ಬೇಸಿಗೆಯಲ್ಲಿ ನಿಮ್ಮ ತೂಕಕ್ಕೆ ತಕ್ಕಂತೆ ಕುಡಿಯಬೇಕಂತೆ ನೀರು; ಹಾಗಾದ್ರೆ ನೀವೆಷ್ಟು ಕುಡಿಯಬೇಕು ಗೊತ್ತಾ?

ಆರೋಗ್ಯವಾಗಿರಲು ಹೆಚ್ಚಾಗಿ ನೀರು ಕುಡಿಯಬೇಕೆಂದು ಹೇಳಲಾಗುತ್ತದೆ. ಆದರೆ ಪ್ರತಿಯೊಬ್ಬ ವ್ಯಕ್ತಿಗೂ ಅವರವರ ದೇಹದ ತೂಕಕ್ಕೆ ಅನುಗುಣವಾಗಿ ನೀರು ಬೇಕಾಗುತ್ತದೆ. ಇದಕ್ಕಾಗಿ ಮೊದಲು ಮಾಡಬೇಕಾಗಿರುವುದು ನಿಮ್ಮ ತೂಕವನ್ನು ಅಳೆಯುವುದು. ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ವೇಗಗೊಳ್ಳುತ್ತದೆ ಮತ್ತು ಹಸಿವು ನಿಯಂತ್ರಣದಲ್ಲಿರುತ್ತದೆ.

ರೇವಾ ಸೂಪರ್ ಸ್ಪೆಷಾಲಿಟಿ ಸೂಪರಿಂಟೆಂಡೆಂಟ್ ಡಾ. ಅಕ್ಷಯ್ ಶ್ರೀವಾಸ್ತವ ಅವರು, ಒಬ್ಬರ ದೇಹದ ತೂಕಕ್ಕೆ ಅನುಗುಣವಾಗಿ ನೀರು ಕುಡಿಯಬೇಕು ಮತ್ತು ಇದಕ್ಕಾಗಿ ಮೊದಲು ಅವರು ತಮ್ಮ ತೂಕವನ್ನು ತಿಳಿದುಕೊಳ್ಳಬೇಕು ಎಂದು ಹೇಳುತ್ತಾರೆ. ದೇಹದ ತೂಕದ ಆಧಾರದ ಮೇಲೆ ನೀರಿನ ಅವಶ್ಯಕತೆಗಳನ್ನು ಲೆಕ್ಕಾಚಾರ ಮಾಡಲು ಒಂದು ಸರಳ ಸೂತ್ರವಿದೆ. ಇದರ ಬಗ್ಗೆ ನಾವಿಂದು ತಿಳಿದುಕೊಳ್ಳೋಣ ಬನ್ನಿ.

45 ಕೆಜಿ ತೂಕವಿರುವ ವ್ಯಕ್ತಿ ಮತ್ತು 85 ಕೆಜಿ ತೂಕವಿರುವ ವ್ಯಕ್ತಿ ಇಬ್ಬರೂ ಪ್ರತಿದಿನ ಒಂದೇ ಪ್ರಮಾಣದಷ್ಟು ನೀರನ್ನು ಕುಡಿಯಬಹುದೇ? ನಿಮ್ಮ ನೀರಿನ ಅಗತ್ಯವನ್ನು ತೂಕದೊಂದಿಗೆ ಲೆಕ್ಕ ಹಾಕುವ ಮೂಲಕ, ನೀವು ಪ್ರತಿದಿನ ಸರಿಯಾದ ಪ್ರಮಾಣದಷ್ಟು ನೀರನ್ನು ಕುಡಿಯಬಹುದು ಮತ್ತು ಇದು ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ.

ದೇಹಕ್ಕೆ ನೀರು ಕುಡಿಯುವುದು ಬಹಳ ಮುಖ್ಯ. ಚೆನ್ನಾಗಿ ನೀರು ಕುಡಿಯದಿದ್ದರೆ ಹಲವು ಕಾಯಿಲೆಗಳು ಬರಬಹುದು. ಒಬ್ಬ ವ್ಯಕ್ತಿಯು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂಬುದರ ಬಗ್ಗೆ ಜನ ಯಾವಾಗಲೂ ಗೊಂದಲ ಹೊಂದಿರುತ್ತಾರೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ದಿನಕ್ಕೆ 2 ಲೀಟರ್ ನೀರು ಕುಡಿಯಬೇಕೆಂದು ಸೂಚಿಸಲಾಗುತ್ತದೆ.

ನಿಮ್ಮ ತೂಕವನ್ನು ಕಿಲೋಗ್ರಾಂಗಳಲ್ಲಿ ಪರಿಶೀಲಿಸಿದ ನಂತರ, ಆ ಸಂಖ್ಯೆಯನ್ನು 30 ರಿಂದ ಭಾಗಿಸಿ. ನಿಮ್ಮ ತೂಕವನ್ನು 30 ರಿಂದ ಭಾಗಿಸಿದ ನಂತರ ನೀವು ಪಡೆಯುವ ಸಂಖ್ಯೆಯಷ್ಟು ಲೀಟರ್‌ ನೀರು ಕುಡಿಯಿರಿ. ಅಂದರೆ, ಈ ಸೂತ್ರವನ್ನು ಬಳಸಿದ ನಂತರ ಅಂತಿಮವಾಗಿ ನಿಮ್ಮ ದೇಹದ ತೂಕವನ್ನು ಆಧರಿಸಿ, ನೀವು ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯಬೇಕು ಎಂದು ನಿಮಗೆ ತಿಳಿಯುತ್ತದೆ.

ಉದಾಹರಣೆಗೆ, ತೂಕ 60 ಕೆಜಿ ಇದ್ದರೆ, ಅದನ್ನು 30 ರಿಂದ ಭಾಗಿಸಿದಾಗ ಉತ್ತರ 2 ಸಿಗುತ್ತದೆ. ಅಂದರೆ, 60 ಕೆಜಿ ತೂಕವಿರುವ ವ್ಯಕ್ತಿಯು ಪ್ರತಿದಿನ 2 ಲೀಟರ್ ನೀರು ಕುಡಿಯಬೇಕು. ನೀವು 50 ಕೆಜಿ ತೂಕವಿದ್ದರೆ, ನೀವು 2.6 ಲೀಟರ್ (2 ಲೀಟರ್ ಮತ್ತು 600 ಮಿಲಿಲೀಟರ್) ನೀರನ್ನು ಕುಡಿಯಬೇಕು.

ಸಾಕಷ್ಟು ನೀರು ಕುಡಿಯುವುದರಿಂದ ತೂಕ ಇಳಿಕೆಯೂ ಆಗುತ್ತದೆ ಎಂದು ಡಾ. ಅಕ್ಷಯ್ ಶ್ರೀವಾಸ್ತವ ಹೇಳುತ್ತಾರೆ. ಹೆಚ್ಚಾಗಿ ನೀರು ಕುಡಿಯುವುದರಿಂದ ತೂಕ ಹೆಚ್ಚಾಗುವುದಿಲ್ಲ. ನೀರಿನಲ್ಲಿ ಯಾವುದೇ ಕ್ಯಾಲೊರಿಗಳಿರುವುದಿಲ್ಲ. ಇದರರ್ಥ ನೀವು ಜಾಸ್ತಿ ನೀರು ಕುಡಿದರೆ, ನೀವು ಹೆಚ್ಚು ಕ್ಯಾಲೋರಿಗಳನ್ನು ಸೇವಿಸುವುದನ್ನು ತಪ್ಪಿಸಬಹುದು, ಇದು ತೂಕ ಹೆಚ್ಚಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.

ದಿನವಿಡೀ ನಿಮ್ಮ ತೂಕಕ್ಕೆ ತಕ್ಕಂತೆ ನೀರು ಕುಡಿಯಬೇಕು ಎಂಬುವುದಷ್ಟೇ ಅಲ್ಲದೇ ಮೊತ್ತೊಂದು ಪ್ರಮುಖ ವಿಚಾರವನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇನಪ್ಪಾ ಅಂದರೆ ನೀವು ವ್ಯಾಯಾಮ ಮಾಡುತ್ತಿದ್ದರೆ, ಪ್ರತಿ ಅರ್ಧಗಂಟೆಗೆ ಕನಿಷ್ಠ ಒಂದು ಲೋಟ ನೀರು ಕುಡಿಯಿರಿ. ಇದಕ್ಕೆ ಕಾರಣವೆಂದರೆ ವ್ಯಾಯಾಮವು ಬೆವರುವಿಕೆಗೆ ಕಾರಣವಾಗುತ್ತದೆ ಮತ್ತು ದೇಹದಲ್ಲಿನ ನೀರಿನ ಅಂಶವನ್ನು ಕಡಿಮೆ ಮಾಡುತ್ತದೆ. ಅಲ್ಲದೇ, ಊಟಕ್ಕೂ ಮೊದಲು ಅರ್ಧ ಲೀಟರ್ ನೀರು ಕುಡಿಯುವುದರಿಂದ ಸಿಗುವ ಪ್ರಯೋಜನವೆಂದರೆ ನಿಮ್ಮ ಹಸಿವು ಕಡಿಮೆಯಾಗುತ್ತದೆ.

ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯುವುದನ್ನು ಮರೆಯಬೇಡಿ. ದಿನವಿಡೀ ಸ್ವಲ್ಪ ಸ್ವಲ್ಪವೇ ನೀರು ಕುಡಿಯುತ್ತಾ ಇರಿ. ನಿಮಗೆ ಬರೀ ನೀರು ಕುಡಿಯಲು ಇಷ್ಟವಿಲ್ಲದಿದ್ದರೆ, ಸುವಾಸನೆಗಾಗಿ ಅದಕ್ಕೆ ಪುದೀನ, ನಿಂಬೆ ಅಥವಾ ಸಿಟ್ರಸ್ ಹಣ್ಣುಗಳನ್ನು ಸೇರಿಸಬಹುದು.

Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. Samagrasuddiಗೂ ಇದಕ್ಕೂ ಸಂಬಂಧವಿಲ್ಲ ಮತ್ತು Samagrasuddi ಇದಕ್ಕೆ ಜವಾಬ್ದಾರಿಯಲ್ಲ

Source : News18 Kannada

Leave a Reply

Your email address will not be published. Required fields are marked *