ICC U19 World Cup 2023: ಟೀಮ್ ಇಂಡಿಯಾ ವಿಶ್ವ ಚಾಂಪಿಯನ್​

ICC U19 World Cup 2023: Team India New World Champion

India Women U19 vs England Women U19, Final: ಸೌತ್ ಆಫ್ರಿಕಾದಲ್ಲಿ ನಡೆದ ಅಂಡರ್ 19 ಮಹಿಳಾ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ7 ವಿಕೆಟ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ವಿಶ್ವಕಪ್​ ಅನ್ನು ತನ್ನದಾಗಿಸಿಕೊಂಡಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತ ತಂಡದ ನಾಯಕಿ ಶಫಾಲಿ ವರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟೀಮ್ ಇಂಡಿಯಾ ಯುವತಿಯರು ಯಶಸ್ವಿಯಾದರು.

ಮೊದಲ ಓವರ್​ನ ನಾಲ್ಕನೇ ಎಸೆತದಲ್ಲೇ ಲಿಬರ್ಟಿ ಹೀಪ್ (0) ವಿಕೆಟ್ ಪಡೆದು ಟಿಟಾಸ್ ಸಾಧು ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಫಿಯೋನಾ ಹಾಲೆಂಡ್​ (10) ರನ್ನು ಅರ್ಚನಾ ದೇವಿ ಕ್ಲೀನ್ ಬೌಲ್ಡ್ ಮಾಡಿದರು. ಅಷ್ಟೇ ಅಲ್ಲದೆ ಅದೇ ಓವರ್​ನ ಅಂತಿಮ ಎಸೆತದಲ್ಲಿ ಇಂಗ್ಲೆಂಡ್ ನಾಯಕಿ ಗ್ರೇಸ್ ಸ್ಕ್ರಿವೆನ್ಸ್ (4) ಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ಅರ್ಚನಾ ಯಶಸ್ವಿಯಾದರು.

ಇತ್ತ ಕೇವಲ 16 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್ ತಂಡಕ್ಕೆ ರಯಾನಾ ಮ್ಯಾಕ್​ಡೊನಾಲ್ಡ್ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ 19 ರನ್​ ಬಾರಿಸುವ ಮೂಲಕ ರಯಾನಾ ತಂಡದ ಮೊತ್ತವನ್ನು 50 ರ ಗಡಿದಾಟಿಸಿದರು.

ಆದರೆ ಮತ್ತೊಂದೆಡೆ ಇಂಗ್ಲೆಂಡ್ ಆಟಗಾರ್ತಿಯರ ಪೆವಿಲಿಯನ್ ಪರೇಡ್ ಮುಂದುವರೆದಿತ್ತು. ಪರಿಣಾಮ 17.1 ಓವರ್​ಗಳಲ್ಲಿ ಇಂಗ್ಲೆಂಡ್ ತಂಡ 68 ರನ್​ಗಳಿಗೆ ಸರ್ವಪತನ ಕಂಡಿತು. ಟೀಮ್ ಇಂಡಿಯಾ ಪರ ಟಿಟಾಸ್ ಸಾಧು, ಅರ್ಚನಾ ದೇವಿ ಹಾಗೂ ಪಾರ್ಶವಿ ಚೋಪ್ರಾ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.

ಕೇವಲ 69 ರನ್​ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾಗೆ ಶಫಾಲಿ ವರ್ಮಾ ಸ್ಪೋಟಕ ಆರಂಭ ಒದಗಿಸಿದರು. ಮೊದಲ 2 ಓವರ್​ಗಳಲ್ಲಿ 1 ಫೋರ್ ಹಾಗೂ 1 ಸಿಕ್ಸ್ ಬಾರಿಸಿ ಶಫಾಲಿ 16 ರನ್ ಕಲೆಹಾಕಿದ್ದರು. ಆದರೆ ಬಿರುಸಿನ ಆಟಕ್ಕೆ ಮುಂದಾದ ಶಫಾಲಿ 3ನೇ ಓವರ್​ನಲ್ಲಿ ಔಟಾದರು. ಇದರ ಬೆನ್ನಲ್ಲೇ ಶ್ವೇತಾ ಸೆಹ್ರಾವತ್ (5) ಕೂಡ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಯಾದ ಸೌಮ್ಯ ತಿವಾರಿ ಹಾಗೂ ತ್ರಿಶಾ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಮೊದಲ 10 ಓವರ್​ಗಳಲ್ಲಿ ಟೀಮ್ ಇಂಡಿಯಾ 48 ರನ್​ ಕಲೆಹಾಕಿತು. ಇನ್ನು ಗೆಲುವಿನ ಹೊಸ್ತಿಲಲ್ಲಿದ್ದಾಗ 24 ರನ್​ಗಳಿಸಿದ್ದ ತ್ರಿಶಾ ಔಟಾದರು.

ಅಂತಿಮವಾಗಿ 14 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 69 ರನ್​ಗಳಿಸುವ ಮೂಲಕ ಟೀಮ್ ಇಂಡಿಯಾ 7 ವಿಕೆಟ್​ಗಳ ಜಯಭೇರಿ ಬಾರಿಸಿತು. ಈ ಮೂಲಕ ಚೊಚ್ಚಲ ಮಹಿಳಾ ಅಂಡರ್ 19 ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವು ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ಟೀಮ್ ಇಂಡಿಯಾ WU19 ಪ್ಲೇಯಿಂಗ್ 11: ಶಫಾಲಿ ವರ್ಮಾ (ನಾಯಕಿ) , ಶ್ವೇತಾ ಸೆಹ್ರಾವತ್ , ಸೌಮ್ಯ ತಿವಾರಿ , ಗೊಂಗಡಿ ತ್ರಿಶಾ , ರಿಚಾ ಘೋಷ್ ( ವಿಕೆಟ್ ಕೀಪರ್ ) , ಹೃಷಿತಾ ಬಸು , ಟಿಟಾಸ್ ಸಾಧು , ಮನ್ನತ್ ಕಶ್ಯಪ್ , ಅರ್ಚನಾ ದೇವಿ , ಪಾರ್ಶವಿ ಚೋಪ್ರಾ , ಸೋನಮ್ ಯಾದವ್.

ಇಂಗ್ಲೆಂಡ್ WU19 ಪ್ಲೇಯಿಂಗ್ 11: ಗ್ರೇಸ್ ಸ್ಕ್ರಿವೆನ್ಸ್ (ನಾಯಕಿ) , ಲಿಬರ್ಟಿ ಹೀಪ್ , ನಿಯಾಮ್ ಫಿಯೋನಾ ಹಾಲೆಂಡ್ , ಸೆರೆನ್ ಸ್ಮೇಲ್ (ವಿಕೆಟ್ ಕೀಪರ್) , ರಿಯಾನಾ ಮ್ಯಾಕ್​ಡೊನಾಲ್ಡ್ ಗೇ , ಚಾರಿಸ್ ಪಾವೆಲಿ , ಅಲೆಕ್ಸಾ ಸ್ಟೋನ್‌ಹೌಸ್ , ಸೋಫಿಯಾ ಸ್ಮೇಲ್ , ಜೋಸಿ ಗ್ರೋವ್ಸ್ , ಎಲ್ಲೀ ಆಂಡರ್ಸನ್ , ಹನ್ನಾ ಬೇಕರ್.

 

 

source https://tv9kannada.com/sports/cricket-news/icc-u19-world-cup-2023-team-india-new-world-champion-kannada-news-zp-au50-510599.html

Leave a Reply

Your email address will not be published. Required fields are marked *