ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ 12 ವರ್ಷ: ಚಿತ್ರದುರ್ಗದಲ್ಲಿ ಬಿಜೆಪಿ ವತಿಯಿಂದ ವಿಶೇಷ ಪೂಜೆ,ಸಂಭ್ರಮಾಚರಣೆ.

ಚಿತ್ರದುರ್ಗ ಜೂ. 10

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಬುಧವಾರ ಚಿತ್ರದುರ್ಗ ನಗರ ಮಂಡಲವತಿಯಿಂದ ಇಂದು ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನರೇಂದ್ರ ಮೋದಿಜೀಯವರ ಹೆಸರಿನಲ್ಲಿ ವಿಶೇಷ ಪೂಜೆ ಕಾರ್ಯಕ್ರಮವನ್ನು ಚಿತ್ರದುರ್ಗ ನಗರ ಮಂಡಲ ಅಧ್ಯಕ್ಷರಾದ ಲೋಕೇಶ್ ಹೆಚ್ ಎನ್ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವರು ಸತತವಾಗಿ ಅತಿ ಹೆಚ್ಚು ಅವಧಿಗೆ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿ ಎಂಬ ವಿಶಿಷ್ಟ ಗೌರವಕ್ಕೆ ಪಾತ್ರರಾಗಿದ್ದಾರೆ. ನರೇಂದ್ರ ಮೋದಿ ಯವರು ದೇಶದ ಪ್ರಧಾನ ಮಂತ್ರಿಗಳಾಗಿ 12 ವರ್ಷವಾಗಿದೆ, ನೆಹರುರವರಿಗಿಂತ ಹೆಚ್ಚಿನ ದಿನದಲ್ಲಿ ದೇಶದ ಪ್ರಧಾನ ಮಂತ್ರಿಗಳಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಭಗವಂತ ಮೋದಿಯವರಿಗೆ ಆರೋಗ್ಯ ಮತ್ತು ಆಯಷ್ಯನ್ನು ನೀಡುವುದರ ಮೂಲಕ ದೇಶದ ಸೇವೆಯಲ್ಲಿ ಮತ್ತಷ್ಟು ಭಾಗಿಯಾಗಲಿ ಎಂದ ಅವರು, ಮೋದಿ ನೇತೃತ್ವದ ಸರ್ಕಾರ ಕಳೆದ 12 ವರ್ಷಗಳ ಅವಧಿಯು ದೇಶದ ಜನರ ನಂಬಿಕೆ, ಅಭಿವೃದ್ಧಿ ಮತ್ತು ಜನ ಕಲ್ಯಾಣಕ್ಕೆ ಸಮರ್ಪಿತವಾಗಿದೆ.

140 ಕೋಟಿ ದೇಶವಾಸಿಗಳ ಆಶೀರ್ವಾದ ಮತ್ತು ರಾಷ್ಟ್ರ ಪ್ರಥಮ ಎಂಬ ಭಾವನೆಯೊಂದಿಗೆ, ಸರ್ಕಾರವು ಯುವಕರು, ಮಹಿಳೆಯರು, ರೈತರು ಮತ್ತು ಬಡವರ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸಿದೆ. ಇದರ ಫಲವಾಗಿ ಇಂದು ಭಾರತವು ಜಾಗತಿಕ ಮಟ್ಟದಲ್ಲಿ ಹೊಸ ಗುರುತನ್ನು ಪಡೆದುಕೊಂಡಿದೆ. ಕೇಂದ್ರ ಸರ್ಕಾರವೂ ಕಳೆದ 12 ವರ್ಷಗಳು ನಂಬಿಕೆ, ಪ್ರಗತಿ ಮತ್ತು ಜನಕಲ್ಯಾಣಕ್ಕಾಗಿ ಮುಡಿಪಾಗಿವೆ. ಬಡವರ ಕಲ್ಯಾಣ, ನಾರಿ ಶಕ್ತಿ, ರಾಷ್ಟ್ರ ನಿರ್ಮಾಣ, ಯುವ ಶಕ್ತಿ, ಆರೋಗ್ಯ, ರಾಷ್ಟ್ರ ಪ್ರಥಮ, ರೈತರ ಕಲ್ಯಾಣ, ಮಧ್ಯಮ ವರ್ಗ ಹಾಗೂ ಪರಂಪರೆ ಮತ್ತು ಅಭಿವೃದ್ಧಿ ಆಧಾರಿತ ಸಾಧನೆಗಳನ್ನು ಮುನ್ನೆಲೆಗೆ ತರಲಾಗಿದೆ ಎಂದರು.

ಜನಕಲ್ಯಾಣಕ್ಕೆ ಮೊದಲ ಆದ್ಯತೆ ನೀಡಿರುವ ಸರ್ಕಾರ, ಪ್ರತಿ ತಿಂಗಳು 81 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ (ರೇಷನ್) ನೀಡುತ್ತಿದೆ. ಇದರೊಂದಿಗೆ 4 ಕೋಟಿಗೂ ಹೆಚ್ಚು ಪ್ರಧಾನಮಂತ್ರಿ ಆವಾಸ್ ಮನೆಗಳು, 10.5 ಕೋಟಿಗೂ ಅಧಿಕ ಉಜ್ವಲ ಗ್ಯಾಸ್ ಸಂಪರ್ಕಗಳು ಮತ್ತು 12 ಕೋಟಿ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಕೋಟ್ಯಂತರ ಕುಟುಂಬಗಳ ಜೀವನವನ್ನು ಸುಗಮಗೊಳಿಸಲಾಗಿದೆ. ಮಹಿಳಾ ಸಬಲೀಕರಣದ ಅಡಿಯಲ್ಲಿ 32 ಕೋಟಿಗೂ ಹೆಚ್ಚು ಮಹಿಳೆಯರ ಜನ-ಧನ್ ಖಾತೆಗಳನ್ನು ತೆರೆಯಲಾಗಿದೆ. ಮಹಿಳೆಯರಿಗೆ ಸೇನೆಯಲ್ಲಿ ಕಾಯಂ ಕಮಿಷನ್ ಪಡೆಯುವ ಅವಕಾಶ ಸಿಕ್ಕಿದೆ. ದೇಶದಲ್ಲಿ 3 ಕೋಟಿಗೂ ಹೆಚ್ಚು ಮಹಿಳೆ ಯರು ಲಖಪತಿ ದೀದಿಯರಾಗಿದ್ದಾರೆ. ಅಲ್ಲದೆ, 91 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಮೂಲಕ 10 ಕೋಟಿ ಗ್ರಾಮೀಣ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕರಾದ ಎಸ್.ಕೆ.ಬಸವರಾಜು ಮಾತನಾಡಿ ದೇಶದ 26 ನಗರಗಳಲ್ಲಿ 1,100 ಕಿಲೋಮೀಟರ್ ಗಿಂತಲೂ ಹೆಚ್ಚು ಮೆಟ್ರೋ ನೆಟ್‍ವರ್ಕ್ ಅಭಿವೃದ್ಧಿಪಡಿ ಸಲಾಗಿದೆ. ಸದ್ಯ ದೇಶದಲ್ಲಿ 164 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಅಟಲ್ ಸೇತು, ಸುದರ್ಶನ್ ಸೇತು, ಚೆನಾಬ್ ರೈಲ್ವೆ ಸೇತುವೆ, ಬೋಗಿಬೀಲ್ ಸೇತುವೆ ಮತ್ತು ಪಂಬನ್ ಕಡಲ ಸೇತುವೆಯಂತಹ ಬೃಹತ್ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ದೇಶದಲ್ಲಿದ್ದ ವಿಮಾನ ನಿಲ್ದಾಣಗಳ ಸಂಖ್ಯೆ 74 ರಿಂದ 164 ಕ್ಕೆ ಏರಿಕೆಯಾಗಿದೆ. ಯುವಕರಿಗಾಗಿ ಸುಮಾರು 2 ಕೋಟಿ ಜನರಿಗೆ ಕೌಶಲ್ಯ ತರಬೇತಿ ನೀಡಲಾಗಿದೆ. ಮುದ್ರಾ ಯೋಜನೆಯಡಿ 40 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಾಲ ವಿತರಿಸಲಾಗಿದೆ. ದೇಶದಲ್ಲಿ 2.2 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್‍ಅಪ್‍ಗಳು ಮತ್ತು 10 ಸಾವಿರಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್‍ಗಳು ಹೊಸ ಆವಿಷ್ಕಾರಗಳಿಗೆ ದಾರಿದೀಪವಾಗಿವೆ ಎಂದರು.

ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜನ್ ಮಾತನಾಡಿ, ಆಯುಷ್ಮಾನ್ ಭಾರತ ಯೋಜನೆ ಯಡಿ 60 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ಸುರಕ್ಷತೆ ಒದಗಿಸಲಾಗಿದೆ. 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೂ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆಯ ಲಾಭ ನೀಡಲಾಗುತ್ತಿದೆ. 19 ಸಾವಿರಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳ ಮೂಲಕ ಜನರಿಗೆ ಕೈಗೆಟುಕುವ ದರದಲ್ಲಿ ಔಷಧಿಗಳನ್ನು ವಿತರಿಸಲಾಗುತ್ತಿದೆ. ರೈತರ ಕಲ್ಯಾಣ, ರಾಷ್ಟ್ರೀಯ ಭದ್ರತೆ, ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯನ್ನು ಸರ್ಕಾರದ ಪ್ರಮುಖ ಮೈಲಿಗಲ್ಲುಗಳು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ, ಕಾಶಿ ವಿಶ್ವನಾಥ ಧಾಮ, ಮಹಾಕಾಲ್ ಮಹಾಲೋಕ ಮತ್ತು ಕೇದಾರನಾಥ ಧಾಮಗಳ ಪುನರ್‍ನವೀಕರಣ ಕಾರ್ಯಗಳು ಭಾರತದ ಸಾಂಸ್ಕೃತಿಕ ಪರಂಪರೆ ಹಾಗೂ ಆಧುನಿಕ ಅಭಿವೃದ್ಧಿಯ ಸಮನ್ವಯಕ್ಕೆ ಅತ್ಯುತ್ತಮ ಸಂಕೇತಗಳಾಗಿವೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ದಾವಣಗೆರೆ ಸಹಾ-ಪ್ರಭಾರಿಗಳಾದ ಎ.ಮುರಳಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ಗಳಾದ ಟಿ.ವೆಂಕಟೇಶ್ ಯಾದವ್ ಮೊಹನ್ ಕುಮಾರ್ ಜಿ.ಹೆಚ್, ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷರಾದ ಪರಶುರಾಮ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಬಸವೇಶ್ ಮತ್ತು ಲೀಲಾ ಶಶಿಧರ್,ರಾಜ್ಯ ಮಹಿಳಾ ಮೋರ್ಚ ಪದಾಧಿಕಾರಿಗಳಾದ ಶ್ಯಾಮಲ ಶಿವಪ್ರಕಾಶ್ ಜಿ, ಜಿಲ್ಲಾ ಉಪಾಧ್ಯಕ್ಷರಾದ ಶೈಲಜಾರೆಡ್ಡಿ , ಜಿಲ್ಲಾ ಮಾಧ್ಯಮ ವಕ್ತಾರರಾದ ನಾಗರಾಜ್ ಬೇದ್ರೇ, ನವೀನ್ ಚಾಲುಕ್ಯ ಸೇರಿದಂತೆ ಮುಖಂಡರಾದ ತಿಪ್ಪೇಸ್ವಾಮಿ, ಹರೀಶ್ ಬಿ.ಎಸ್, ಸತೀಶ್, ಮಾರುತಿ, ಮಂಜುಳಮ್ಮ, ಶಾಂತಮ್ಮ ,ವೀಣಾ, ಸುಮ, ಯಶೋದ, ಕಮಲಮ್ಮ, ಅರುಣ, ಬಸಮ್ಮ, ದೇವಿಕಾ, ಚಂದ್ರಿಕಾ ಲೋಕನಾಥ್,ನಗರಮಂಡಲದ ಪದಾಧಿಕಾರಿಗಳು, ಮೋರ್ಚಾ ಅಧ್ಯಕ್ಷರು, ಮೋರ್ಚಾ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ನಂತರ ಸಿಹಿಯನ್ನು ಹಂಚುವುದರ ಮೂಲಕ 12 ವರ್ಷದ ಸಂಭ್ರಮಾಚಾರಣೆಯನ್ನು ಮಾಡಲಾಯಿತು.

Leave a Reply

Your email address will not be published. Required fields are marked *