂಕಗಳನ್ನು ಗಳಿಸುವಂತೆ ಹೇಳುವ ಪೋಷಕರು ಅದರ ಜೊತೆಯಲ್ಲಿ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವತ್ತ ಮುಂದಾಗಬೇಕಿದೆ, ಈಗ ನಿಮ್ಮನ್ನು ತಿರಸ್ಕಾರ ಮಾಡಿದವರ ಮುಂದೊಂದು ದಿನ ನಿಮ್ಮನ್ನು ಸತ್ಕಾರ ಮಾಡುವಂತೆ ಬೆಳೆಯಬೇಕಿದೆ ಎಂದು ಪ್ರತಿಭಾವಂತ ಮಕ್ಕಳಿಗೆ ಶ್ರೀ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀಗಳು ಕಿವಿ ಮಾತು ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದವತಿಯಿಂದ ಭಾನುವಾರ ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಳ್ಳಲಾದ ಚಿತ್ರದುರ್ಗ ಮತ್ತು ದಾವಣಗೆರೆ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿಯವರು ಉತ್ತಮವಾದ ಕಾರ್ಯವನ್ನು ಮಾಡುತ್ತಿದ್ದಾರೆ ಸರ್ಕಾರಿ ನೌಕರರೆಂದರೆ ಬರೀ ಕೆಲಸ, ಹೋರಾಟ ಹಕ್ಕುಗಳನ್ನು ಕೇಳುವುದು ಮಾತ್ರವಲ್ಲ ಈ ರೀತಿಯಾದ ಕೆಲಸವನ್ನು ಸಹಾ ಮಾಡುತ್ತಿದ್ದಾರೆ. ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹ ಮಾಡುವುದು ಉತ್ತಮವಾದ ಕಾರ್ಯವಾಗಿದ್ದು, ಇದರಿಂದ ಅವರು ಪ್ರೇರಣೆಗೊಂಡು ಬೇರೆಯವರು ಸಹಾ ಮುಂದಿನ ದಿನದಲ್ಲಿ ಈ ರೀತಿಯಾದ ಸನ್ಮಾನಕ್ಕೆ ಪಾತ್ರರಾಗಬಹುದಾಗಿದೆ, ಈಗ ಸನ್ಮಾನ ಪಡೆದವರು ಮುಂದೊಂದು ದಿನ ಈ ರೀತಿಯಾದ ವೇದಿಕೆಯಲ್ಲಿ ಕುಳಿತುಕೊಳ್ಳುವಂತಾಗಬೇಕಿದೆ ಆಗ ಈ ಸನ್ಮಾನಕ್ಕೆ ಅರ್ಥ ಬರುತ್ತದೆ ಎಂದರು.
ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಲ್ಲಿ ಪೋಷಕರ ಶ್ರಮ ಹಾಗೂ ಪಾತ್ರ ಹೆಚ್ಚಾಗಿದೆ, ಮುಂದಿನ ದಿನದಲ್ಲಿ ಪ್ರಪಂಚದ ಯಾವುದೇ ಉನ್ನತವಾದ ಕಂಪನಿಗಳಲ್ಲಿ ಉನ್ನತ ಸ್ಥಾನದಲ್ಲಿ ನಮ್ಮ ಭಾರತದ ಮಕ್ಕಳು ಇರುವಂತಾಗಬೇಕಿದೆ, ಇಲ್ಲವೆ ನೀವೇ ಒಂದು ಕಂಪನಿಯನ್ನು ಪ್ರಾರಂಭ ಮಾಡಿ ಬೇರೆಯವರಿಗೆ ಕೆಲಸವನ್ನು ನೀಡುವಂತಾಗಬೇಕಿದೆ ಎಂದ ಶ್ರೀಗಳು, ಇಂದಿನ ದಿನಮಾನದಲ್ಲಿ ಮಕ್ಕಳು ಪೋಷಕರನ್ನು ಮರೆಯುಂತ ವಾತಾವರಣ ನಿರ್ಮಾಣವಾಗಿದೆ, ವಿದೇಶದಲ್ಲಿ ಮಕ್ಕಳು ವೃದ್ದಾಶ್ರಮದಲ್ಲಿ ಪೋಷಕರು ಎನ್ನುವಂತಾಗಿದೆ. ಕಷ್ಟಪಟ್ಟು ನಿಮ್ಮನ್ನು ಬೆಳಸಿ ಶಿಕ್ಷಣ ಕೂಡಿಸಿ ಮದುವೆ ಮಾಡಿದ ಪೋಷಕರನ್ನು ಹಲವಾರು ಜನ ಕೊನೆಯ ಕಾಲದಲ್ಲಿ ಅವರನ್ನು ನೋಡಿಕೊಳ್ಳದೆ ಬೀದಿಪಾಲು ಮಾಡುತ್ತಿದ್ದಾರೆ. ಈ ರೀತಿ ನೀವಾಗಬೇಡಿ ನಿಮ್ಮ ಪೋಷಕರನ್ನು ಕೊನೆಯ ಕಾಲದಲ್ಲಿ ಚನ್ನಾಗಿ ನೋಡಿಕೊಳ್ಳಿ ಎಂದು ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀಗಳು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಕರ್ನಾಟಕ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿಗಳಾದ ರವಿ.ಡಿ.ಚೆನ್ನಣ್ಣ ಮಾತನಾಡಿ, ಇಂದಿನ ಮಕ್ಕಳಿಗೆ ಯಾವುದನ್ನು ತಿಳಿಸುವ ಅಗತ್ಯ ಇಲ್ಲ ಎಲ್ಲವನ್ನು ಅವರು ತಿಳಿದುಕೊಂಡಿರುತ್ತಾರೆ, ನಮ್ಮ ಕಾಲದಲ್ಲಿ ಏನಾದರೂ ಮಾಹಿತಿ ಬೇಕಾದರೆ ಬೇರೆಯವರನ್ನು ಅವಲಂಬಿಸಬೇಕಿತ್ತು, ಈಗ ಆ ಕಾಲ ಇಲ್ಲ ಎಲ್ಲವನ್ನು ಬೆರಳಿನ ತುದಿಯಲ್ಲಿಯೇ ಪಡೆಯಬಹುದಾಗಿದೆ, ಸರ್ಕಾರಿ ನೌಕರರು ತಮ್ಮ ಸೇವಾ ಅವಧಿಯಲ್ಲಿ ಶೇ.35 ರಷ್ಟು ಕೆಲಸವನ್ನು ಮಾಡಿದರೆ ಸಾಕು ಜನತೆ ಕಣ್ಣಿನಲ್ಲಿ ದೇವರಾಗುತ್ತೀರಾ, ಆಶಕ್ತರು, ನೊಂದವರ ಕಷ್ಟಗಳನ್ನು ಆಲಿಸಿ ಅದಕ್ಕೆ ಪರಿಹಾರವನ್ನು ನೀಡಿದರೆ ಸಾಕು ಬಂದವರು ನಿಮ್ಮನ್ನು ಎಂದಿಗೂ ಸಹಾ ಮರೆಯುವುದಿಲ್ಲ, ಯಾವುದೇ ರೀತಿಯ ಒತ್ತಡ, ಪಕ್ಷಪಾತಕ್ಕೆ ಒಳಗಾಗದೇ ಪ್ರಮಾಣಿಕವಾಗಿ ಕೆಲಸವನ್ನು ಮಾಡಿದಾಗ ಜನತೆಯ ಮನ್ನಣೆಗೆ ಒಳಗಾಗುತ್ತಾರೆ. ನಿಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರಬೇಡಿ ಅವರಿಗೆ ಇಷ್ಟವಾದ ಕೆಲಸವನ್ನು ಮಾಡಲು ಬಿಡಿ ಅವರಿಗೆ ಇಷ್ಟವಾದನ್ನು ಕಲಿಯಲು ಬಿಡಿ ಅಗ ಅವರ ಪಾಲಿಗೆ ನೀವು ದೇವರಾಗುತ್ತಿರಾ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ಮಾತನಾಡಿ, ನನಗೆ ಹೋರಾಟದಲ್ಲಿ ಜನಯ ಕಂಡ ದಿನಕ್ಕಿಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುವುದು ತುಂಬಾ ಸಂತೋಷವಾದ ವಿಷಯವಾಗಿದೆ, ಕಳೆದ 7 ವರ್ಷಗಳಿಂದ 3 ಕೋಟಿ ವೆಚ್ಚದಲ್ಲಿ ರಾಜ್ಯದ್ಯಾದಂತ ಈ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಸರ್ಕಾರಿ ನೌಕರರೆಂದರೆ ಮದ್ಯಮ ವರ್ಗದವರು ನಮ್ಮ ಇತಿಮಿತಿಗಳಲ್ಲಿಯೇ ಎಲ್ಲವನ್ನು ನಡೆಸಬೇಕಿದೆ, ಮಕ್ಕಳ ಶಿಕ್ಷಣ, ಸಂಸಾರ, ಕನಸುಗಳನ್ನು ನನಸು ಮಾಡುವುದು, ಮನೆ ನಿರ್ಮಾಣ, ಜವಾಬ್ದಾರಿ, ಮದುವೆ ಎಂಬ ಹಲವಾರು ಹೊಣೆಗಾರಿಕೆಗಳು ಇವೆ, ಇವುಗಳಲ್ಲವನ್ನು ಪೂರ್ಣ ಮಾಡುವುದಕ್ಕೆ ಸಾಲವನ್ನು ಮಾಡಬೇಕಿದೆ, ಇದನ್ನು ಅರಿತು ನಿಮ್ಮ ಪೋಷಕರಿಗೆ ಮುಂದಿನ ದಿನದಲ್ಲಿ ಹೊರೆಯಾಗದೆ ಅವರಿಗೆ ನೆರವಾಗುವಂತ ಕಾರ್ಯವನ್ನು ಮಾಡುವಂತೆ ಕರೆ ನೀಡಿದರು.
ಚಿತ್ರದುರ್ಗದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ 120 ಪಿ.ಯು.ನಲ್ಲಿ 141 ದಾವಣಗೆರೆಯಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ 125 ಪಿ.ಯು.ನಲ್ಲಿ 142 ಮಕ್ಕಳು ಸನ್ಮಾನಕ್ಕೆ ಪಾತ್ರರಾದರು. ಪ್ರತಿಭಾ ಪುರಸ್ಕಾರಕ್ಕೆ ಅರ್ಹರಾದ ವಿದ್ಯಾರ್ಥಿಗಳಿಗೆ 2000 ನಗದು, ಉತ್ತಮವಾದ ಬ್ಯಾಗು, ಪ್ರಮಾಣ ಪತ್ರ, ಶಾಲು, ಹಾರ ಹಾಗೂ ಪುಸ್ತಕ ಗಳನ್ನು ನೀಡಲಾಯಿತು.
ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷರಾದ ಮಾಲತೇಶ್ ಮುದ್ದಜ್ಜಿ ಸ್ವಾಗತಿಸಿದರು, ಗಂಗಾಧರ ತಂಡ ನಾಡಗೀತೆಯನ್ನು ಹಾಡಿದರು. ದಿವ್ಯ ಸಾನಿಧ್ಯವನ್ನು ಹೊಸದುರ್ಗ ಮದುರೆಯ ಶ್ರೀ ಭಗೀರಥ ಗುರುಪೀಠದ ಡಾ.ಶ್ರೀ ಪುರುಷೋತ್ತಮಾನಂದ ಪುರಿ ಶ್ರೀಗಳು ವಹಿಸಿದ್ದರು, ಇನ್‍ಸೈಟ್ ಐಎಎಸ್ ಸ್ಟಡಿ ಸೆಂಟರ್‍ನ ಸಂಸ್ಥಾಪಕ ನಿರ್ದೆಶಕರಾದ ವಿನಯ ಕುಮಾರ್ ಜಿ.ಬಿ. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಬಸವರಾಜು, ಗೌರವಾಧ್ಯಕ್ಷರಾದ ಮಲ್ಲಿಕಾರ್ಜನ ಬಿ., ಹಿರಿಯ ಉಪಾಧ್ಯಕ್ಷರಾದ ಸುರೇಶ್ ಸಿ ಶೆಡಶ್ಯಾಳ, ಸೋಮಶೇಖರ್‍ಯ್ಯ, ಮೋಹನ್‍ಕುಮಾರ್ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್, ಜಿಲ್ಲಾ ಖಂಜಾಚಿ ಮಲ್ಲಿಕಾರ್ಜನ ರಾಜ್ಯ ಪರಿಷತ್ ಸದಸ್ಯರಾದ ರಾಜಪ್ಪ, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಸಿ.ಟಿ, ವಿರೇಶ್, ಹಿರಿಯೂರು ರಮೇಶ್ ಭಾಗವಹಿಸಿದ್ದರು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: