ಚಿತ್ರದುರ್ಗ ಪಿಎಸ್​ಐ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ? ಕೇಳಿ ಬಂತು ಆರೋಪ.

ಚಿತ್ರದುರ್ಗ, ಮಾರ್ಚ್​ 15: ಚಿತ್ರದುರ್ಗ (Chitraduraga) ನಗರ ಠಾಣೆ ಪಿಎಸ್​ಐ ಗಾದಿಲಿಂಗಪ್ಪ (PSI Gadilingappa) ಮೇಲೆ ಬಿಜೆಪಿ (BJP) ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿ ಘಟನೆ ನಡೆದಿದೆ. ಪಿಎಸ್​ಐ ಗಾದಿಲಿಂಗಪ್ಪ ಅವರ ಕೈ ಬೆರಳಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ತುರುವನೂರು ರಸ್ತೆಯ ಖಾಸಗಿ ಹೋಟೆಲ್ ಬಳಿ ತಡರಾತ್ರಿ ರಸ್ತೆ ಮೇಲೆ ತುಮಕೂರು ಜಿಲ್ಲೆ ಮಧುಗಿರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ ಗುಂಪಾಗಿ ನಿಂತಿದ್ದನ್ನು ಪಿಎಸ್​ಐ ಗಾದಿಲಿಂಗಪ್ಪ ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಎಸ್ಐ ಗಾದಿಲಿಂಗಪ್ಪ ಅವರ ಮೇಲೆ ಹಲ್ಲೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಹನುಮಂತೇಗೌಡ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ, “ಪೊಲೀಸರಿಂದಲೇ‌ ನನ್ನ ಮೇಲೆ ಹಲ್ಲೆ ನಡೆದಿದೆ” ಎಂದು ಹನುಮಂತೇಗೌಡ ಪ್ರತಿ ಆರೋಪ ಮಾಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಎದೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿತ್ರದುರ್ಗ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪಿಎಸ್​ಐ ಅವಾಚ್ಯ ಶಬ್ದಗಳಿಂದ ನಿಂದಿಸಿದರು: ಪ್ರತ್ಯಕ್ಷದರ್ಶಿ

ಘಟನೆ ಸಂಬಂಧ ಬಿಜೆಪಿ ಜಿಲ್ಲಾ ಅಧ್ಯಕ್ಷ ಹನುಮಂತೇಗೌಡರ ಕಾರು ಚಾಲಕ, ಪ್ರತ್ಯಕ್ಷದರ್ಶಿ ರಂಗಸ್ವಾಮಿ ಮಾತನಾಡಿ, ಶುಕ್ರವಾರ (ಮಾ.14) ರಾತ್ರಿ 11:30ರ ಸುಮಾರಿಗೆ ಘಟನೆ ನಡೆದಿದೆ. ಖಾಸಗಿ ಹೋಟೆಲ್​​ನಲ್ಲಿ ಊಟ ಮಾಡಿ ಹೊರಡಲು ನಿಂತಿದ್ದೆವು. ಹನುಮಂತೇಗೌಡರ ಜತೆಗೆ ಇಬ್ಬರು ಸ್ನೇಹಿತರು ಇದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಗಾದಿಲಿಂಗಪ್ಪ ಅವರು “ರಾತ್ರಿ ಇಷ್ಟೊತ್ತಾದರೂ ಏಕೆ ನಿಂತಿದ್ದೀರೋ ಎಂದು ಪ್ರಶ್ನಿಸಿದರು. ಸರ್ ಹೊರಡುತ್ತಿದ್ದೇವೆ ಎಂದರೂ ಏಕವಚನದಲ್ಲೇ ಗದರಿದರು. ನಾನು ಬಿಜೆಪಿ ಜಿಲ್ಲಾದ್ಯಕ್ಷ, ಗೌರವಯುತವಾಗಿ ಮಾತಾಡಿ ಎಂದು ಹನುಮಂತೇಗೌಡ ಹೇಳಿದರು. ಆದರೂ, ಪಿಎಸ್​ಐ ಗಾದಿಲಿಂಗಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಆಗ ನೂಕಾಟ ತಳ್ಳಾಟ ನಡೆಯಿತು, ಪಿಎಸ್​ಐ ಹಲ್ಲೆ ಮಾಡಿದರು. ಪಿಎಸ್​ಐ ಮೇಲೆ ಹನುಮಂತೇಗೌಡ ಹಲ್ಲೆ ಮಾಡಿಲ್ಲ. ಎದೆನೋವು ಕಾರಣಕ್ಕೆ ಹನುಮಂತೇಗೌಡ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ” ಎಂದು ಹೇಳಿದರು.

Source : https://tv9kannada.com/karnataka/chitradurga/allegation-tumkur-bjp-district-president-assault-on-chitradurga-psi-kannada-news-vkb-991530.html

Leave a Reply

Your email address will not be published. Required fields are marked *