Women T-20 Worlcup 2026: ಈ ಬಾರಿ ಚೊಚ್ಚಲ ಕಪ್ ಗೆಲ್ಲುತ್ತಾ ಭಾರತ? ಇಲ್ಲಿದೆ ಟೂರ್ನಿಯ ಎ ಟು ಝೆಡ್ ಮಾಹಿತಿ

ಸಮಗ್ರ ಸುದ್ದಿ ಜೂನ್ 12: ​10ನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್ (Women’s T20 World Cup 2026) ಕ್ರಿಕೆಟ್ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಜೂನ್ 12 ರಿಂದ ಜುಲೈ 5 ರವರೆಗೆ ಈ ಪ್ರತಿಷ್ಠಿತ ಟೂರ್ನಿ ನಡೆಯಲಿದೆ. ಬರೋಬ್ಬರಿ 24 ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ 12 ಬಲಿಷ್ಠ ತಂಡಗಳು ಕಣಕ್ಕಿಳಿಯಲಿದ್ದು, ಒಟ್ಟು 33 ರೋಚಕ ಪಂದ್ಯಗಳು ಅಭಿಮಾನಿಗಳನ್ನು ರಂಜಿಸಲಿವೆ.

​ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡವು ಜೂನ್ 14 ರಂದು ತನ್ನ ಮೊದಲ ಪಂದ್ಯವನ್ನಾಡುವ ಮೂಲಕ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.

83 ಕೋಟಿ ರೂ. ಬೃಹತ್ ಬಹುಮಾನ!

ಈ ಬಾರಿಯ ವಿಶ್ವಕಪ್‌ನ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಬಹುಮಾನದ ಮೊತ್ತ. ಐಸಿಸಿ ಈ ಟೂರ್ನಿಯ ಒಟ್ಟು ಬಹುಮಾನದ ಮೊತ್ತವನ್ನು ಬರೋಬ್ಬರಿ 83 ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಿದೆ. ಟೂರ್ನಿಯ ಇತಿಹಾಸವನ್ನು ಗಮನಿಸುವುದಾದರೆ, ಆಸ್ಟ್ರೇಲಿಯಾ ಅತಿ ಹೆಚ್ಚು ಅಂದರೆ 6 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇಂಗ್ಲೆಂಡ್ 3 ಬಾರಿ ಟ್ರೋಫಿ ಗೆದ್ದಿದೆ. ಭಾರತ ತಂಡವು ಒಮ್ಮೆ ಫೈನಲ್ ತಲುಪಿದ್ದರೂ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದ್ದು, ಈ ಬಾರಿ ಚೊಚ್ಚಲ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.

ಪಂದ್ಯಗಳು ಎಷ್ಟು ಗಂಟೆಗೆ ಆರಂಭ?

​ಇಂಗ್ಲೆಂಡ್ ಮತ್ತು ಭಾರತದ ಕಾಲಮಾನದ ನಡುವೆ ಸುಮಾರು 4.30 ಗಂಟೆಗಳ ವ್ಯತ್ಯಾಸವಿದೆ. ಇತರ ದೇಶಗಳ ಕೆಲವು ಲೀಗ್ ಪಂದ್ಯಗಳು ಇಂಗ್ಲೆಂಡ್ ಕಾಲಮಾನ ಸಂಜೆ 6:30ಕ್ಕೆ ಆರಂಭವಾಗಲಿವೆ. ಅಂದರೆ, ಭಾರತೀಯ ಕಾಲಮಾನದ ಪ್ರಕಾರ ಈ ಪಂದ್ಯಗಳು ರಾತ್ರಿ 11:00 ಗಂಟೆಗೆ ಪ್ರಸಾರವಾಗಲಿವೆ. ಹೀಗಾಗಿ ಈ ಪಂದ್ಯಗಳನ್ನು ವೀಕ್ಷಿಸಲು ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳು ಕೊಂಚ ನಿದ್ದೆಗೆಡಬೇಕಾಗುತ್ತದೆ.

ಟೀಂ ಇಂಡಿಯಾ ಪಂದ್ಯಗಳ ಸಮಯವೇನು? (ಅಭಿಮಾನಿಗಳಿಗೆ ಸಿಹಿಸುದ್ದಿ)

​ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತೋಷದ ವಿಚಾರವೆಂದರೆ, ಟೀಂ ಇಂಡಿಯಾದ ಪಂದ್ಯಗಳನ್ನು ನೋಡಲು ರಾತ್ರಿ ನಿದ್ದೆಗೆಡುವ ಅಗತ್ಯವಿಲ್ಲ. ಭಾರತದ ಎಲ್ಲಾ ಪಂದ್ಯಗಳು ಸ್ಥಳೀಯ ಕಾಲಮಾನ ಮಧ್ಯಾಹ್ನ 2:30ಕ್ಕೆ ಶುರುವಾಗಲಿವೆ. ಅಂದರೆ, ಭಾರತೀಯ ಕಾಲಮಾನದ ಪ್ರಕಾರ ಸಂಜೆ 7:00 ಗಂಟೆಗೆ ಪಂದ್ಯಗಳು ನೇರಪ್ರಸಾರವಾಗಲಿವೆ. ಅಷ್ಟೇ ಅಲ್ಲದೆ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಕೂಡ ಭಾರತೀಯ ಕಾಲಮಾನ ಸಂಜೆ 7:00 ಗಂಟೆಗೇ ಆರಂಭವಾಗಲಿವೆ.

ಟೀಂ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ:

  • ಜೂನ್ 14, 2026: ಭಾರತ vs ಪಾಕಿಸ್ತಾನ (ಸ್ಥಳ: ಎಡ್ಜ್‌ಬಾಸ್ಟನ್)
  • ಜೂನ್ 17, 2026: ಭಾರತ vs ನೆದರ್‌ಲ್ಯಾಂಡ್ಸ್ (ಸ್ಥಳ: ಹೆಡಿಂಗ್ಲಿ)
  • ಜೂನ್ 21, 2026: ಭಾರತ vs ದಕ್ಷಿಣ ಆಫ್ರಿಕಾ (ಸ್ಥಳ: ಓಲ್ಡ್ ಟ್ರಾಫರ್ಡ್)
  • ಜೂನ್ 25, 2026: ಭಾರತ vs ಬಾಂಗ್ಲಾದೇಶ (ಸ್ಥಳ: ಓಲ್ಡ್ ಟ್ರಾಫರ್ಡ್)

Leave a Reply

Your email address will not be published. Required fields are marked *