Brain-Eating Amoeba infection: ಮಲಿನಯುಕ್ತ ನೀರಿನಲ್ಲಿ ಈಜುವುದು ಮತ್ತು ಸೋಂಕಿನ ನೀರಿನಲ್ಲಿ ಮೂಗನ್ನು ತೊಳೆಯುವುದರಿಂದ ಈ ಸೋಂಕು ಹರಡುತ್ತದೆ. ಏಕಕೋಶ ಜೀವಿಯಾಗಿರುವ ‘ನೇಗ್ಲೇರಿಯಾ ಫೌಲೇರಿ’ ಎಂಬ ಅಮೀಬಾವೇ ಈ ಸೋಂಕಿನ ಮೂಲವೆಂದು ತಿಳಿದುಬಂದಿದೆ.
![](https://samagrasuddi.co.in/wp-content/uploads/2023/07/image-204.png)
ನ್ಯೂಯಾರ್ಕ್: ಮೆದುಳು ತಿನ್ನುವ ಅಮೀಬಾಗೆ 2 ವರ್ಷದ ಮಗು ಬಲಿಯಾಗಿರುವ ಆಘಾತಕಾರಿ ಘಟನೆ ಅಮೆರಿಕದ ನೆವಾಡದಲ್ಲಿ ನಡೆದಿದೆ. ‘ಮೆದುಳು ತಿನ್ನುವ ಅಮೀಬಾ’ ಎಂದು ಕರೆಯಲ್ಪಡುವ ‘ನೇಗ್ಲೇರಿಯಾ ಫೌಲೆರಿ’ ಸೋಂಕಿನಿಂದ ಮಗು ಮೃತಪಟ್ಟಿರುವುದಾಗಿ ವರದಿಯಾಗಿದೆ.
ವರದಿಯ ಪ್ರಕಾರ ನೀರಿನಲ್ಲಿ ಆಟವಾಡಿದ್ದ ಈ ಮಗು ಅನಾರೋಗ್ಯಕ್ಕೆ ತುತ್ತಾಗಿತ್ತು. ಬಳಿಕ ಅದನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ, ತಪಾಸಣೆ ನಡೆಸಲಾಗಿತ್ತು. ಈ ವೇಳೆ ಮಗುವಿನಲ್ಲಿ ‘ನೇಗ್ಲೇರಿಯಾ ಫೌಲೆರಿ’ ಸೋಂಕು ಇರುವುದು ಕಂಡು ಬಂದಿತ್ತು. ಆದರೆ ಈ ಕಾಯಿಲೆಗೆ ಚಿಕಿತ್ಸೆ ಇಲ್ಲದ ಪರಿಣಾಮ ಮಗು ಸಾವನ್ನಪ್ಪಿದೆ.
ಸೋಷಿಯಲ್ ಮೀಡಿಯಾದಲ್ಲಿ ಮಗುವಿನ ತಾಯಿ ಬ್ರಿಯಾನ ಎಂಬಾಕೆ ತನ್ನ ನೋವಿನ ವಿಚಾರವನ್ನು ಹಂಚಿಕೊಂಡಿದ್ದಾಳೆ. ‘ನನಗೆ ವಿಶ್ವದ ಅತ್ಯಂತ ಬಲಿಷ್ಠ ಮಗನಿದ್ದಾನೆ ಅಂತಾ ತಿಳಿದಿತ್ತು. ಭೂಮಿಯ ಮೇಲಿನ ಅತ್ಯುತ್ತಮ ಮಗುವನ್ನು ಕರುಣಿಸಿದ್ದಕ್ಕೆ ದೇವರಿಗೆ ನಾನು ಯಾವಾಗಲೂ ಕೃತಜ್ಞನಾಗಿದ್ದೆ. ಆದರೆ ಒಂದು ದಿನ ಆ ಮಗು ನನ್ನನ್ನು ಸ್ವರ್ಗದಲ್ಲಿ ಭೇಟಿಯಾಗುತ್ತದೆ’ ಅಂತಾ ನಾನು ಭಾವಿಸಿರಲಿಲ್ಲ’ವೆಂದು ಬೇಸರ ತೋಡಿಸಿಕೊಂಡಿದ್ದಾಳೆ.
ಇತ್ತೀಚೆಗೆ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ 15 ವರ್ಷದ ಬಾಲಕ ಕೂಡ ಮೆದುಳು ತಿನ್ನುವ ಅಮೀಬಾದಿಂದ ಪ್ರಾಣ ಕಳೆದುಕೊಂಡಿದ್ದ. ಭಾರತದಲ್ಲಿ ಇದು ಮೊದಲ ಪ್ರಕರಣವಾದ್ರೆ, ಅಮೆರಿಕದಲ್ಲಿ 2ನೇ ಪ್ರಕರಣ ಬೆಳಕಿಗೆ ಬಂದಿದೆ. ಮಲಿನಯುಕ್ತ ನೀರಿನಲ್ಲಿ ಈಜುವುದು ಮತ್ತು ಸೋಂಕಿನ ನೀರಿನಲ್ಲಿ ಮೂಗನ್ನು ತೊಳೆಯುವುದರಿಂದ ಈ ಸೋಂಕು ಹರಡುತ್ತದೆ. ಏಕಕೋಶ ಜೀವಿಯಾಗಿರುವ ‘ನೇಗ್ಲೇರಿಯಾ ಫೌಲೆರಿ’ ಎಂಬ ಅಮೀಬಾವೇ ಈ ಸೋಂಕಿನ ಮೂಲವೆಂದು ತಿಳಿದುಬಂದಿದೆ.