
India vs Australia: ಭಾರತ-ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ (Team India) 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ಅದರಲ್ಲೂ ದೆಹಲಿ ಟೆಸ್ಟ್ನಲ್ಲಿ ಭಾರತ ತಂಡವು 6 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಇದೀಗ ಈ ಪಂದ್ಯದ ವಿಡಿಯೋ ಕ್ಲಿಪ್ಪಿಂಗ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅರುಣ್ ಜೇಟ್ಲಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದ ಆರ್ಸಿಬಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ವೇಳೆ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು ಆರ್ಸಿಬಿ ಆರ್ಸಿಬಿ…ಘೋಷವಾಕ್ಯ ಮೊಳಗಿಸಲಾರಂಭಿಸಿದರು. ಇತ್ತ ತಮ್ಮನೇ ನೋಡಿ ಆರ್ಸಿಬಿ ಅಭಿಮಾನಿಗಳು ಘೋಷಣೆ ಕೂಗುತ್ತಿರುವುದು ವಿರಾಟ್ ಕೊಹ್ಲಿಗೂ ಸ್ಪಷ್ಟವಾಗಿತ್ತು.
ತಕ್ಷಣವೇ ವಿರಾಟ್ ಕೊಹ್ಲಿ ತಾನು ಧರಿಸಿರುವ ಭಾರತ ತಂಡದ ಜೆರ್ಸಿಯನ್ನು ತೋರಿಸಿದ್ದಾರೆ. ಅಲ್ಲದೆ ಆರ್ಸಿಬಿ ಬದಲಿಗೆ ಟೀಮ್ ಇಂಡಿಯಾವನ್ನು ಹುರಿದುಂಬಿಸಲು ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದರು. ಇದನ್ನು ಗಮನಿಸಿದ ಅಭಿಮಾನಿಗಳು ಆರ್ಸಿಬಿ ಬದಲಿಗೆ ಇಂಡಿಯಾ, ಇಂಡಿಯಾ… ಎಂಬ ಘೋಷಣೆಗಳನ್ನು ಕೂಗಲಾರಂಭಿಸಿದರು. ಇತ್ತ ಖುಷಿ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ ಮತ್ತಷ್ಟು ಜೋರಾಗಿ ಕೂಗುವಂತೆ ಅಭಿಮಾನಿಗಳನ್ನು ಹುರಿದುಂಬಿಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಹಿಂದೆ ಕೂಡ ಬದ್ಧತೆ ಮರೆದಿದ್ದ ಕೊಹ್ಲಿ:
ವಿರಾಟ್ ಕೊಹ್ಲಿಗೆ ಇಂತಹ ಅನುಭವ ಇದೇ ಮೊದಲೇನಲ್ಲ. ಈ ಹಿಂದೆ ಅಂದರೆ ಕಳೆದ ವರ್ಷ ನಡೆದ ಭಾರತ-ಆಸ್ಟ್ರೇಲಿಯಾ ನಡುವಣ ಟಿ20 ಸರಣಿಯ ವೇಳೆಯೂ ಆರ್ಸಿಬಿ ಅಭಿಮಾನಿಗಳು ಘೋಷವಾಕ್ಯ ಮೊಳಗಿಸಿದ್ದರು.
ತಕ್ಷಣವೇ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಜೆರ್ಸಿ ಮೇಲಿರುವ ಲೋಗೋವನ್ನು ತೋರಿಸಿದರು. ಈ ಮೂಲಕ ನಾನು ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ ಹೊರತು ಐಪಿಎಲ್ ಫ್ರಾಂಚೈಸಿ ಅಲ್ಲ ಎಂದು ಅಭಿಮಾನಿಗಳಿಗೆ ಸನ್ನೆ ಮಾಡಿದರು.
ಕೊಹ್ಲಿಯ ಸನ್ನೆಯನ್ನು ಗಮನಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತಕ್ಷಣವೇ ಆರ್ಸಿಬಿ ಘೋಷಣೆಗಳನ್ನು ನಿಲ್ಲಿಸಿದ್ದರು. ಇದೀಗ ದೆಹಲಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಆರ್ಸಿಬಿ ಅಭಿಮಾನಿಗಳಿಗೆ ಫ್ರಾಂಚೈಸಿಯ ಬದಲಿಗೆ ಟೀಮ್ ಇಂಡಿಯಾವನ್ನು ಹುರಿದುಂಬಿಸುವಂತೆ ತಿಳಿಸಿ ಎಲ್ಲರ ಮನಗೆದ್ದಿದ್ದಾರೆ.