2026ರ ಮಹಿಳಾ ಟಿ20 ಏಷ್ಯಾಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಥೈಲ್ಯಾಂಡ್ ವಿರುದ್ಧ 94 ರನ್‌ಗಳ ಬೃಹತ್ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿದರೆ, ಗುರಿ ಬೆನ್ನಟ್ಟಿದ ಥೈಲ್ಯಾಂಡ್ ಕೇವಲ 65 ರನ್‌ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಅನುಭವಿಸಿತು.
ಶಫಾಲಿ ವರ್ಮಾ ಅಬ್ಬರ, ಮಧ್ಯಮ ಕ್ರಮಾಂಕದ ವೈಫಲ್ಯ
ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಮೂರನೇ ಓವರ್‌ನಲ್ಲೇ ಸ್ಮೃತಿ ಮಂಧಾನ (ರನೌಟ್) ರೂಪದಲ್ಲಿ ಆಘಾತ ಎದುರಾಯಿತು. ಆದರೆ ಸ್ಫೋಟಕ ಆಟಗಾರ್ತಿ ಶಫಾಲಿ ವರ್ಮಾ ಜವಾಬ್ದಾರಿಯುತ ಆಟ ಪ್ರದರ್ಶಿಸಿ ಕೇವಲ 36 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 8 ಬೌಂಡರಿ ನೆರವಿನಿಂದ 64 ರನ್ ಸಿಡಿಸಿದರು. ಇವರಿಗೆ ಪ್ರತಿಕಾ ರಾವಲ್ (22 ರನ್, 18 ಎಸೆತ) ಉತ್ತಮ ಸಾಥ್ ನೀಡಿದರು.
ಉತ್ತಮ ಆರಂಭದ ಹೊರತಾಗಿಯೂ ಭಾರತದ ಮಧ್ಯಮ ಕ್ರಮಾಂಕ ತೀವ್ರ ವೈಫಲ್ಯ ಅನುಭವಿಸಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ (5), ಭಾರತಿ ಫುಲ್ಮಾಲಿ (13), ರಿಚಾ ಘೋಷ್ (0) ಮತ್ತು ದೀಪ್ತಿ ಶರ್ಮಾ (5) ಬೇಗನೆ ಪೆವಿಲಿಯನ್ ಸೇರಿದರು. ಪ್ರೇಮಾ ರಾವತ್ (6) ಹಾಗೂ ನಂದನಿ ಶರ್ಮಾ (1) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಂತಿಮ ಓವರ್‌ಗಳಲ್ಲಿ ಕ್ರಾಂತಿ ಗೌಡ್ ಕೇವಲ 8 ಎಸೆತಗಳಲ್ಲಿ ಅಜೇಯ 15 ರನ್ ಸಿಡಿಸುವ ಮೂಲಕ ತಂಡವನ್ನು 150ರ ಗಡಿ ದಾಟಿಸಿದರು. ಥೈಲ್ಯಾಂಡ್ ಪರ ಸುಲೀಪೋರ್ನ್ ಲಾವೋಮಿ 4 ಓವರ್‌ಗಳಲ್ಲಿ 26 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದು ಮಿಂಚಿದರು.
ಭಾರತದ ಬೌಲಿಂಗ್ ದಾಳಿಗೆ ನಲುಗಿದ ಥೈಲ್ಯಾಂಡ್
160 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಅನಾನುಭವಿ ಥೈಲ್ಯಾಂಡ್, ಭಾರತದ ಶಿಸ್ತುಬದ್ಧ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ಸಂಪೂರ್ಣ ವಿಫಲವಾಯಿತು. ಏಕಾಂಗಿ ಹೋರಾಟ ನಡೆಸಿದ ನನ್ನಪತ್ ಕೊಂಚರೋಯೆಂಕೈ (41 ರನ್) ಅವರನ್ನು ಹೊರತುಪಡಿಸಿ, ಬೇರಾವ ಆಟಗಾರ್ತಿಯರು ಒಂದಂಕಿ ಮೊತ್ತ ದಾಟಲಿಲ್ಲ. ಪರಿಣಾಮವಾಗಿ, ಕೇವಲ 16.1 ಓವರ್‌ಗಳಲ್ಲಿ 65 ರನ್‌ಗಳಿಗೆ ಸರ್ವಪತನ ಕಂಡ ಥೈಲ್ಯಾಂಡ್ ಶರಣಾಯಿತು. ಭಾರತದ ಪರ ಮಾರಕ ಬೌಲಿಂಗ್ ದಾಳಿ ಸಂಘಟಿಸಿದ ದೀಪ್ತಿ ಶರ್ಮಾ ಹಾಗೂ ನಂದನಿ ಶರ್ಮಾ ತಲಾ 3 ವಿಕೆಟ್ ಕಬಳಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು.