ಚಿತ್ರದುರ್ಗ ಮೇ. 02
ವರದಿ ಮತ್ತು ಪೋಟೋ ಕೃಪೆ, ಸುರೇಶ್ ಪಟ್ಟಣ್
ಜಿಲ್ಲೆಯಲ್ಲಿ ಅಪಾರ ಭಕ್ತ ಸಮೂಹವನ್ನು ಹೊಂದಿರುವ ಗ್ರಾಮ ದೇವತೆಯಾದ ಉಚ್ಚಂಗಿಯಲ್ಲಮ್ಮ ಅಮ್ಮನವರ ಸಿಡಿ ಮಹೋತ್ಸವವು ದೊಡ್ಡಪೇಟೆಯಲ್ಲಿನ ದೇವಾಲಯದ ಮುಂದೆ ನಿರ್ಮಾಣ ಮಾಡಿದ ಕಂಭದಲ್ಲಿ ಶನಿವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.
ಅಮ್ಮನವರ ಪಾದಗುಡಿಯನ್ನು ತಳಿರು ತೋರಣಗಳಿಂದ ಅಲಂಕರಿಸಿ ರಂಗೋಲಿ ಬಿಟ್ಟು ಸಿಂಗರಿಸಿದ್ದರು. ಶನಿವಾರ ಬೆಳಗಿನ ಬ್ರಾಹ್ಮಿ ಮಹೂರ್ತದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ನೈವೇದ್ಯ, ಸಹಸ್ರನಾಮಾರ್ಚನೆ ಮಾಡಿದರು. ಉತ್ಸವಮೂರ್ತಿಯನ್ನು ಅಲಂಕರಿಸಿ, ಪೂಜಿಸಿ ದೇವಾಲಯದ ಪ್ರಾಂಗಣ ದಲ್ಲಿ ಉತ್ಸವ ನಡೆಸಿದರು. ಸಿಡಿ ರಥವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಪೂಜಿಸಿದ ನಂತರ ಹರಕೆ ಹೊತ್ತ ಭಕ್ತರು ಸಿಡಿ ರಥಕ್ಕೆ ಎಡೆ ಅರ್ಪಿಸಿ ಪೂಜಿಸಿ ಹರಕೆ ತೀರಿಸಿದರು. ದೇವರ ಅಡ್ಡೆ ಹೊತ್ತವರು ಹಾಗೂ ಭಕ್ತರು ಸಿಡಿ ರಥಕ್ಕೆ ಪ್ರದಕ್ಷಿಣೆ ಹಾಕಿದ ನಂತರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಿಡಿ ಉತ್ಸವ ನಡೆಯಿತು. ರಾಜ್ಯದ ನಾನಾ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ಸಿಡಿ ಉತ್ಸವಕ್ಕೆ ಸಾಕ್ಷಿಯಾದರು. ಜಾತ್ರಾ ಮಹೋತ್ಸವದಲ್ಲಿ ನಾನಾ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲಾಯಿತು.


ಸಿಡಿ ಮಹೋತ್ಸವದಲ್ಲಿ ಸಿಡಿಯಾಡುವ ವ್ಯಕ್ತಿಯು ಕಟ್ಟುನಿಟ್ಟಿನ ಉಪವಾಸ ವ್ರತಾ ನಡೆಸಿದ್ದರು. ಭಾವೈಕ್ಯತೆಗೆ ಹೆಸರುವಾಸಿಯಾದ ಐತಿಹಾಸಿಕ ಪ್ರಸಿದ್ದ ಸಿಡಿ ಹಬ್ಬ ಅದ್ದೂರಿಯಾಗಿ ನೆರವೇರಿತು. ಸಾವಿರಾರು ಭಕ್ತರು ಸಿಡಿಯಲ್ಲಿ ಭಾಗಿಯಾಗಿ ಏಕನಾಥೇಶ್ವರಿ ಅಮ್ಮನವರನ್ನು ಕಣ್ತುಂಬಿಕೊಂಡರು. ವಿಜೃಂಭಣೆಯಿಂದ ನಡೆದ ಐತಿಹಾಸಿಕ ಭಾವೈಕ್ಯತೆಯ ಸಿಡಿ ಹಬ್ಬ, ನೋಡಲು ಎರಡು ಕಣ್ಣು ಸಾಲದಾಗಿತ್ತು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಿಡಿ ಎಳೆದುಕೊಂಡ ಹಾಯುವ ಮೂಲಕ ಅದ್ದೂರಿಯಾಗಿ ನಡೆಯಿತು. ನೂರಾರು ವರ್ಷಗಳಿಂದ ಚಿತ್ರದುರ್ಗದಲ್ಲಿ ನಡೆಯುವ ಸಿಡಿ ಹಬ್ಬ ಭಾವೈಕ್ಯತೆಗೆ ಹೆಸರುವಾಸಿಯಾಗಿದೆ. ನಗರದಲ್ಲಿ ವಾಸವಾಗಿರುವ ಎಲ್ಲಾ ಸಮುದಾಯದ ಜನರು ಒಂದೊಂದು ಜವಾಬ್ದಾರಿಯೊಂದಿಗೆ ಈ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ. ಇನ್ನು ವಾಡಿಕೆಯಂತೆ ಮುಖಂಡರು 45 ಅಡಿ ಉದ್ದದ ಮರಕ್ಕೆ ಸಿಡಿಯನ್ನು ಕಟ್ಟಿ ಹೂ, ಬಲೋನ್, ವಿವಿಧ ಬಣ್ಣದ ಬಟ್ಟೆಯಿಂದ ಆಲಂಕಾರ ಮಾಡಿದರು. ಸಿಡಿರಣ್ಣವನ್ನು ಮರಕ್ಕೆ ಕಟ್ಟಿ ಪೂಜೆ ಸಲ್ಲಿಸಿ ಸಿಡಿ ಎಳೆಯುವುದಕ್ಕೆ ಚಾಲನೆ ನೀಡಿದರು.
ಎಲ್ಲಾ ಸಮುದಾಯದ ಜನರು ಒಟ್ಟಾಗಿ ನಡೆಸಿದ ಸಿಡಿ ಹಬ್ಬ ಅತ್ಯಂತ ಸಂಭ್ರಮದಿಂದ ನಡೆದು, ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಈ ವೇಳೆ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಭಕ್ತರು ಸಿಡಿಗೆ ಹಣ್ಣು ಜವನ ಎಸೆದು ಭಕ್ತ ಭಾವದಿಂದ ನಮಿಸಿದರು. ಸಾವಿರಾರು ಜನ ಭಕ್ತರು ಅಪೂರ್ವ ಸಂಗಮ ಕಣ್ಣು ತುಂಬಿಕೊಂಡು ಪುನೀತ ಭಾವ ಅನುಭವಿಸಿದರು. ಸಾಂಪ್ರದಾಯಿಕ ಉತ್ಸವ ಮಾನವೀಯ ಸಂಬಂಧಗಳ ಬಗ್ಗೆ ವಿಶೇಷ ಸಂದೇಶ ರವಾನಿಸುವ ಮೂಲಕ ಜನರ ಮನ ಶುದ್ಧಗೊಳಿಸುವ ಮೂಲಕ ಸಾರ್ಥಕತೆ ಪಡೆಯಿತು. ಈ ಅಪರೂಪದ, ವೈಭವದ ಉತ್ಸವವನ್ನು ನೋಡಲು ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.
ಜಾತ್ರೆಯ ಅಂಗವಾಗಿ ವಿವಿಧ ರೀತಿಯ ಅಂಗಡಿಗಳು ಬಂದಿದ್ದು, ಇದರಲ್ಲಿ ವಿವಿಧ ರೀತಿಯ ಧ್ವನಿ ಮಾಡುವ ಸಾಧನೆಗಳನ್ನು ಖರೀದಿಸಿದ ಯುವ ಜನತೆ ಅದರಿಂದ ಧ್ವನಿ ಮಾಡುವುದರ ಮೂಲಕ ಹೋಗಿ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಿಡಿ ಉತ್ಸವ ಸುಗಮವಾಗಿ ನಡೆಯಲು ಪೋಲಿಸ್ ಇಲಾಖೆ ಸಂಜೆಯಿಂದಲೇ ಶ್ರಮವನ್ನು ಹಾಕಿತ್ತು. ಪುರುಷ ಮತ್ತು ಮಹಿಳಾ ಪೋಲಿಸರು ಜನತೆಯನ್ನು ನಿಭಾಯಿಸುವಲ್ಲಿ ಮುಂದಾಗಿದ್ದರು. ರಾಜ ಬೀದಿ ಉದ್ದಕ್ಕೂ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ಸಾವಿರಾರು ಜನ ಭಕ್ತರು ಉತ್ಸವದಲ್ಲಿ ಭಾಗಿಯಾಗಿದ್ದರು. ದುರ್ಗದ ಹೆಣ್ಣುಮಕ್ಕಳು ಈ ಸಂದರ್ಭದಲ್ಲಿ ತವರಿಗೆ ಬಂದು ಸಿಡಿ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸುವುದು ವಿಶೇಷವಾಗಿದೆ.

