ಬುಲವಾಯೋ: ಐಸಿಸಿ ಅಂಡರ್-19 ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಯುವ ಪಡೆ ಶುಭಾರಂಭ ಮಾಡಿದೆ. ಗುರುವಾರ ನಡೆದ ಪಂದ್ಯದಲ್ಲಿ ಮಧ್ಯಮ ವೇಗಿ ಹೆನಿಲ್ ಪಟೇಲ್ ಅವರ ಮಾರಕ ಬೌಲಿಂಗ್ ನೆರವಿನಿಂದ ಭಾರತ ತಂಡವು ಅಮೆರಿಕ ವಿರುದ್ಧ ಡಕ್ವರ್ಥ್ ಲೂಯೀಸ್ (ಡಿಎಲ್‌ಎಸ್) ನಿಯಮದ ಪ್ರಕಾರ 6 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ.
ಹೆನಿಲ್ ಪಟೇಲ್ ಬೌಲಿಂಗ್ ದಾಳಿ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಅಮೆರಿಕ ತಂಡಕ್ಕೆ ಆರಂಭದಿಂದಲೇ ಹೆನಿಲ್ ಪಟೇಲ್ ಆಘಾತ ನೀಡಿದರು. ಹೆನಿಲ್ ಅವರ ಕರಾರುವಾಕ್ ದಾಳಿಗೆ ನಲುಗಿದ ಅಮೆರಿಕ, ನಿಯಮಿತವಾಗಿ ವಿಕೆಟ್ ಕಳೆದುಕೊಂಡಿತು. ತಂಡದ ಪರ ನಿತೀಶ್ ಸುದಿನಿ (36) ಮತ್ತು ಅದ್ನಿತ್ ಝಂಬ್ (18) ಮಾತ್ರ ಸ್ವಲ್ಪ ಮಟ್ಟಿನ ಹೋರಾಟ ಪ್ರದರ್ಶಿಸಿದರು. ಅಂತಿಮವಾಗಿ ಅಮೆರಿಕ 35.2 ಓವರ್‌ಗಳಲ್ಲಿ ಕೇವಲ 107 ರನ್‌ಗಳಿಗೆ ಆಲೌಟ್ ಆಯಿತು. ಅಮೋಘ ಬೌಲಿಂಗ್ ಮಾಡಿದ ಹೆನಿಲ್, 7 ಓವರ್‌ಗಳಲ್ಲಿ 16 ರನ್ ನೀಡಿ ಪ್ರಮುಖ 5 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು.
ಸುಲಭ ಗುರಿ ಬೆನ್ನತ್ತಿದ ಭಾರತ
ಎರಡನೇ ಇನ್ನಿಂಗ್ಸ್ ವೇಳೆ ಮಳೆ ಅಡ್ಡಿಪಡಿಸಿದ ಕಾರಣ, ಡಿಎಲ್‌ಎಸ್ ನಿಯಮದ ಅನ್ವಯ ಭಾರತಕ್ಕೆ 37 ಓವರ್‌ಗಳಲ್ಲಿ 96 ರನ್‌ಗಳ ಪರಿಷ್ಕೃತ ಗುರಿ ನೀಡಲಾಯಿತು. ಈ ಗುರಿಯನ್ನು ಬೆನ್ನತ್ತಿದ ಭಾರತ 17.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 99 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಬ್ಯಾಟಿಂಗ್‌ನಲ್ಲಿ ಭಾರತದ ಪರ ಅಭಿಜ್ಞಾನ್ ಕುಂಡು 42 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರೆ, ನಾಯಕ ಆಯುಷ್ ಮ್ಹಾತ್ರೆ 19 ರನ್ ಮತ್ತು ವಿಹಾನ್ ಮಲ್ಹೋತ್ರಾ 18 ರನ್ ಗಳಿಸಿದರು. ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ (2) ಬೇಗನೆ ಔಟಾಗಿ ನಿರಾಸೆ ಮೂಡಿಸಿದರು.
ಇತರ ಪಂದ್ಯಗಳ ವಿವರ:
ಇದೇ ವೇಳೆ ನಡೆದ ಇನ್ನೆರಡು ಪಂದ್ಯಗಳಲ್ಲಿ, ಸ್ಕಾಟ್ಲೆಂಡ್ ಮತ್ತು ಜಿಂಬಾಬ್ವೆ ನಡುವಿನ ಪಂದ್ಯ ಮಳೆಯ ಕಾರಣ ಟಾಸ್ ಕೂಡ ಕಾಣದೆ ರದ್ದಾಯಿತು. ಹೀಗಾಗಿ ಎರಡೂ ತಂಡಗಳಿಗೆ ತಲಾ 1 ಅಂಕ ಹಂಚಲಾಯಿತು. ಮತ್ತೊಂದು ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಟಾಂಜಾನಿಯಾ ವಿರುದ್ಧ 5 ವಿಕೆಟ್‌ಗಳ ಜಯ ಗಳಿಸಿದೆ.
ಸಂಕ್ಷಿಪ್ತ ಸ್ಕೋರ್:
- ಅಮೆರಿಕ ಅಂಡರ್-19: 107/10 (35.5 ಓವರ್) – (ನಿತೀಶ್ ಸುದಿನಿ 36, ಹೆನಿಲ್ ಪಟೇಲ್ 16ಕ್ಕೆ 5).
- ಭಾರತ ಅಂಡರ್-19: 99/4 (17.2 ಓವರ್) – (ಅಭಿಜ್ಞಾನ್ ಕುಂಡು 42, ವಿಹಾನ್ ಮಲ್ಹೋತ್ರಾ 18, ರಿತ್ವಿಕ್ ಅಪ್ಪಿಡಿ 24ಕ್ಕೆ 2).
- ಪಂದ್ಯಶ್ರೇಷ್ಠ: ಹೆನಿಲ್ ಪಟೇಲ್
ಇಂದಿನ ಪ್ರಮುಖ ಪಂದ್ಯಗಳು (ಮಧ್ಯಾಹ್ನ 1 ಗಂಟೆಗೆ):
- ಪಾಕಿಸ್ತಾನ vs ಇಂಗ್ಲೆಂಡ್
- ಆಸ್ಟ್ರೇಲಿಯಾ vs ಐರ್ಲೆಂಡ್
- ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ
- ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
Views: 17