ಚಿತ್ರದುರ್ಗ| ರಾಷ್ಟ್ರೋತ್ಥಾನದ ಮಾದರಿ CBSE ಶಾಲೆ: ಜಾನುಕೊಂಡದಲ್ಲಿ ನೂತನ ಕಟ್ಟಡಕ್ಕೆ ಭೂಮಿಪೂಜೆ.

ಚಿತ್ರದುರ್ಗ ಸೆ. 17

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಸಮಾಜಕ್ಕೆ ಮಾದರಿ ಶೈಕ್ಷಣಿಕ ಸಂಸ್ಥೆಗಳನ್ನು ನೀಡುವುದು ಮತ್ತು ಚಾರಿತ್ರ್ಯವಂತ, ಸಾಮಾಜಿಕ ಬದ್ಧತೆಯುಳ್ಳ ಹಾಗೂ ರಾಷ್ಟ್ರಪ್ರೇಮ ಹೊಂದಿರುವ ಶ್ರೇಷ್ಠ ನಾಗರಿಕರನ್ನು ನಿರ್ಮಿಸುವುದು ರಾಷ್ಟ್ರೋತ್ಥಾನ ಪರಿಷತ್‍ನ ಮೂಲ ಆಶಯವಾಗಿದೆ ಎಂದು ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ನಾ. ದಿನೇಶ್ ಹೆಗ್ಡೆ ತಿಳಿಸಿದರು.

ರಾಷ್ಟ್ರೋತ್ಥಾನ ಪರಿಷತ್, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಚಿತ್ರದುರ್ಗ ಇದರವತಿಯಿಂದ ಸಿಬಿಎಸಿ ಪಠ್ಯಕ್ರಮ ದಲ್ಲಿ ನೂತನವಾಗಿ ಕಟ್ಟಡವನ್ನು ನಿರ್ಮಾಣ ಮಾಡಲು ಗುರುವಾರ ಶಿವಮೊಗ್ಗ ರಸ್ತೆಯಲ್ಲಿನ ಜಾನುಕೊಂಡದ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಭೂಮಿ ಪೂಜಾ ಕಾರ್ಯಕ್ರಮ ನೇರವೇರಿಸಿ ಮಾತನಾಡಿದ ಅವರು, 1965ರಲ್ಲಿ ಪ್ರಾರಂಭವಾದ ರಾಷ್ಟ್ರೋತ್ಥಾನ ಪರಿಷತ್ ಗ್ರಾಮೀಣ ಭಾಗದ ಬಡ ಹಾಗೂ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಜಿಇಇ ಮತ್ತು ನೀಟ್ ಪರೀಕ್ಷೆಗಳಿಗೆ ಉಚಿತ ವಸತಿ ಹಾಗೂ ತರಬೇತಿ ನೀಡುತ್ತಿದೆ. ‘ತಪಸ್ಸು’ ಮತ್ತು ‘ಸಾಧನಾ’ ಯೋಜನೆಗಳ ಮೂಲಕ ಉಚಿತ ಶಿಕ್ಷಣ ಪಡೆದ 145ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಸ್ತುತ ಐಐಟಿ ಎನ್‍ಐಟಿ ಹಾಗೂ 156ಕ್ಕೂ ಹೆಚ್ಚು ಹೆಣ್ಣುಮಕ್ಕಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ರಾಜ್ಯದಾದ್ಯಂತ ರಾಷ್ಟ್ರೋತ್ಥಾನದ 20 ಸಿಬಿಎಸ್‍ಇ ಶಾಲೆಗಳಿದ್ದು, ಸುಮಾರು 22,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮುಂಬರುವ 5 ವರ್ಷಗಳಲ್ಲಿ ರಾಜ್ಯದ 20 ಜಿಲ್ಲೆಗಳಲ್ಲಿ ಒಟ್ಟು 30 ಶಾಲೆಗಳನ್ನು ಪ್ರಾರಂಭಿಸಿ, 30,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಲುಪುವ ಗುರಿ ಹೊಂದಲಾಗಿದೆ. ರಾಷ್ಟ್ರೋತ್ಥಾನ ಪರಿಷತ್ ಕಳೆದ 30-35 ವರ್ಷಗಳಿಂದ ಚಿತ್ರದುರ್ಗದಲ್ಲಿ ಜ್ಞಾನಭಾರತಿ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದು, ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ಹಾಗೂ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ಮಕ್ಕಳನ್ನು ಸಜ್ಜುಗೊಳಿಸಲು ಸಿಬಿಎಸ್‍ಇ ಮಾದರಿ ಶಾಲೆಯ ಅಗತ್ಯವಿದೆ ಎಂದು ಅವರು. ಸಮಾಜಕ್ಕೆ ಮಾದರಿ ಶೈಕ್ಷಣಿಕ ಸಂಸ್ಥೆಗಳನ್ನು ನೀಡುವುದು ಮತ್ತು ಚಾರಿತ್ರ್ಯವಂತ, ಸಾಮಾಜಿಕ ಬದ್ಧತೆಯುಳ್ಳ ಹಾಗೂ ರಾಷ್ಟ್ರಪ್ರೇಮ ಹೊಂದಿರುವ ಶ್ರೇಷ್ಠ ನಾಗರಿಕರನ್ನು ನಿರ್ಮಿಸುವುದು ಪರಿಷತ್‍ನ ಮೂಲ ಆಶಯವಾಗಿದೆ ಎಂದು ಅವರು ವಿವರಿಸಿದರು.

ಸಮಾಜಮುಖಿ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ರಾಷ್ಟ್ರೋತ್ಥಾನ ಪರಿಷತ್‍ನಿಂದ ಮಾದರಿ ಸಿಬಿಎಸ್‍ಇ ಶಾಲೆಯನ್ನು ಚಿತ್ರದುರ್ಗದಲ್ಲಿ ಪ್ರಾರಂಭಿಸಲಾಗುತ್ತಿದ್ದು, ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಚಿತ್ರದುರ್ಗದಲ್ಲಿ ಸುಮಾರು 3 ಎಕರೆ ಜಾಗದಲ್ಲಿ ಶಾಲಾ ಕಟ್ಟಡ ನಿರ್ಮಾಣವಾಗುತ್ತಿದ್ದು, ಮೊದಲ ಹಂತದಲ್ಲಿ 45,000 ಚದರ ಅಡಿ ವಿಸ್ತೀರ್ಣದಲ್ಲಿ 24 ತರಗತಿ ಕೊಠಡಿಗಳು, ಪ್ರಯೋಗಾಲಯಗಳು ಹಾಗೂ ಮೈದಾನ ಒಳಗೊಂಡಂತೆ ಕಟ್ಟಡ ನಿರ್ಮಿಸಲಾಗುವುದು. ಈ ಶಾಲೆಯು 750ರಿಂದ 1,000 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಬೆಂಗಳೂರಿನ ಭಗೀರಥ ಕನ್‍ಸ್ಟ್ರಕ್ಷನ್ ಸಂಸ್ಥೆಯ ಶ್ರೀ ಅತುಲ್ ಗೋಪಿನಾಥ್ ಅವರಿಗೆ ಕಟ್ಟಡ ನಿರ್ಮಾಣದ ಗುತ್ತಿಗೆ ನೀಡಲಾಗಿದ್ದು, ಮುಂದಿನ 6-7 ತಿಂಗಳಲ್ಲಿ ಅಂದರೆ 2027-28ನೇ ಶೈಕ್ಷಣಿಕ ಸಾಲಿಗೆ ಶಾಲೆಯನ್ನು ಪ್ರಾರಂಭಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

ಶಿಕ್ಷಣದಲ್ಲಿ ಭಾರತೀಯತೆ ಮತ್ತು ಸಂಸ್ಕಾರವನ್ನು ಮೈಗೂಡಿಸಿಕೊಂಡು ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದಾಗಿ ತಿಳಿಸಿ ಗುಣಮಟ್ಟದ ಶಿಕ್ಷಣ, ಸಾಮಾಜಿಕ ಜವಾಬ್ದಾರಿ ಹಾಗೂ ರಾಷ್ಟ್ರೀಯ ಚಿಂತನೆಗಳನ್ನು ಒಳಗೊಂಡ ಮಾದರಿ ಸಿಬಿಎಸ್‍ಇ ಶಾಲೆಯನ್ನು ನಿಯಮಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ನಾ. ದಿನೇಶ್ ಹೆಗ್ಡೆ ತಿಳಿಸಿದರು.

ಮಾಜಿ ಮುಖ್ಯಮಂತ್ರಿಗಳು ಸಂಸದರಾದ ಗೋವಿಂದ ಕಾರಜೋಳ ಮಾತನಾಡಿ ಬಡವರು ಹಾಗೂ ಶ್ರೀಮಂತರ ಮಕ್ಕಳಿಗೆ ಸಮಾನ ಶಿಕ್ಷಣ ತಲುಪಿಸುವ ಉದ್ದೇಶದಿಂದ ದೇಶಾದ್ಯಂತ ಜಾರಿಗೆ ತರಲಾಗಿದ್ದ ‘ರಾಷ್ಟ್ರೀಯ ಶಿಕ್ಷಣನೀತಿ’ಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಎನ್‍ಇಪಿಯನ್ನು ಜಾರಿಗೆ ತಂದಿದ್ದರು. ಆದರೆ 2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಇದನ್ನು ಕೈಬಿಟ್ಟು ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುವುದಾಗಿ ಘೋಷಿಸಿತು. ಇದರಿಂದಾಗಿ ಕಳೆದ ಎರಡು ವರ್ಷಗಳಿಂದ ಎನ್‍ಇಪಿ ಅಡಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಇದೀಗ ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯು ತ್ರಿಭಾಷಾ ಸೂತ್ರವನ್ನು ಒಳಗೊಂಡಿದ್ದು, ದೇಶಾದ್ಯಂತ ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ. ತಾಂತ್ರಿಕ, ವೈದ್ಯಕೀಯ ಹಾಗೂ ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನಡೆಯಲು ಇಂಗ್ಲಿಷ್ ಮತ್ತು ಕೇಂದ್ರ ಸರ್ಕಾರದ ಹಂತದಲ್ಲಿ ಸೇವೆ ಸಲ್ಲಿಸಲು ಹಿಂದಿ ಭಾಷೆಯ ಜ್ಞಾನ ಅಗತ್ಯವಾಗಿದೆ. ಬಡವರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ರಾಷ್ಟ್ರೋತ್ಥಾನ ಮತ್ತು ಆರ್‍ಎಸ್‍ಎಸ್‍ನಂತಹ ಸಂಸ್ಥೆಗಳು ಉಚಿತ ಅಥವಾ ಕೈಗೆಟುಕುವ ವೆಚ್ಚದಲ್ಲಿ ಸಿಬಿಎಸ್‍ಇ ಶಿಕ್ಷಣ ನೀಡುತ್ತಿವೆ. ಈ ಮೂಲಕ ನೂರಾರು ವಿದ್ಯಾರ್ಥಿಗಳು ಐಐಟಿ, ಏಮ್ಸ್‍ನಂತಹ ಪ್ರತಿಷ್ಠಿತ ಸಂಸ್ಥೆಗಳಿಗೆ ಆಯ್ಕೆಯಾಗುತ್ತಿದ್ದಾರೆ ಎಂದು ಶ್ಲಾಘಿಸಿದರು.

ರಾಜ್ಯದಲ್ಲಿ ಸೂಕ್ತ ಮೂಲಸೌಕರ್ಯ ಹಾಗೂ ಶಿಕ್ಷಕರಿಲ್ಲದೆ 3,000ಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಶಾಲೆಗಳು ಮುಚ್ಚಲ್ಪಟ್ಟಿವೆ. ಈ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಂಸ್ಥೆಯು ಅಕ್ಷರ ಜ್ಞಾನದೊಂದಿಗೆ ಸಂಸ್ಕೃತಿ ಮತ್ತು ಧರ್ಮದ ದಾನವನ್ನು ಮಾಡುತ್ತಿದೆ. ಪ್ರಸ್ತುತ ಸಂಸ್ಥೆಯಲ್ಲಿ 22,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಬಿಎಸ್‍ಇ ವ್ಯಾಸಂಗ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿಯೊಂದು ತಾಲೂಕಿನಲ್ಲೂ ಇಂತಹ ಸಿಬಿಎಸ್‍ಇ ಶಾಲೆಗಳನ್ನು ಪ್ರಾರಂಭಿಸುವ ಗುರಿ ಹೊಂದಬೇಕು ಎಂದು ಕರೆ ನೀಡಿ ಶಿಕ್ಷಣವು ವ್ಯಾಪಾರೀಕರಣಗೊಳ್ಳುತ್ತಿರುವ ಈ ದಿನಗಳಲ್ಲಿ, ಬಡವರ ಮಕ್ಕಳಿಗೆ ಗುಣಮಟ್ಟದ ಸಿಬಿಎಸ್‍ಇ ಶಿಕ್ಷಣ ಹಾಗೂ ಸಂಸ್ಕಾರ ತಲುಪಿಸುವ ರಾಷ್ಟ್ರೋತ್ಥಾನದಂತಹ ಸಂಸ್ಥೆಗಳ ಕಾರ್ಯಕ್ಕೆ ಇಡೀ ಸಮಾಜ ಕೈಜೋಡಿಸಬೇಕಾಗಿದೆ ಎಂದರು.

ಭೂಮಿ ಪೂಜಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಸ್ವಾಮಿಗಳು ತಮ್ಮ ಆರ್ಶಿವಚನದಲ್ಲಿ ಇಂಧಿನ ದಿನಮಾನದಲ್ಲಿ ಶಿಕ್ಷಣ ವ್ಯವಸ್ಥೆಯು ವ್ಯಾಪಾರೀಕರಣಗೊಳ್ಳುತ್ತಿರುವ ಪ್ರಸ್ತುತ ದಿನಗಳಲ್ಲಿ ಬಡ ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ರಾಷ್ಟ್ರೋತ್ಥಾನ ಪರಿಷತ್ ಮಹತ್ತರ ಪಾತ್ರ ವಹಿಸುತ್ತಿದೆ. ರಾಜ್ಯದಲ್ಲಿ ಬಡ ಮಕ್ಕಳ ಉನ್ನತಿಗೆ ಮತ್ತು ಅವರಿಗೆ ಸತ್ಸಂಸ್ಕಾರ ನೀಡಲು ರಾಷ್ಟ್ರೋತ್ಥಾನ ಪರಿಷತ್ ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ಇದಕ್ಕೆ ಚಿತ್ರದುರ್ಗ ಜಿಲ್ಲೆಯ ಜನತೆ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡಲಿದ್ದಾರೆ ಎಂದರು.

ಬಡ ಕುಟುಂಬಗಳ ಮಕ್ಕಳನ್ನು ಸಂಸ್ಥೆಗೆ ಸೇರಿಸಿ, ಅವರಿಗೆ ಅಗತ್ಯವಿರುವ ಎಲ್ಲಾ ಶೈಕ್ಷಣಿಕ ಹಾಗೂ ಅನುಕೂಲಕರ ಸೌಲಭ್ಯಗಳನ್ನು ರಾಷ್ಟ್ರೋತ್ಥಾನ ಪರಿಷತ್ ಒದಗಿಸಲಿದೆ ಮುಂದಿನ ಶೈಕ್ಷಣಿಕ ವರ್ಷದ ಗುರಿ: ಮುಂಬರುವ ಶೈಕ್ಷಣಿಕ ವರ್ಷದಿಂದ ಶಾಲೆಯು ಕಾರ್ಯಾರಂಭ ಮಾಡಲಿದ್ದು, ಕೇವಲ ಜ್ಞಾನಾರ್ಜನೆಗಷ್ಟೇ ಸೀಮಿತವಾಗದೆ ಉತ್ತಮ ಸತ್ಪ್ರಜೆಗಳನ್ನು ರೂಪಿಸುವ ಗುರಿ ಹೊಂದಲಾಗಿದೆ. ರಾಷ್ಟ್ರೀಯ ಮಟ್ಟದ ನಾಯಕತ್ವ: ಕೇವಲ ಉತ್ತರ ಭಾರತ ಅಥವಾ ಇತರ ರಾಜ್ಯಗಳವರಷ್ಟೇ ಅಲ್ಲದೆ, ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಕೂಡ ಬೆಳೆದು ದೇಶದ ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಮಟ್ಟದ ಆದರ್ಶ ವ್ಯಕ್ತಿಗಳಾಗಿ ಹೊರಹೊಮ್ಮುವಂತೆ ಈ ಸಂಸ್ಥೆಯು ಶಾಲೆಗಳನ್ನು ರೂಪಿಸಲಿ ಎಂದು ಹಾರೈಸಿ ಶಿಕ್ಷಣವು ವ್ಯಾಪಾರವಾಗದೆ, ಸಮಾಜದ ಪ್ರತಿಯೊಬ್ಬ ಬಡ ಮಗುವಿಗೂ ತಲುಪಿ ಅವರನ್ನು ರಾಷ್ಟ್ರಮಟ್ಟದ ಆದರ್ಶ ಪ್ರಜೆಗಳನ್ನಾಗಿ ರೂಪಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ ಹಾಗೂ ತೀರ್ಮಾನವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾದಾರ ಗುರುಪೀಠದ ಮಾದಾರ ಚನ್ನಯ್ಯ ಶ್ರೀಗಳು, ಭೋವಿ ಗುರು ಪೀಠದ ಇಮ್ಮಡಿ ಸಿದ್ದರಾಮ ಶ್ರೀಗಳು, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಮುಖಂಡರಾದ ಅನಿತ್ ಕುಮಾರ್, ಜ್ಞಾನ ಭಾರತಿ ವಿದ್ಯಾ ಮಂದಿರದ ಕಾರ್ಯದರ್ಶಿ ರಾಜೀವ ಲೋಚನ ಸೇರಿದಂತೆ ರಾಷ್ಟ್ರೋತ್ಥಾನ ಪರಿಷತ್ ಪದಾಧಿಕಾರಿ ಗಳು ಭಾಗವಹಿಸಿದ್ದರು. ಅಶೋಕ ಗೂರೂಜಿ ಪ್ರಾರ್ಥಿಸಿದರೆ, ಅಮೃತ್ ಹೀರೇಮಠ್ ಕಾರ್ಯಕ್ರಮ ನಿರೂಪಿಸಿದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *