ಚಿತ್ರದುರ್ಗ, ಆ. 06:
ಚಿತ್ರದುರ್ಗದ ರೋಟರಿ ಕ್ಲಬ್ ಗಳು ಹಾಗೂ ಇನ್ನರ್ ವೀಲ್ ಕ್ಲಬ್ ಗಳು 5 ಆಗಸ್ಟ್ 2026, ಬುಧವಾರ ಸಂಜೆ ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿ ಬಾಲಭವನದಲ್ಲಿ ಜಂಟಿಯಾಗಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಬಿ.ಇ. ರಂಗಸ್ವಾಮಿ ವಿಶೇಷ ಆಹ್ವಾನಿತ ಅತಿಥಿಗಳಾಗಿ ಹಾಗೂ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡುತ್ತಾ, ರೋಟರಿ ಸದಸ್ಯರಾಗಿ, ವಿವಿಧ ಹಂತದಲ್ಲಿ ಪದಾಧಿಕಾರಿಗಳಾಗಿ ತಮ್ಮ ಪಯಣವನ್ನು ಸ್ಮರಿಸಿ, ತಮ್ಮ ವ್ಯಕ್ತಿತ್ವ ಹಾಗೂ ನಾಯಕತ್ವ ಗುಣಗಳನ್ನು ರೂಪಿಸುವಲ್ಲಿ ರೋಟರಿ ಮಹತ್ವದ ಪಾತ್ರ ವಹಿಸಿದೆಯೆಂದು ಹೃನ್ಮನತುಂಬಿ ನೆನೆದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಉನ್ನತ ಶಿಕ್ಷಣ, ಮೌಲ್ಯಾಧಾರಿತ ನಾಯಕತ್ವ, ಸಂಶೋಧನಾ ಮನೋಭಾವ, ಯುವಜನರ ವ್ಯಕ್ತಿತ್ವ ವಿಕಾಸ ಹಾಗೂ ಸಮಾಜಮುಖಿ ಸೇವೆಯ ಅಗತ್ಯತೆ ಕುರಿತು ಪ್ರೇರಣಾದಾಯಕ ಉಪನ್ಯಾಸ ನೀಡಿದರು. ಶಿಕ್ಷಣವು ಕೇವಲ ಪದವಿಗೆ ಸೀಮಿತವಾಗದೆ ಉತ್ತಮ ನಾಗರಿಕರನ್ನು ರೂಪಿಸುವ ಶಕ್ತಿಯಾಗಬೇಕು ಎಂದು ಅವರು ಕರೆ ನೀಡಿದರು.

ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಣ ಮತ್ತು ಸೇವೆ ಎರಡೂ ಸಮಾನವಾಗಿ ಮಹತ್ವದ ಪಾತ್ರ ವಹಿಸುತ್ತವೆ. ಉತ್ತಮ ಶಿಕ್ಷಣವು ಕೇವಲ ಉದ್ಯೋಗವನ್ನಷ್ಟೇ ನೀಡುವುದಿಲ್ಲ; ಅದು ಉತ್ತಮ ವ್ಯಕ್ತಿತ್ವ, ನೈತಿಕತೆ, ಸಾಮಾಜಿಕ ಹೊಣೆಗಾರಿಕೆ ಮತ್ತು ನಾಯಕತ್ವವನ್ನು ಬೆಳೆಸುತ್ತದೆ. ಇಂದಿನ ಯುವಜನತೆ ಹೊಸ ತಂತ್ರಜ್ಞಾನ, ಸಂಶೋಧನೆ, ನವೀನ ಆಲೋಚನೆ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು. ಪುಸ್ತಕದ ಜ್ಞಾನದ ಜೊತೆಗೆ ಜೀವನ ಮೌಲ್ಯಗಳೂ ಅಗತ್ಯವಾಗಿವೆ. ರೋಟರಿ ಮತ್ತು ಇನ್ನರ್‌ವೀಲ್ ಸಂಸ್ಥೆಗಳು ಶಿಕ್ಷಣ, ಆರೋಗ್ಯ, ಪರಿಸರ ಮತ್ತು ಸಮಾಜ ಸೇವೆಯಲ್ಲಿ ಮಾಡುತ್ತಿರುವ ಕಾರ್ಯಗಳು ನಿಜಕ್ಕೂ ಶ್ಲಾಘನೀಯ. ಇಂತಹ ಸಂಸ್ಥೆಗಳು ಸಮಾಜದಲ್ಲಿ ಶಾಶ್ವತ ಬದಲಾವಣೆಯನ್ನು ತರುವ ಶಕ್ತಿಯನ್ನು ಹೊಂದಿವೆ. ಎಲ್ಲ ಸದಸ್ಯರು ಇದೇ ಸೇವಾ ಮನೋಭಾವವನ್ನು ಮುಂದುವರಿಸಿ, ಇನ್ನಷ್ಟು ಜನರ ಬದುಕಿನಲ್ಲಿ ಬೆಳಕು ಮೂಡಿಸಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದರು.
ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಉಪಕುಲಪತಿಗಳು, ರೋಟರಿಯೊಂದಿಗಿನ ತಮ್ಮ ಪಯಣವನ್ನು, ಅದರ ಕಲಿಕೆಗಳನ್ನು ನೆನೆದು ಭಾವುಕರಾದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಅಧ್ಯಕ್ಷರಾದ ರೊ. ಯೋಗೀಶ್ ಸಹ್ಯಾದ್ರಿ, ಜ್ಞಾನ ಹಂಚಿಕೊಳ್ಳುವ ವೇದಿಕೆಗಳು ಸಮಾಜದ ಅಭಿವೃದ್ಧಿಗೆ ಹೊಸ ದಾರಿಯನ್ನು ತೋರಿಸುತ್ತವೆ. ರೋಟರಿ ಮತ್ತು ಇನ್ನರ್‌ವೀಲ್ ಸಂಸ್ಥೆಗಳು ಸಮಾಜ ಸೇವೆಯ ಮೂಲಕ ಜನಜೀವನದಲ್ಲಿ ಶಾಶ್ವತ ಬದಲಾವಣೆಯನ್ನು ತರಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಯುವಜನರ ಸಬಲೀಕರಣ ಹಾಗೂ ಮಾನವೀಯ ಸೇವಾ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ಎಲ್ಲಾ ಸದಸ್ಯರು ಕೈಜೋಡಿಸಬೇಕೆಂದು ಕರೆ ನೀಡಿದರು. ಇಂತಹ ಬೌದ್ಧಿಕ ಸಭೆಗಳು ಸದಸ್ಯರಲ್ಲಿ ಹೊಸ ಚಿಂತನೆ ಹಾಗೂ ಸೇವಾ ಮನೋಭಾವವನ್ನು ಬೆಳೆಸುತ್ತವೆ ಎಂದು ಅಭಿಪ್ರಾಯಪಟ್ಟರು. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಡಾ. ರಂಗಸ್ವಾಮಿ ಅವರ ಉಪಸ್ಥಿತಿ ನಮಗೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಶಿಕ್ಷಣ, ಆರೋಗ್ಯ, ಪರಿಸರ, ಯುವಜನರ ನಾಯಕತ್ವ, ಮಹಿಳಾ ಸಬಲೀಕರಣ ಹಾಗೂ ಮಾನವೀಯ ಸೇವೆಯಲ್ಲಿ ನಮ್ಮ ಕ್ಲಬ್‌ಗಳು ಇನ್ನಷ್ಟು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿವೆ. ಇಂತಹ ಜ್ಞಾನಪೂರ್ಣ ಉಪನ್ಯಾಸಗಳು ನಮ್ಮ ಚಿಂತನೆಗೆ ಹೊಸ ಆಯಾಮ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಅಧ್ಯಕ್ಷರು ಹಾಗೂ ತಂತ್ರಜ್ಞಾನ ಮತ್ತು ಉನ್ನತ ಶಿಕ್ಷಣ ತಜ್ಞರು ರೋ. ಶಶಿಧರ್ ರಾವ್, ಸಭೆಗೆ ಉಪಕುಲಪತಿಗಳ ಘನ ವ್ಯಕ್ತಿತ್ವದ ಪರಿಚಯವನ್ನು ಮಾಡಿಸಿ ಅವರ ಸಾಧನೆಗಳನ್ನು ಸ್ಮರಿಸಿ, ಇಂತಹ ಉದಾತ್ತ ವ್ಯಕ್ತಿತ್ವದ ಮಹೋನ್ನತ ವಿದ್ವಾಂಸರು ಈ ಕಾರ್ಯಕ್ರಮಕ್ಕೆ ಆಗಮಿಸಿರುವುದು ಸುಯೋಗ, ಅವರ ಜೀವನಾನುಭವದ ನುಡಿಗಳು ಸಮಾಜಕ್ಕೆ ದಾರಿದೀಪ ಎಂದರು.
ದೇಶ ವಿದೇಶಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಉಪಕುಲಪತಿಗಳ ಹೆಸರು ರಾರಾಜಿಸುತ್ತಿದ್ದು, ಕೋವಿಡ್ ಕಾಲದಲ್ಲಿಯೂ ಯಶಸ್ವಿಯಾಗಿ ದೇಶದ ಮಹತ್ವದ ತಾಂತ್ರಿಕ ವಿಶ್ವವಿದ್ಯಾಲಯಗಳಲ್ಲಿ ಒಂದಾದ ವಿ.ಟಿ.ಯು. ಪರೀಕ್ಷೆಗಳು ಯಶಸ್ವಿಯಾಗಿ ನೆರವೇರುವುದರಲ್ಲಿ ಮಾನ್ಯ ದಾವಣಗೆರೆ ವಿಶ್ವವಿದ್ಯಾಲಯದ ಈಗಿನ ಉಪಕುಲಪತಿಗಳು ಆಗ ವಿ.ಟಿ.ಯು. ನಲ್ಲಿ ನಿರ್ವಹಿಸಿದ ಜವಾಬ್ದಾರಿಯೂ ಕಾರಣ. ಕ್ಯಾಲ್ಕುಲೇಟೆಡ್ ರಿಸ್ಕ್ ತೆಗೆದುಕೊಳ್ಳುವುದು ವ್ಯಕ್ತಿತ್ವದ ಅಭಿವೃದ್ಧಿಗೂ, ಸಮಾಜದ ಅಭಿವೃದ್ಧಿಗೂ ಕಾರಣವಾಗುತ್ತದೆ, ಅಂತಹ ಮಹೋನ್ನತ ವ್ಯಕ್ತಿತ್ವ ನಮ್ಮೊಂದಿಗಿದ್ದಾರೆ ಎಂದು ಸ್ಮರಿಸಿದರು.
ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷರಾದ ರೋ. ಜಗನ್ನಾಥ ಶೆಟ್ಟಿ ಸ್ವಾಗತ ಕೋರಿದರು. ಇನ್ನರ್ ವೀಲ್ ಕ್ಲಬ್ ಆಫ್ ಚಿತ್ರದುರ್ಗ ಅಧ್ಯಕ್ಷರಾದ ಶ್ರೀಮತಿ ರಾಧಾ ಸತೀಶ್ ಕ್ಲಬ್ ನ ಮಾಸಿಕ ವರದಿಯನ್ನು ವಾಚಿಸಿದರು. ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3160 ಪಿ.ಡಿ.ಪಿ. ರೋ. ಕೆ. ಮಧುಪ್ರಸಾದ್ ಆಶಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3160 ಐ.ಪಿ.ಡಿ.ಜಿ. ರೋ. ಎಂ.ಕೆ. ರವೀಂದ್ರ ಸಮಾಪನ ನುಡಿಗಳನ್ನಾಡಿದರು. ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಕಾರ್ಯದರ್ಶಿಗಳಾದ ರೋ. ಮಂಜುನಾಥ್ ಕ್ಲಬ್ ನ ಸಾಪ್ತಾಹಿಕ ವರದಿ ವಾಚಿಸಿದರು. ವಂದನಾರ್ಪಣೆಯನ್ನು ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಕಾರ್ಯದರ್ಶಿಗಳಾದ ರೋ. ಮಂಜುನಾಥ್ ಭಾಗ್ವತ್ ನೆರವೇರಿಸಿದರು. ವಿಶೇಷ ಅತಿಥಿಗಳಿಗೆ ಗೌರವವನ್ನು ಸಲ್ಲಿಸಲಾಯಿತು.
ಚಿತ್ರದುರ್ಗದ ಮೂರೂ ರೋಟರಿ ಕ್ಲಬ್ ಗಳ, ಎರಡೂ ಇನ್ನರ್ ವೀಲ್ ಕ್ಲಬ್ ಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಅದಲ್ಲದೇ, ನಗರದ ಅನೇಕ ಸಂಘ ಸಂಸ್ಥೆಗಳ ಪ್ರಮುಖರು, ನಾಗರೀಕರು, ಉಪಸ್ಥಿತರಿದ್ದರು.