‘ಚಾರಣ ಸಂಭ್ರಮ’ ಮೂಲಕ ವಿದ್ಯಾರ್ಥಿಗಳಿಗೆ ನಿಸರ್ಗ ಪಾಠ ಹೇಳಿದ ಯೋಗೀಶ್ ಸಹ್ಯಾದ್ರಿ.

ಜೋಗಿಮಟ್ಟಿ ಅರಣ್ಯದಲ್ಲಿ ವಿದ್ಯಾರ್ಥಿಗಳಿಗೆ ಚಾರಣ ಸಂಭ್ರಮ, ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ ಆಯೋಜನೆ : ಯೋಗೀಶ್ ಸಹ್ಯಾದ್ರಿ

ಚಿತ್ರದುರ್ಗ : ಪ್ರಪಂಚದ ಅನೇಕ ಅತ್ಯಂತ ಅದ್ಭುತ ಅನ್ವೇಷಣೆಗಳು ಅರಣ್ಯ ಹಾಗೂ ಪ್ರಕೃತಿಯ ನಿಶ್ಯಬ್ದತೆಯಿಂದ ಸ್ಪೂರ್ತಿ ಪಡೆದಿವೆ. ಮನುಷ್ಯ ಪರಿಸರ – ಪ್ರಕೃತಿಯ ಜೊತೆಗೆ ಅವಿನಾಭಾವ ಸಂಬಂಧವನ್ನು ಕಾಪಾಡಿಕೊಳ್ಳುವ ಅವಶ್ಯಕತೆಯಿದೆ ಎಂದು ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯ ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.

ನಗರದ ಪ್ರತಿಷ್ಠಿತ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ ವತಿಯಿಂದ ಇಂದು ಸೋಮವಾರ ಬೆಳಗ್ಗೆ ವಿದ್ಯಾರ್ಥಿಗಳಿಗೆ ‘ಚಾರಣ ಸಂಭ್ರಮ’ ಎಂಬ ಶೀರ್ಷಿಕೆಯಡಿ ಸುಮಾರು 80 ವಿದ್ಯಾರ್ಥಿಗಳಿಗೆ ಜೋಗಿಮಟ್ಟಿ ಅರಣ್ಯದಲ್ಲಿ ಚಾರಣ ಆಯೋಜನೆ ಮಾಡಲಾಗಿತ್ತು. ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅವರು ಚಾರಣದ ನೇತೃತ್ವ ವಹಿಸಿದ್ದು, ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯ ಪ್ರದೇಶ ಕರ್ನಾಟಕದ ಊಟಿ ಎಂಬುದಾಗಿ ಹೆಸರುವಾಸಿಯಾಗಿದೆ. ವಿದ್ಯಾರ್ಥಿಗಳ ಕಲಿಕೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಮಾತ್ರವಲ್ಲದೆ ಪ್ರಕೃತಿಯ ನಡುವೆ ಅಪಾರವಾದ ವಿಷಯ ಸಂಪತ್ತನ್ನು ಗಳಿಸಿಕೊಳ್ಳಲು ಸಾಧ್ಯವಿದೆ ಎಂದು ಮಕ್ಕಳಿಗೆ ತಿಳಿಸಿದರು.

ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಆಯೋಜನೆ ಮಾಡಲಾಗಿದ್ದ ಸ್ಪೋಕನ್ ಇಂಗ್ಲಿಷ್ ಬೇಸಿಗೆ ಶಿಬಿರವು ಮುಕ್ತಾಯವಾದ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ಆಸಕ್ತ ಪೋಷಕರು ಚಾರಣದಲ್ಲಿ ಭಾಗವಹಿಸಿದ್ದರು. ವಿವಿಧ ತರಗತಿಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ಚಾರಣದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಲೋಕೇಶ್ ಅವರು ಹಲವು ಪ್ರಾಣಿ ಪಕ್ಷಿಗಳ ಬಗ್ಗೆ ಮಾಹಿತಿ ನೀಡಿದರು.

ನಿಸರ್ಗ ಹಾಗೂ ಮಾನವನ ಸೌಹಾರ್ದತೆ ಕುರಿತು ಮಕ್ಕಳಿಗೆ ತಿಳಿಸಿದರು. ಬಿಜೆಪಿ ಮುಖಂಡರಾದ ಶಂಕರಮೂರ್ತಿ (ಪಾಪು) ಭಾಗವಹಿಸಿ ಮಾತನಾಡಿ, ಇಂದಿನ ಮಕ್ಕಳಿಗೆ ಪ್ರಕೃತಿ ಪ್ರೇಮದ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ಪುಸ್ತಕಗಳ ಅಭ್ಯಾಸದ ಜೊತೆ ಜೊತೆಗೆ ಮಕ್ಕಳು ನಿಸರ್ಗ ಪ್ರೇಮವನ್ನು ಬೆಳೆಸಿಕೊಳ್ಳಬೇಕಿದೆ ಹಾಗೂ ಈ ನಿಟ್ಟಿನಲ್ಲಿ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯ ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿ ಅವರ ಕಾರ್ಯ ಶ್ಲಾಘನೀಯವಾದುದು ಎಂದು ಅಭಿಪ್ರಾಯಪಟ್ಟರು.

ಚಾರಣ ಹಾಗೂ ಸ್ಪೋಕನ್ ಇಂಗ್ಲಿಷ್ ಬೇಸಿಗೆ ಶಿಬಿರವನ್ನು ಕುರಿತು ಟ್ರಸ್ಟ್ ಕಾರ್ಯದರ್ಶಿ ಚೈತ್ರ. ಸಿ ಹಾಗೂ ಪೋಷಕರಾದ ಮಂಜುನಾಥ್, ಅಶೋಕ್ ಮಾತನಾಡಿದರು. ವಿದ್ಯಾರ್ಥಿಗಳು ಹಾಗೂ ಪೋಷಕರಾದ ಯಶೋಧ, ಶಾರದ, ನಾಗರತ್ನ ಹಾಗೂ ಕಛೇರಿ ಸಿಬ್ಬಂದಿ ವಿನೋದ. ಸಿ ಹಾಜರಿದ್ದರು. ಚಿತ್ರದುರ್ಗದ ಹೆಮ್ಮೆಯ ಜೋಗಿಮಟ್ಟಿ ಅರಣ್ಯದ ಸೌಂದರ್ಯವನ್ನು ಸವಿದು ಸಂತೋಷ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *